ಲಕ್ನೋ: ಭಾರತದ ಸ್ಟಾರ್ ಶಟ್ಲರ್ ಪಿ.ವಿ.ಸಿಂಧು ಅವರು ತನ್ನ ದೇಶದವರೇ ಆದ ಉನ್ನತಿ ಹೂಡಾ ಅವರನ್ನು ಕೆಡಹಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಕೂಟದಲ್ಲಿ ಫೈನಲ್ ಹಂತಕ್ಕೇರಿದ್ದಾರೆ.
ಅಗ್ರ ಶ್ರೇಯಾಂಕದ ಸಿಂಧು, 17ರ ಹರೆಯದ ಹೂಡಾ ಅವರನ್ನು 21-12, 21-9 ನೇರ ಗೇಮ್‌ಗಳಿಂದ ಕೇವಲ 36 ನಿಮಿಷದಲ್ಲಿ ಉರುಳಿಸಿದರು. ಹೂಡಾ ಅವರ ಹಲವು ಅನಗತ್ಯ ತಪ್ಪುಗಳ ಲಾಭ ಪಡೆದ ಸಿಂಧು ಪಂದ್ಯದುದ್ದಕ್ಕೂ ನಿಯಂತ್ರಣ ಸಾಧಿಸಿದರು.
ಇಂದಿನ ನಿರ್ವಹಣೆಯಿಂದ ಖುಷಿಯಾಗಿದೆ. ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸಿ ಮುನ್ನಡೆ ಗಳಿಸಿದೆ. ನಾನಾಡಿದ ಆಟದಿಂದ ಆತ್ಮವಿಶ್ವಾಸ ಹೆಚ್ಚಿದೆ ಎಂದು ಪಂದ್ಯದ ಬಳಿಕ ಸಿಂಧು ಹೇಳಿದರು.
ತನಿಷಾ-ಧ್ರುವ್ ಜೋಡಿ ಫೈನಲ್‌ಗೆ: ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ತನಿಷಾ ಕ್ರಾಸ್ಟೊ ಮತ್ತು ಧ್ರುವ್ ಕಪಿಲಾ ಅರು ಚೀನಾದ ಝೀ ಹಾಂಗ್ ಝೊ ಮತ್ತು ಜಿಯಾ ಯಿ ಯಾಂಗ್ ಅವರನ್ನು 21-16, 21-15 ಗೇಮ್‌ಗಳಿಂದ ಸೋಲಿಸಿ ಫೈನಲಿಗೇರಿದರು.
ವನಿತೆಯರ ಡಬಲ್ಸ್ ಸೆಮಿಫೈನಲ್‌ನಲ್ಲಿ ಟ್ರೀಸಾ ಜಾಲಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಲಿ ಜಿಂಗ್ ಬಾವೊ ಮತ್ತು ಕಿಯಾನ್ ಲಿ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಲಕ್ಷ್ಯ ಸೇನ್ ಅವರು ಶೊಗೊ ಒಗಾವಾ ಅವರ ಸವಾಲನ್ನು ಎದುರಿಸಲಿದ್ದಾರೆ.