ಬೆಂಗಳೂರು: ಪ್ರವಾಹದಿಂದ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸುಮಾರು 8 ಸಾವಿರ ಕೋಟಿ ರೂ. ಆಸ್ತಿ ಹಾನಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರವಾಹದಿಂದಾಗಿ ರಸ್ತೆ, ಬ್ರಿಡ್ಜ್ ಸೇರಿದಂತೆ ಸಾಕಷ್ಟು ಆಸ್ತಿ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 644 ಕಿ.ಮೀ., ರಾಜ್ಯ ಹೆದ್ದಾರಿ- 1166 ಕಿ.ಮೀ., ಎಂಡಿಆರ್-2341 ಕಿ.ಮೀ., ಸಿಡಿ ವರ್ಕ್ಸ್ ಮತ್ತು ಬ್ರಿಡ್ಜ್- ರಾಷ್ಟ್ರೀಯ ಹೆದ್ದಾರಿಯಲ್ಲಿ 34 ಬ್ರಿಡ್ಜ್ಗಳು, ರಾಜ್ಯ ಹೆದ್ದಾರಿಯಲ್ಲಿ 432 ಬ್ರಿಡ್ಜ್ಗಳು, ಎಂಡಿಆರ್‌ನಲ್ಲಿ 699 ಬ್ರಿಡ್ಜ್ ಗಳು ಹಾಗೂ ಸಿಡಿ ವರ್ಕ್ಸ್ಗಳು ಹಾನಿಯಾಗಿವೆ.
ಪ್ರವಾಹದಿಂದ ಸಂಪರ್ಕ ಕಡಿತ ಆಗಿರುವ ಪ್ರದೇಶಗಳಿಗೆ ಶೀಘ್ರ ಸಂಪರ್ಕ ಕಲ್ಪಿಸಲು ತುರ್ತು ರಿಪೇರಿ ಮಾಡಿ ಮರು ಸಂಪರ್ಕ ಮಾಡಲು 500 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ರಸ್ತೆಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಅಧಿಕಾರಿಗಳಿಗೆ ಎಚ್ಚರಿಕೆ: ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್‌ಗಳು ಪ್ರತಿದಿನ ಬೆಳಿಗ್ಗೆ ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು. ನಂತರ ಮಧ್ಯಾಹ್ನ ಕಚೇರಿ ಕೆಲಸ ಮಾಡಬೇಕು. ಪ್ರತಿ ಅಧಿಕಾರಿಯೂ ತಾವು ಎಷ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದೆವು ಎನ್ನುವುದನ್ನು ಪ್ರತಿ ತಿಂಗಳು ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಅಧಿಕಾರಿಗಳು ಕೆಲಸ ಮಾಡುವ ಹೆಡ್ ಕ್ವಾಟರ್ಸ್‌ನಲ್ಲಿಯೇ ವಾಸ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣದಿಂದ ಕೌಶಲ್ಯ ತರಬೇತಿಗೆ ಆದ್ಯತೆ: ಸಮಾಜ ಕಲ್ಯಾಣ ಇಲಾಖೆ ಮೂಲಕ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಡ್ರೈವಿಂಗ್ ತರಬೇತಿ, ಪೊಲೀಸ್ ಹಾಗೂ ಮಿಲಿಟರಿಗೆ ಆಯ್ಕೆ ತರಬೇತಿ, ಎಎನ್‌ಎಂ, ಪ್ಯಾರಾ ಮೆಡಿಕಲ್, ಮೊಬೈಲ್, ಟಿವಿ ರಿಪೇರಿ, ಕಟ್ಟಡ ನಿರ್ಮಾಣ, ಪ್ಲಂಬರ್, ಪ್ಲಾಸ್ಟರಿಂಗ್ ತರಬೇತಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು. ಅಕ್ಟೋಬರ್‌ನಲ್ಲಿ ಬಜೆಟ್ ಮಂಡನೆ ಮಾಡಲು ತೀರ್ಮಾನಿಸಿರುವುದರಿಂದ ಆ ಸಂದರ್ಭದಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗುವುದು ಎಂದು ಹೇಳಿದರು.