Advertisement

ಹಾಂಕಾಂಗ್‌ ವಿರುದ್ಧ ಭಾರತಕ್ಕೆ ಗೆಲುವು

07:50 AM Feb 07, 2018 | Team Udayavani |

ಅಲೋರ್‌ ಸೆಟರ್‌ (ಮಲೇಶ್ಯ): ಒಲಿಂಪಿಕ್‌ ಬೆಳ್ಳಿ ವಿಜೇತೆ ಪಿವಿ ಸಿಂಧು ನೇತೃತ್ವದ ಭಾರತೀಯ ವನಿತಾ ತಂಡವು ಏಶ್ಯ ಬ್ಯಾಡ್ಮಿಂಟನ್‌ ತಂಡ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭಗೈದಿದೆ. 

Advertisement

ತೊಡೆಸಂದು ಗಾಯದಿಂದಾಗಿ ಸೈನಾ ನೆಹ್ವಾಲ್‌ ಈ ಕೂಟದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿಂಧು ಮುಂಚೂಣಿಯಲ್ಲಿ ನಿಂತು ಭಾರತಕ್ಕೆ ಆಸರೆಯಾಗಿದ್ದಾರೆ. ಅವರ ಉತ್ತಮ ಆಟದಿಂದಾಗಿ ಭಾರತವು ಹಾಂಕಾಂಗ್‌ ತಂಡವನ್ನು 3-2 ಅಂತರದಿಂದ ಸೋಲಿಸಿ ಮುನ್ನಡೆದಿದೆ. ಸಿಂಗಲ್ಸ್‌ ಪಂದ್ಯ ಗೆದ್ದ ಸಿಂಧು ಆಬಳಿಕ ನಡೆದ ಎರಡನೇ ಡಬಲ್ಸ್‌ ಪಂದ್ಯದಲ್ಲಿ ಎನ್‌. ಸಿಕ್ಕಿ ರೆಡ್ಡಿ ಜತೆಗೂಡಿ ಗೆಲುವು ಸಾಧಿಸುವ ಮೂಲಕ ಭಾರತ ಗೆಲುವಿನ ಸಂಭ್ರಮಪಡುವಂತಾಯಿತು. 

ಕಳೆದ ರವಿವಾರ ನಡೆದ ಇಂಡಿಯಾ ಓಪನ್‌ನ ಫೈನಲ್‌ನಲ್ಲಿ ಸೋತು ಆಘಾತಕ್ಕೆ ಒಳಗಾಗಿದ್ದರೂ ಸಿಂಧು ಇಲ್ಲಿ ಹೊಸ ಉತ್ಸಾಹದಿಂದಲೇ ಆಡಿ ಮೊದಲ ಸಿಂಗಲ್ಸ್‌ನಲ್ಲಿ ಹಾಂಕಾಂಗ್‌ನ ಯಿಪ್‌ ಪುಯಿ ಯಿನ್‌ ಅವರನ್ನು 21-12, 21-18 ಗೇಮ್‌ಗಳಿಂದ ಸೋಲಿಸಲು ಯಶಸ್ವಿಯಾದರು. 

ಅಶ್ವಿ‌ನಿ ಪೊನ್ನಪ್ಪ ಮತ್ತು ಪ್ರಜಕ್ತ ಸಾವಂತ್‌ ಅವರು ಮೊದಲ ಡಬಲ್ಸ್‌ ಪಂದ್ಯದಲ್ಲಿ ವಿಂಗ್‌ ಯಂಗ್‌ ಮತ್ತು ಯೆಯುಂಗ್‌ ಎನ್‌ಗಾ ಟಿಂಗ್‌ ಅವರೆದುರು ಪ್ರಬಲ ಹೋರಾಟ ನಡೆಸಿದ್ದರೂ ಅಂತಿಮವಾಗಿ 22-20, 20-22, 10-21 ಗೇಮ್‌ಗಳಿಂದ ಶರಣಾದರು. ಯುವ ಆಟಗಾರ್ತಿ ಶ್ರೀಕೃಷ್ಣ ಪ್ರಿಯಾಕುದರವಲ್ಲಿ ಅವರು ಚೆಯುಂಗ್‌ ಯಿಂಗ್‌ ಮೆಯಿ ಅವರ ವಿರುದ್ಧ ತೀವ್ರ ಹೋರಾಟ ನಡೆಸಿದರೂ ಅಂತಿಮವಾಗಿ 19-21, 21-18, 20-22 ಗೇಮ್‌ಗಳಿಂದ ಸೋತರು. ಇದರಿಂದ ಮೊದಲ ಮೂರು ಪಂದ್ಯಗಳ ಬಳಿಕ ಭಾರತ 1-2 ಹಿನ್ನಡೆಯಲ್ಲಿತ್ತು.

ಆಬಳಿಕ ಸಿಂಧು ಅವರು ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಜತೆಗೂಡಿ ಮೂರು ಗೇಮ್‌ಗಳಲ್ಲಿ ಜಯ ಸಾಧಿಸಿದ್ದರಿಂದ ಹೋರಾಟ 2-2 ಸಮಬಲಕ್ಕೆ ಬಂತು. ನಿರ್ಣಾಯಕ ಪಂದ್ಯದಲ್ಲಿ ರುತ್ವಿಕಾ ಶಿವಾನಿ ಗಾಡೆ ಅವರು ಯೆಯುಗ್‌ ಸಮ್‌ ಯೀ ಅವರನ್ನು 16-21, 21-16, 21-13 ಗೇಮ್‌ಗಳಿಂದ ಸೋಲಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

Advertisement

ಭಾರತ ಗುರುವಾರ ನಡೆಯುವ ಪಂದ್ಯದಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ. ವಿಶ್ವದ ಎರಡನೇ ರ್‍ಯಾಂಕಿನ ಅಕಾನೆ ಯಮಗುಚಿ ಮತ್ತು ಹಾಲಿ ವಿಶ್ವ ಚಾಂಪಿಯನ್‌ ನೊಝೋಮಿ ಒಕುಹಾರ ಅವರನ್ನು ಒಳಗೊಂಡ ಜಪಾನ್‌ ಬಲಿಷ್ಠವಾಗಿದೆ. ಈ ಕೂಟದಲ್ಲಿ ಸೆಮಿಫೈನಲ್‌ ತಲುಪಿದ ತಂಡಗಳು ಉಬೆರ್‌ ಕಪ್‌ನಲ್ಲಿ ಆಡಲು ಅರ್ಹತೆ ಗಳಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next