ಬೆಂಗಳೂರು: ಮೈಸೂರು ರಸ್ತೆಯ ನಗರ ಮೀಸಲು ಸಶಸ್ತ್ರ ಪಡೆ(ಸಿಎಆರ್) ಕೇಂದ್ರ ಘಟಕ ಆಡಳಿತ ಶಾಖೆಯಲ್ಲಿ 59.80 ಲಕ್ಷ ರೂ. ಅವ್ಯವಹಾರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಆರ್ ಕೇಂದ್ರ ಘಟಕದ ಆಡಳಿತ ಶಾಖೆಯ ಸಹಾಯ ಆಡಳಿತಾಧಿಕಾರಿ(ಎಎಒ) ಡಿ.ರಾಜಲಕ್ಷ್ಮೀ ಅವರು ನೀಡಿದ ದೂರಿನ ಮೇರೆಗೆ ಸಿಎಆರ್ ಕೇಂದ್ರ ಘಟಕ ಆಡಳಿತ ಶಾಖೆಯ ಹಿಂದಿನ ಎಎಒ ಸರೋಜಾ ಬಿ.ಬಿಜಾಪುರ ಮತ್ತು ಹಿಂದಿನ ದ್ವಿತೀಯ ದರ್ಜೆ ಸಹಾಯಕ ಡಿ.ಎಸ್.ಪ್ರಶಾಂತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ದೂರಿನಲ್ಲಿ ಏನಿದೆ?: ಸಿಎಆರ್ ಕೇಂದ್ರ ಘಟಕದ ಆಡಳಿತ ಶಾಖೆ ವ್ಯವಹಾರಗಳ ಸಂಬಂಧ ಕಳೆದ ಜನವರಿಯಲ್ಲಿ ಮಹಾಲೇಖಪಾಲರು 2020-21 ರಿಂದ 2022-2023ರ ವರೆಗಿನ ಲೆಕ್ಕ ಪರಿಶೀಲಿಸಿ¨ªಾರೆ. ಈ ವೇಳೆ ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತದಲ್ಲಿ 59.80 ಲಕ್ಷ ರೂ. ಕೊರತೆ ಇರುವುದು ಕಂಡು ಬಂದಿದೆ. ಮಹಾಲೇಖಪಾಲರು ಈ ಬಗ್ಗೆ ಆಕ್ಷೇಪಣೆ ಮಾಡಿ ವರದಿ ಸಲ್ಲಿಸಿ¨ªಾರೆ. ಲೆಂಟ್ ಗಾರ್ಡ್ ಚಾರ್ಜಸ್ ಮೊತ್ತವನ್ನು ಡಿಸಿಪಿ ಸಿಎಆರ್ ಕೇಂದ್ರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆಗೆ ತುಂಬಲಾಗುತ್ತದೆ. ಈ ಖಾತೆಯಲ್ಲಿ ಕೆಲವು ಅನಧಿಕೃತ ವಹಿವಾಟುಗಳು ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಎಎಒ ಪತ್ರ ವ್ಯವಹಾರ: ದ್ವಿತೀಯ ದರ್ಜೆ ಸಹಾಯ ಡಿ.ಎಸ್.ಪ್ರಶಾಂತ್ 2012ರಿಂದ 2021ರ ಜೂನ್ 21ರ ವರೆಗೆ ಸಿಎಆರ್ ಕೇಂದ್ರ ಘಟಕದ ಆಡಳಿತ ಶಾಖೆ ನಗದು ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರೋಜಾ ಬಿ.ಬಿಜಾಪುರ 2015ರಿಂದ 2024 ಮೇ 31ರವರೆಗೆ ಆಡಳಿತ ಶಾಖೆಯ ಎಎಒ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ಡಿಸಿಪಿ ಸಿಎಆರ್ ಬ್ಯಾಂಕ್ ಖಾತೆ ಸಂಬಂಧ ವಿಷಯ ನಿರ್ವಾಹಕರು ಮಂಡಿಸುವ ಕಡತಕ್ಕೆ ಅಂತಿಮ ಅನುಮೋದನೆ ಮತ್ತು ಮಂಜೂರಾತಿ ನೀಡುವ ಅಧಿಕಾರ ಎಒಒ ಹೊಂದಿದ್ದಾರೆ. ಈ ಅನಧಿಕೃತ ವಹಿವಾಟುಗಳಿಗೆ ಸರೋಜಾ ಬಿ.ಬಿಜಾಪುರ ಅವರೇ ಪತ್ರ ವ್ಯವಹರಿಸಿರುವುದು ಕಂಡು ಬಂದಿದೆ.
ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದೆ. ತನಿಖೆ ನಡೆಯುತ್ತಿದೆ. ಪ್ರಶಾಂತ್ ಮತ್ತು ಸರೋಜಾರ ವಿಳಾಸ ಪತ್ತೆ ಹಚ್ಚಿ ನೋಟಿಸ್ ನೀಡಲಾಗುತ್ತದೆ ಎಂದು ಪೊಲೀಸರು ಹೇಳಿದರು.