Advertisement

ವನಿತಾ ಕೋಚ್‌ ಹುದ್ದೆಗೆ ಹ್ಯುನ್‌ ರಾಜೀನಾಮೆ

10:46 PM Sep 24, 2019 | mahesh |

ಹೊಸದಿಲ್ಲಿ: ಭರವಸೆಯ ಶಟ್ಲರ್‌ ಪಿವಿ ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್‌ ಪಂದ್ಯಾಟದ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ದಕ್ಷಿಣ ಕೊರಿಯ ಮೂಲದ ಕಿಮ್‌ ಜಿ ಹ್ಯುನ್‌ ಅವರು ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ವನಿತಾ ಸಿಂಗಲ್ಸ್‌ ಕೋಚ್‌ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹ್ಯುನ್‌ ಅವರ ಹಠಾತ್‌ ನಿರ್ಗಮನದಿಂದಾಗಿ ಸಿಂಧು ಅವರ ಟೋಕಿಯೊ ಒಲಿಂಪಿಕ್ಸ್‌ ಸಿದ್ಧತೆಗೆ ಹೊಡೆತ ಬೀಳುವ ಸಾಧ್ಯತೆಯಿದೆ.

Advertisement

45ರ ಹರೆಯದ ಬುಸಾನ್‌ ಮೂಲದ ಹ್ಯುನ್‌ ಅವರು ತನ್ನ ಪತಿ ರಿಚೀ ಮಾರ್ರ ಅವರನ್ನು ನೋಡಿಕೊಳ್ಳಲು ನ್ಯೂಜಿಲ್ಯಾಂಡಿಗೆ ಧಾವಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾರ್ರ ಅವರಿಗೆ ನರಕ್ಕೆ ಸಂಬಂಧಿಸಿ ಸ್ಟ್ರೋಕ್‌ ಆಗಿದೆ.

ಈ ವರ್ಷದ ಆರಂಭದಲ್ಲಿ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಹ್ಯುನ್‌ ಅವರನ್ನು ಕೋಚ್‌ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಹ್ಯುನ್‌ ಅವರ ಸಮರ್ಥ ಮಾರ್ಗದರ್ಶನದಿಂದ ಸಿಂಧು ತನ್ನ ಆಟದಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡರಲ್ಲದೇ ಇನ್ನಷ್ಟು ಬಲಿಷ್ಠರಾಗತೊಡಗಿದರು. ಅವರ ಉಪಸ್ಥಿತಿ, ಸಲಹೆ, ಮಾರ್ಗದರ್ಶನದ ಫ‌ಲವಾಗಿ ಸಿಂಧು ಕಳೆದ ತಿಂಗಳು ಬಾಸೆಲ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು.

“ಇದು ನಿಜ. ಪತಿಯ ಅನಾರೋಗ್ಯ ದಿಂದಾಗಿ ಕಿಮ್‌ ರಾಜೀನಾಮೆ ನೀಡ ಬೇಕಾಯಿತು. ವಿಶ್ವ ಪಂದ್ಯಾಟದ ವೇಳೆ ಅವರಿಗೆ ಸ್ಟ್ರೋಕ್‌ ಆಗಿತ್ತು. ಹಾಗಾಗಿ ಹ್ಯುನ್‌ ತವರಿಗೆ ಧಾವಿಸಬೇಕಾಯಿತು. ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳಲು 4ರಿಂದ 6 ತಿಂಗಳು ಬೇಕಾಗಬಹುದು ಎಂದು ಭಾರತ ತಂಡದ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಹೇಳಿದ್ದಾರೆ.

ಮೂರನೇ ಕೋಚ್‌
ಆಶ್ಚರ್ಯವೆಂಬಂತೆ ಹ್ಯುನ್‌ ಅವರು ಅವಧಿ ಮುಗಿಯದೇ ರಾಜೀನಾಮೆ ನೀಡಿದ ಭಾರತದ ಮೂರನೇ ವಿದೇಶಿ ಕೋಚ್‌ ಆಗಿದ್ದಾರೆ. ಈ ಮೊದಲು ಇಂಡೋನೇಶ್ಯದ ಮುಲೊ ಹ್ಯಾಂಡೊಯೊ ಮತ್ತು ಮಲೇಶ್ಯದ ತಾನ್‌ ಕಿಮ್‌ ಹರ್‌ ಅವರು ರಾಜೀನಾಮೆ ನೀಡಿದ್ದರು.

Advertisement

ಪತ್ರ ಕೈಗೆ ಸಿಕ್ಕಿಲ್ಲ
ಕಿಮ್‌ ಹ್ಯುನ್‌ ಅವರಿಂದ ಇಷ್ಟರವರೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಅಥವಾ ಅಸೋಸಿಯೇಶನ್‌ನ ಆಡಳಿತ ಮಂಡಳಿಗೆ ರಾಜೀನಾಮೆ ಪತ್ರ ಬಂದಿಲ್ಲ ಎಂದು ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಘಾನಿಯ ಹೇಳಿದ್ದಾರೆ. ಕಿಮ್‌ ಅವರ ಪತಿಗೆ ಹುಷಾರಿಲ್ಲವೆಂದು ಗೊತ್ತಿದೆ. ಆದರೆ ಅವರಿಂದ ನಾವು ರಾಜೀನಾಮೆ ಪತ್ರ ಬಂದಿಲ್ಲ. ಎಂದವರು ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಇನ್ನು 10 ತಿಂಗಳಲ್ಲಿ ಮತ್ತು ಒಲಿಂಪಿಕ್ಸ್‌ ಅರ್ಹತಾ ಸುತ್ತು ಕೂಡ ಸದ್ಯ ನಡೆಯುತ್ತಿರುವ ಕಾರಣ ನಾವು ತತ್‌ಕ್ಷಣ ಹ್ಯುನ್‌ ಬದಲಿಗೆ ಬೇರೆ ಕೋಚ್‌ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಹ್ಯುನ್‌ ಅವರಿಗೆ ಸರಿಹೊಂದುವಂತಹ ಕೋಚ್‌ಗಾಗಿ ಹುಡುಕಾಟದಲ್ಲಿದ್ದೇವೆ.
-ಪುಲ್ಲೇಲ ಗೋಪಿಚಂದ್‌, ಭಾರತೀಯ ತಂಡದ ಮುಖ್ಯ ಕೋಚ್‌

ಕಿಮ್‌ ಅವರು ಈ ಹಂತದಲ್ಲಿ ನಿರ್ಗಮಿಸುತ್ತಿರುವುದು ದುರದೃಷ್ಟಕರ. ಅವರ ಪತಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರೊಂದಿಗೆ ನನ್ನ ಕ್ರಿಡಾ ಸಂಬಂಧ ಉತ್ತಮವಾಗಿತ್ತು. ಅವರ ವಿಶೇಷ ಆಸಕ್ತಿ, ಸಲಹೆಯಿಂದ ಉತ್ತಮ ಸಾಧನೆ ಮಾಡುವಂತಾಯಿತು.
-ಪಿವಿ ಸಿಂಧು, ಶಟ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next