Advertisement

ವಿಶ್ವ  ಬ್ಯಾಡ್ಮಿಂಟನ್‌ ಪಂದ್ಯಾವಳಿ: ಸಿಂಧು ಸೆಮಿಗೆ; ಪದಕ ಖಾತ್ರಿ

06:00 AM Aug 04, 2018 | |

ನಾಂಜಿಂಗ್‌ (ಚೀನ): ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ. ಸಿಂಧು ಪದಕವೊಂದನ್ನು ಖಚಿತಪಡಿಸಿದ್ದಾರೆ. ಭಾರತದ ಪಾಲಿಗೆ ಸೋಲಿನ ದಿನವಾಗಿದ್ದ ಶುಕ್ರವಾರದ ಕೊನೆಯಲ್ಲಿ ಈ ಕಂಟಕವನ್ನು ನಿವಾರಿಸಿದ ಸಿಂಧು ವನಿತಾ ಸಿಂಗಲ್ಸ್‌ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಇದರಿಂದ ಕನಿಷ್ಠ ಕಂಚಿನ ಪದಕವೊಂದು ಈ ಆಟಗಾರ್ತಿಯ ಕೊರಳನ್ನು ಅಲಂಕರಿಸಲಿದೆ.

Advertisement

ಶುಕ್ರವಾರದ ಪಂದ್ಯಗಳಲ್ಲಿ ಸೈನಾ ನೆಹ್ವಾಲ್‌, ಅಶ್ವಿ‌ನಿ ಪೊನ್ನಪ್ಪ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ, ಬಿ. ಸಾಯಿ ಪ್ರಣೀತ್‌… ಇವರೆಲ್ಲ ಸೋತು ಭಾರತದ ಪಾಳೆಯದಲ್ಲಿ ಹತಾಶ ವಾತಾವರಣ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಆಶಾಕಿರಣವಾಗಿ ಮೂಡಿಬಂದ ಸಿಂಧು ಜಪಾನಿನ ನಜೋಮಿ ಒಕುಹರಾ ವಿರುದ್ಧ ದಿಟ್ಟ ಪ್ರದರ್ಶನ ನೀಡಿ 21-17, 21-19 ಅಂತರದ ರೋಮಾಂಚಕ ಗೆಲುವನ್ನು ಒಲಿಸಿಕೊಂಡರು. ಎರಡೂ ಗೇಮ್‌ಗಳಲ್ಲಿ ಆರಂಭಿಕ ಹಿನ್ನಡೆ ಕಂಡರೂ ಎದೆಗುಂದದೆ ಆಡಿ ಸೆಮಿಫೈನಲ್‌ಗೆ ಮುನ್ನುಗ್ಗುವಲ್ಲಿ ಯಶಸ್ವಿಯಾದರು.

ಪಿ.ವಿ. ಸಿಂಧು ಈವರೆಗೆ 2013, 2014ರಲ್ಲಿ ಕಂಚಿನ ಪದಕ, 2017ರಲ್ಲಿ ಬೆಳ್ಳಿ ಪದಕ ಗೆದ್ದು ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಶನಿವಾರದ ಸೆಮಿಫೈನಲ್‌ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ವಿರುದ್ಧ ಆಡಲಿದ್ದಾರೆ.

ಸೈನಾ, ಅಶ್ವಿ‌ನಿ-ಸಾತ್ವಿಕ್‌ ನಿರ್ಗಮನ
ಶುಕ್ರವಾರ ಬೆಳಗ್ಗೆ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೈನಾ ನೆಹ್ವಾಲ್‌ 2 ಬಾರಿಯ ಚಾಂಪಿಯನ್‌ ಕ್ಯಾರೋಲಿನಾ ಮರಿನ್‌ಗೆ ಶರಣಾಗಿ ಹೊರಬಿದ್ದರು. ರಿಯೋ ಒಲಿಂಪಿಕ್‌ ಚಾಂಪಿಯನ್‌ ಕೂಟ ಆಗಿರುವ ಸ್ಪೇನಿನ ಮರಿನ್‌ 21-6, 21-11 ಅಂತರದಿಂದ ಸೈನಾಗೆ ಸೋಲುಣಿಸಿದರು. 

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನ್‌ ಪೊನ್ನಪ್ಪ-ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಆಟ ಕೂಡ ಕ್ವಾರ್ಟರ್‌ ಫೈನಲ್‌ನಲ್ಲೇ ಕೊನೆಗೊಂಡಿತು. ಚೀನೀ ಜೋಡಿಯಾದ ಜೆಂಗ್‌ ಸಿವೀ-ಹ್ವಾಂಗ್‌ ಯಾಕಿಯೋಂಗ್‌ 21-17, 21-10 ನೇರ ಗೇಮ್‌ಗಳಲ್ಲಿ ಭಾರತೀ‌ಯರನ್ನು ಹಿಮ್ಮೆಟ್ಟಿಸಿತು. 

Advertisement

 ಸಾಯಿ ಪ್ರಣಿತ್‌ಗೆ ಸೋಲು
ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬಿ. ಸಾಯಿ ಪ್ರಣೀತ್‌ ಕೂಡ ಸೋಲನುಭವಿಸಿದರು. ಜಪಾನಿನ ಕೆಂಟೊ ಮೊಮೊಟ ವಿರುದ್ಧ ನಡೆದ ಪಂದ್ಯವನ್ನು ಪ್ರಣೀತ್‌ 21-21, 21-21ರಿಂದ ಕಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next