ಭಾರತದಲ್ಲಿ ಬ್ಯಾಡ್ಮಿಂಟನ್ ಅಲೆಯನ್ನು ಹೆಚ್ಚಿಸಿರುವ ಖ್ಯಾತಿ ಪಿ.ವಿ. ಸಿಂಧುಗೆ ಸಲ್ಲುತ್ತದೆ. ಈಕೆ ಜಗತ್ತಿನ ಎಲ್ಲಾ ಅಗ್ರ ಶ್ರೇಯಾಂಕಿತ ಆಟಗಾರ್ತಿಯರ ವಿರುದ್ಧ ಗೆದ್ದ ಇತಿಹಾಸ ಹೊಂದಿದ್ದಾರೆ. ಅಷ್ಟೇ ಅಲ್ಲ, ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು, ಇತಿಹಾಸ ನಿರ್ಮಿಸಿದ್ದಾರೆ. 2020ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ಗೂ ಭಾರತಕ್ಕೆ ಪದಕ ತರಬಲ್ಲ ಆಟಗಾರ್ತಿ ಎಂಬ ನಂಬಿಕೆಯೂ ಈಕೆಯ ಮೇಲಿದೆ. ಆದರೆ, ಈಕೆ ಫೈನಲ್‌ವರೆಗೂ ಏರಿ ಫೈನಲ್‌ನಲ್ಲಿ ಎಡವುತ್ತಿರು ವುದು ಟೋಕಿಯೋದಲ್ಲಿ ಪದಕ ಗೆಲ್ಲುತ್ತಾಳ್ಳೋ, ಇಲ್ಲವೋ ಅನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಹೌದು, ಸದ್ಯ ಎಲ್ಲಾ ಕ್ರೀಡಾ ಪಟುಗಳ ದೃಷ್ಟಿ ಟೋಕಿಯೋ ಒಲಿಂಪಿಕ್ಸ್ ಮೇಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ಮೈಚಳಿ ಬಿಟ್ಟು ನಾನಾರೀತಿಯ ತರಬೇತಿ, ಅಭ್ಯಾಸ ನಡೆಸುತ್ತಿದ್ದಾರೆ. ಬ್ಯಾಡ್ಮಿಂಟನ್ ಕ್ರೀಡೆಯಿಂದ ಮುಂಬರುವ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಕಾಂಕ್ಷಿಗಳು ಎಂದರೆ ಸಿಂಧು, ಸೈನಾ, ಕೆ.ಶ್ರೀಕಾಂತ್, ಬಿ. ಸಾಯಿ ಪ್ರಣೀತ್. ಅದರಲ್ಲಿಯೂ ಸಿಂಧು ಮೇಲೆ ವಿಶೇಷ ದೃಷ್ಟಿಯಿದೆ. ಯಾಕೆಂದರೆ, ಈಕೆ ಯಾವ ಆಟಗಾರ್ತಿ ವಿರುದ್ಧ ಬೇಕಾದರೂ ಗೆಲ್ಲುವ ಸಾಮರ್ಥ್ಯ ಹೊಂದಿದವಳು. ಅದನ್ನು ಸಾಬೀತು ಮಾಡಿದ್ದಾಳೆ ಕೂಡ. ಹೀಗಾಗಿ ಸಿಂಧು ಮತ್ತೂಂದು ಒಲಿಂಪಿಕ್ಸ್ ಪದಕ ಗೆಲ್ಲುತ್ತಾಳೆ ಅನ್ನುವ ಭರವಸೆ ಭಾರತೀಯರದು. ಆದರೆ ಆಕೆ ಫೈನಲ್ ಪಂದ್ಯಗಳಲ್ಲಿ ಪದೇ ಪದೇ ಸೋಲುತ್ತಿರುವುದು ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸಿದೆ.
ಸಿಂಧು ಇಲ್ಲಿಯವರೆಗೆ ಮೂರು ಸೂಪರ್ ಸೀರೀಸ್ ಪ್ರಶಸ್ತಿ ಸೇರಿದಂತೆ ಒಟ್ಟು 10 ಮಹತ್ವದ ಕೂಟದಲ್ಲಿ ಚಾಂಪಿಯನ್ ಆಗಿದ್ದಾರೆ. ಆದರೆ ದುರಾದೃಷ್ಟವಶಾತ್ ಅಷ್ಟೇ ಪ್ರಮಾಣದಲ್ಲಿ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಅದರಲ್ಲಿಯೂ ಕಳೆದ ವರ್ಷದಿಂದ ಫೈನಲ್‌ನಲ್ಲಿ ಸೋಲುವ ಚಾಳಿ ಮುಂದುವರಿಯುತ್ತಿದೆ. ಇತ್ತೀಚೆಗೆ ನಡೆದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿಯೂ ಇದೇ ಪುನಾರಾವರ್ತನೆಯಾಗಿದೆ.
2017ರಲ್ಲಿ ವಿಶ್ವಚಾಂಪಿಯನ್‌ಶಿಪ್, ಹಾಂಕಾಂಗ್ ಓಪನ್, ಸೂಪರ್ ಸೀರೀಸ್ ಫೈನಲ್ಸ್ ಕೂಟದಲ್ಲಿ ಫೈನಲ್‌ವರೆಗೂ ಏರಿ ಸೋಲುಂಡಿದ್ದಾರೆ. ಫೈನಲ್ ಹಂತದವರೆಗೂ ಅದ್ಭುತ ಪ್ರದರ್ಶನ ನೀಡುವ ಸಿಂಧು ಪ್ರಶಸ್ತಿ ಸುತ್ತಿನಲ್ಲಿ ಎಡುವುತ್ತಿರುವುದು ಯಾಕೆ ಅನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಮುಂಬರುವ ಕೂಟಗಳಲ್ಲಿ ಆದರೂ ಆಕೆ ಎಡವದಿರಲಿ ಎಂಬುದೇ ಅಭಿಮಾನಿಗಳ ಆಸೆ.
ಫಿಟ್ನೆಸ್ ಸಮಸ್ಯೆ ಇಲ್ಲ
ಸಿಂಧುಗೆ ಫಿಟೆ°ಸ್ ಸಮಸ್ಯೆ ಇಲ್ಲ. ಗುರು ಗೋಪಿಚಂದ್ ಮಾರ್ಗದರ್ಶನದಲ್ಲಿ ಈಕೆ ಕಠಿಣ ತರಬೇತಿ ನಡೆಸುತ್ತಾಳೆ. ಆಹಾರ ಸೇವನೆ ವಿಚಾರದಲ್ಲಿಯೂ ತುಂಬಾ ಕಟ್ಟು ನಿಟ್ಟು. ಯೋಗ, ಜಿಮ್, ಸ್ವಿಮ್ಮಿಂಗ್, ರನ್ನಿಂಗ್…. ನಿಂದಾಗಿ ಸದಾ ಫಿಟೆ°ಸ್ ಕಾಯ್ದುಕೊಂಡಿದ್ದಾಳೆ. ಆಕೆ ನಿರಂತರವಾಗಿ ಕೂಟಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಆಗಾಗ ಬಿಡುವು ಪಡೆಯುತ್ತಾಳೆ. ಇದು, ಆಕೆಯ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದರೂ, ಗಾಯಕ್ಕೆ ತುತ್ತಾಗುವುದನ್ನು ನಿಯಂತ್ರಿಸುತ್ತಿದೆ.