Advertisement

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ ಸೆಮಿಫೈನಲ್‌ಗೆ ಸಿಂಧು ಪದಕ ಖಚಿತ

11:22 PM Apr 29, 2022 | Team Udayavani |

ಮನಿಲಾ: ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದಿರುವ ಭಾರತದ ಪಿ.ವಿ. ಸಿಂಧು ಅವರು ಚೀನದ ಹಿ ಬಿಂಗ್‌ ಜಿಯಾವೊ ಅವರನ್ನು ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಉರುಳಿಸಿ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಹಂತಕ್ಕೇರಿದ್ದಾರೆ.

Advertisement

ಈ ಗೆಲುವಿನಿಂದ ಸಿಂಧು ಪದಕವೊಂದನ್ನು ಖಚಿತಪಡಿಸಿದ್ದಾರೆ. ಏಷ್ಯಾ ಬ್ಯಾಡ್ಮಿಂಟನ್‌ ಕೂಟವು ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಮರಳಿ ನಡೆಯುತ್ತಿದೆ.

2014ರ ಜಿಮ್‌ಚಿಯೋನ್‌ನಲ್ಲಿ ನಡೆದ ಕೂಟದಲ್ಲಿ ಕಂಚು ಜಯಿಸಿದ್ದ 4ನೇ ಶ್ರೇಯಾಂಕದ ಸಿಂಧು 5ನೇ ಶ್ರೇಯಾಂಕದ ಚೀನದ ಜಿಯಾವೊ ಅವರನ್ನು 21-9, 13-21, 21-19 ಗೇಮ್‌ಗಳಿಂದ ಕೆಡಹಿದರು. ಈ ಹೋರಾಟ ಒಂದು ಗಂಟೆ, 16 ನಿಮಿಷಗಳವರೆಗೆ ಸಾಗಿತ್ತು.

ಯಮಾಗುಚಿ ಸೆಮಿ ಎದುರಾಳಿ
ಈ ವರ್ಷದ ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಮತ್ತು ಸ್ವಿಸ್‌ ಓಪನ್‌ ಕೂಟದ ಪ್ರಶಸ್ತಿ ಗೆದ್ದಿರುವ 26ರ ಹರೆಯದ ಹೈದರಾಬಾದ್‌ನ ಸಿಂಧು ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಜಪಾನಿನ ಅಕಾನೆ ಯಮಾಗುಚಿ ಅವರನ್ನು ಎದುರಿಸಲಿದ್ದಾರೆ.

ವಿಶ್ವದ 7ನೇ ರ್‍ಯಾಂಕಿನ ಸಿಂಧು ಅವರು ಬಿಂಗ್‌ ಜಿಯಾವೊ ಅವರೆದುರು 7 ಜಯ-9 ಸೋಲಿನ ದಾಖಲೆ ಹೊಂದಿದ್ದಾರೆ. ಆದರೆ ಈ ಹಿಂದಿನ ಎರಡು ಮುಖಾಮುಖೀಗಳಲ್ಲಿ ಸಿಂಧು ಗೆದ್ದ ಸಾಧನೆ ಮಾಡಿದ್ದರು. ಟೋಕಿಯೊ ಗೇಮ್ಸ್‌ನಲ್ಲಿ ಸಿಂಧು ಈ ಹಿಂದೆ ಕೊನೆಯದಾಗಿ ಜಿಯಾವೊ ಅವರನ್ನು ಎದುರಿಸಿದ್ದರು. ಇಲ್ಲಿ ಸಿಂಧು ಕಂಚು ಸಾಧಿಸಿದ ಸಾಧನೆ ಮಾಡಿದ್ದರು.

Advertisement

ಆರಂಭದಲ್ಲಿ ಸಿಂಧು ಭರ್ಜರಿಯಾಗಿ ಆಡಿದರು. 11-2 ಮುನ್ನಡೆ ಸಾಧಿಸುವ ಮೂಲಕ ಅವರು ತನ್ನ ಉದ್ದೇಶ ಖಚಿತಪಡಿಸಿದರು. ಮೊದಲ ಗೇಮ್‌ ಕಳೆದುಕೊಂಡಿದ್ದ ಜಿಯಾವೊ ದ್ವಿತೀಯ ಗೇಮ್‌ನಲ್ಲಿ ತೀವ್ರ ಹೋರಾಡಿ ಮುನ್ನಡೆ ಸಾಧಿಸಿದರು. ಸಿಂಧು ಹಲವು ತಪ್ಪುಗಳನ್ನು ಮಾಡಿ ಹಿನ್ನೆಡೆ ಅನುಭವಿಸಿದರು. ಇದರ ಲಾಭ ಪಡೆದ ಜಿಯಾವೊ 19-12 ಮುನ್ನಡೆ ಸಾಧಿಸಿ ಗೇಮ್‌ ಗೆದ್ದರು.

ನಿರ್ಣಾಯಕ ಗೇಮ್‌ನಲ್ಲಿ ಇಬ್ಬರೂ ಸಮಬಲದ ಹೋರಾಟ ನೀಡಿದರು. ಒಂದು ಹಂತದಲ್ಲಿ 15-9ರಿಂದ ಮುನ್ನಡೆ ಸಾಧಿಸಿದ್ದ ಸಿಂಧು ಆಬಳಿಕ 18-16ಕ್ಕೆ ಕುಸಿದರು. ಅಂತಿಮವಾಗಿ 21-19 ಗೇಮ್‌ನಿಂದ ಗೆಲ್ಲಲು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next