Advertisement

ಪಿವಿಎಸ್‌ ವೃತ್ತ: ಸಾರ್ವಜನಿಕ ಶೌಚಾಲಯದ ದುರಸ್ತಿ ಆರಂಭ 

12:49 PM Nov 02, 2017 | Team Udayavani |

ಕೊಡಿಯಾಲ್‌ಬೈಲ್‌: ಇಲ್ಲಿನ ಪಿವಿಎಸ್‌ ವೃತ್ತದ ಬಳಿಯಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದ ಮುಂಭಾಗದಲ್ಲಿ ಹಲವು ತಿಂಗಳಿನಿಂದ ನಿರುಪಯುಕ್ತವೆನಿಸಿಕೊಂಡಿದ್ದ ಸಾರ್ವಜನಿಕ ಶೌಚಾಲಯವು ಜನರ ಬಳಕೆಗೆ ಲಭಿಸುವ ದಿನಗಳು ಹತ್ತಿರವಾಗುತ್ತಿವೆ. ಇದರ ದುಃಸ್ಥಿತಿ ಬಗ್ಗೆ ಉದಯವಾಣಿ ಸುದಿನ ಪ್ರಕಟಿಸಿದ್ದ ವರದಿಯಿಂದ ಎಚ್ಚೆತ್ತಿರುವ ಪಾಲಿಕೆಯು
ದುರಸ್ತಿ ಕಾರ್ಯವನ್ನು ಆರಂಭಿಸಿದೆ.

Advertisement

‘ಬಿಜೆಪಿ ಜಿಲ್ಲಾ ಕಚೇರಿ ಸಮೀಪದಲ್ಲೇ ಗಬ್ಬು ನಾರುವ ಶೌಚಾಲಯ- ಸ್ವಚ್ಛಭಾರತದ ಹೆಸರಲ್ಲಿ ಬೀದಿ ಗುಡಿಸಿದವರು ಇಲ್ಲೇಕೆ ಮೌನ?’ ಶೀರ್ಷಿಕೆಯಲ್ಲಿ ಅ.30ರಂದು ‘ಪ್ರಕಟಗೊಂಡಿದ್ದ ವರದಿ ಸಾರ್ವಜನಿಕ ಮತ್ತು ಆಡಳಿತ ವಲಯದಲ್ಲಿ ಸಾಕಷ್ಟು ಚರ್ಚೆ ಮತ್ತು ಟೀಕೆಗೆ ಎಡೆಮಾಡಿತ್ತು.

ವರದಿ ಪ್ರಕಟವಾದ ಮರುದಿನವೇ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಎಂಜಿನಿಯರ್‌ಗಳು ಶೌಚಾಲಯದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಶೌಚಾಲಯದ ಮೇಲ್ಛಾವಣಿ ಕೂಡ ಸೋರುತ್ತಿದ್ದು, ಅದನ್ನು ದುರಸ್ತಿ ಮಾಡಬೇಕಿದೆ. ಜತೆಗೆ ಪೇಂಟಿಂಗ್‌ ಮಾಡಲೂ ಪಾಲಿಕೆ ಅಧಿಕಾರಿಗಳು ತೀರ್ಮಾನಿಸಿದ್ದು, ಅದರ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಪ್ರಸ್ತುತ ಮೂವರು ಶೌಚಾಲಯವನ್ನು ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಪತ್ರಿಕೆಯ ವರದಿಯು ಭಾರೀ ಸಂಚಲನ ಮೂಡಿಸಿತ್ತು. ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸುವುದು
ಪಾಲಿಕೆ ಕರ್ತವ್ಯ ಎಂದು ಬಿಜೆಪಿಯವರು ಹೇಳಿದ್ದರೆ, ಸ್ವಚ್ಛ ಭಾರತದ ಅಭಿಯಾನವನ್ನು ಪರಿಣಾಮಕಾರಿಯಾಗಿ ನಗರ
ದೆಲ್ಲೆಡೆ ಅನುಷ್ಠಾನಗೊಳಿಸುವುದಕ್ಕೆ ಕೈಜೋಡಿಸುತ್ತಿರುವ ಬಿಜೆಪಿಯವರು ತಮ್ಮ ಕಚೇರಿ ಮುಂಭಾಗದ ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಕಡೆಗೂ ಗಮನಹರಿಸಬೇಕಿತ್ತುಎನ್ನುವುದು ಕಾಂಗ್ರೆಸ್‌ ಮುಖಂಡರ ವಾದವಾಗಿತ್ತು. ಏನಿದ್ದರೂ, ರಾಜಕೀಯ ಮುಖಂಡರ ಆರೋಪ-ಪ್ರತ್ಯಾರೋಪದ ನಡುವೆ ಈಗ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಕೊಂಡಿರುವುದು ಸಮಾಧಾನಕರ ಸಂಗತಿ. ಈ ನಡುವೆ ಶೌಚಾಲಯವು ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿದ್ದರೂ, ‘ಇದು ಸಾರ್ವಜನಿಕ ಶೌಚಾಲಯವಾಗಿರುವುದರಿಂದ ಅದನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ಮಹಾನಗರ ಪಾಲಿಕೆ ಜವಾಬ್ದಾರಿ’ ಎಂದು ಸ್ಥಳೀಯ ಕಾರ್ಪೊರೇಟರ್‌ ಮೇಲೂ ಬಿಜೆಪಿ ಮುಖಂಡರು ಒತ್ತಡ ಹೇರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next