ಲಕ್ನೋ: ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಅಗ್ರ ಶ್ರೇಯಾಂಕದ ಸಿಂಧು ಕೇವಲ 33 ನಿಮಿಷಗಳಲ್ಲಿ ಅಮೆರಿಕದ ಲಾರೆನ್ ಲ್ಯಾಮ್ ಅವರನ್ನು 21-16, 21-13 ಅಂತರದಿಂದ ಮಣಿಸಿದರು. ಆದರೆ ಪ್ರಣಯ್‌ಗೆ ತವರಿನ ಪ್ರಿಯಾಂಶು ರಾಜಾವತ್ ಅವರಿಂದ ಕಠಿಣ ಸವಾಲು ಎದುರಾಯಿತು. ಪಂದ್ಯ 3 ಗೇಮ್‌ಗಳನ್ನು ಕಂಡಿತು. ಅಂತಿಮವಾಗಿ ಪ್ರಣಯ್ 21-11, 16-21, 21-18ರಿಂದ ಗೆದ್ದು ಬಂದರು.
ಸಿಂಧು ಅವರಿನ್ನು ಥಾಯ್ಲೆಂಡ್ ಆಟಗಾರ್ತಿ ಸುಪಾನಿದಾ ಕ್ಯಾಟೆತಾಂಗ್ ಸವಾಲು ಎದುರಿಸಲಿದ್ದಾರೆ. ಇವರಿಬ್ಬರೂ ಕಳೆದ ಇಂಡಿಯಾ ಓಪನ್ ಸೆಮಿಫೈನಲ್‌ನಲ್ಲಿ ಮುಖಾಮುಖೀ ಆಗಿದ್ದರು. ಎಡಗೈ ಆಟಗಾರ್ತಿ ಸುಪಾನಿದಾ ಭಾರತೀಯಳಿಗೆ ಸೋಲಿನ ಆಘಾತವಿಕ್ಕಿದ್ದರು. ಸೇಡು ತೀರಿಸಿಕೊಳ್ಳಲು ಸಿಂಧುಗೆ ಉತ್ತಮ ಅವಕಾಶ ಎದುರಾಗಿದೆ.
ಪ್ರಣಯ್ ಫ್ರಾನ್ಸ್‌ನ ಅರ್ನಾಡ್ ಮೆರ್ಕಲ್ ವಿರುದ್ಧ ಸೆಣಸಲಿದ್ದಾರೆ. ಅವರು ಭಾರತದ ಗುಲ್ಶನ್ ಕುಮಾರ್ ವಿರುದ್ಧ 21-8, 21-12ರಿಂದ ಮೇಲುಗೈ ಸಾಧಿಸಿದರು.
ವನಿತೆಯರ ಇನ್ನೆರಡು ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಯುವ ಆಟಗಾರ್ತಿಯರಾದ ಆಕರ್ಷಿ ಕಶ್ಯಪ್-ಮಾಳವಿಕಾ ಕಶ್ಯಪ್ ಹಾಗೂ ಸಮಿಯಾ ಇಮಾದ್ ಫಾರೂಖೀ-ಅನುಪಮಾ ಉಪಾಧ್ಯಾಯ ಮುಖಾಮುಖೀಯಾಗಲಿದ್ದಾರೆ.