ಬರ್ಮಿಂಗಂ: ಭಾರತದ ಭರವಸೆಯ ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಬುಧವಾರದಿಂದ ಆರಂಭವಾಗುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇವರಿಬ್ಬರ ಕೋಚ್ ಆಗಿರುವ ಪಿ. ಗೋಪಿಚಂದ್ 17 ವರ್ಷಗಳ ಹಿಂದೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.
ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಪ್ರತಿಷ್ಠಿತ ಕೂಟಗಳಲ್ಲಿ ಒಂದಾ ಗಿದೆ. ಈ ಪ್ರಶಸ್ತಿ ಗೆಲ್ಲುವುದು ಪ್ರತಿಯೊಬ್ಬ ಶಟ್ಲರ್‌ಗಳ ಕಟ್ಟಕಡೆಯ ಗುರಿಯಾಗಿದೆ. ಭಾರತದ ಪ್ರಕಾಶ್ ಪಡುಕೋಣೆ (1980) ಮತ್ತು ಪಿ. ಗೋಪಿಚಂದ್ (2001) ಮಾತ್ರ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.
ಉತ್ತಮ ಫಾರ್ಮ್ನಲ್ಲಿರುವ ಸಿಂಧು ಮತ್ತು ಶ್ರೀಕಾಂತ್ ಅವರಿಗೆ ಮೊದಲ ಸುತ್ತಿನಲ್ಲಿ ಸುಲಭ ಎದುರಾಳಿ ಸಿಕ್ಕಿದ್ದಾರೆ. ಆದರೆ ಮಾಜಿ ಫೈನಲಿಸ್ಟ್ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲಿ ಕಠಿನ ಎದುರಾಳಿಯನ್ನು ಎದುರಿಸಬೇಕಾಗಿದೆ. ಆರಂಭಿಕ ಪಂದ್ಯದಲ್ಲಿ ಸೈನಾ ಅವರು ವಿಶ್ವದ ನಂಬರ್ ವನ್ ಮತ್ತು ಹಾಲಿ ಚಾಂಪಿಯನ್ ಚೈನೀಸ್ ತೈಪೆಯ ತೈ ಟಿಜು ಯಿಂಗ್ ಅವರ ಸವಾಲನ್ನು ಎದುರಿಸಬೇಕಾಗಿದೆ.
ಸೈನಾ ವಿರುದ್ಧ ಯಿಂಗ್ ಉತ್ತಮ ದಾಖಲೆ ಹೊಂದಿದ್ದಾರೆ. ಪರಸ್ಪರ 14 ಬಾರಿ ಮುಖಾಮುಖೀಯಲ್ಲಿ ಯಿಂಗ್ 9 ಬಾರಿ ಗೆಲುವು ಸಾಧಿಸಿದ್ದಾರೆ. ಸೈನಾ ಕಳೆದ ಏಳು ಪಂದ್ಯಗಳಲ್ಲಿ ಅವರೆದುರು ಸೋತಿ ದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಇಂಡೋನೇಶ್ಯ ಮಾಸ್ಟರ್ ಕೂಟದ ಫೈನಲ್‌ನಲ್ಲಿ ಸೈನಾ ಅವರು ಯಿಂಗ್‌ಗೆ ಶರಣಾಗಿದ್ದರು.
ನಾಲ್ಕನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಥಾçಲಂಡ್‌ನ ಪೋರ್ನ್ಪವೀ ಚೊಚುವಾಂಗ್ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆಲುವು ದಾಖಲಿಸಿದರೆ ದ್ವಿತೀಯ ಸುತ್ತಿನಲ್ಲಿ ಬೈವೆನ್ ಝಾಂಗ್ ಅವರ ಸವಾಲಿಗೆ ಉತ್ತರಿಸಬೇಕಾಗಿದೆ. ಇದೇ ವೇಳೆ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವೆರ್‌ಡೆಜ್ ಅವರೊಂದಿಗೆ ಹೋರಾಡಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ವಿಶ್ವದ ಮೂರನೇ ರ್‍ಯಾಂಕಿನ ಶ್ರೀಕಾಂತ್ 2017ರಲ್ಲಿ ಪ್ರಚಂಡ ಫಾರ್ಮ್ನಲ್ಲಿದ್ದರು. ನಾಲ್ಕು ಸೂಪರ್ ಸೀರೀಸ್ ಕೂಟದ ಪ್ರಶಸ್ತಿ ಗೆದ್ದಿರುವ ಅವರು ವಿಶ್ವದ ನಂಬರ್ ವನ್ ವಿಕ್ಟರ್ ಆ್ಯಕ್ಸೆಲ್ಸೆನ್ ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರರಾಗಿದ್ದಾರೆ. ಶ್ರೀಕಾಂತ್ ಕಳೆದ ವರ್ಷ ಇಲ್ಲಿ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು.