ನಗರ: ತಾಲೂಕಿನ ವಿವಿಧ ದೇವಾಲಯ, ಭಜನ ಮಂದಿರಗಳು, ಮನೆಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ವ್ರತಾಚರಣೆಯೊಂದಿಗೆ ಪೂಜೆಯು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ನಡೆಯಿತು.
ಸುಖ, ಶಾಂತಿ, ನೆಮ್ಮದಿ, ಸಂಪತ್ತು ಕರುಣಿಸುವಂತೆ ಸಂಕಲ್ಪಿಸಿ ಭಕ್ತರು ವರಮಹಾಲಕ್ಷ್ಮೀಯ ಪೂಜೆ ಸಲ್ಲಿಸಿದರು. ಮುತ್ತೈದೆಯರು ಸೌಭಾಗ್ಯ, ಮಾಂಗಲ್ಯ ಭಾಗ್ಯ ಪ್ರಾಪ್ತಿಗಾಗಿ ವ್ರತಾಚರಣೆಯೊಂದಿಗೆ ದೇವಿಯ ವಿಶೇಷ ಪೂಜೆ ನಡೆಸಿದರು. ವರಮಹಾಲಕ್ಷ್ಮೀ ಪೂಜೆ ಗಳು ನಡೆಯುವಲ್ಲಿ ಪ್ರತ್ಯೇಕ ಪೂಜಾ ಸಮಿತಿಗಳನ್ನು ರಚಿಸಲಾಗಿದ್ದು, ಆ ಸಮಿತಿಗಳ ಜತೆ ಸಂಘ ಸಂಸ್ಥೆಗಳು ಸೇರಿಕೊಂಡು ಸಾರ್ವಜನಿಕ ಪಾಲ್ಗೊಳ್ಳುವಿಕೆಯೊಂದಿಗೆ ಪೂಜೆಗಳು ನಡೆದವು.
ನಗರದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆ, ಲಕ್ಷ್ಮೀದೇವಿ ಬೆಟ್ಟ, ಬಪ್ಪಳಿಗೆ ಬ್ರಹ್ಮಶ್ರೀ ಗುರುನಾರಾಯಣ ಮಂದಿರ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನ, ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯ, ಚಾರ್ವಾಕ ಶ್ರೀ ಕಪಿಲೇಶ್ವರ ಸಮುದಾಯ ಭವನ, ಪಡುಮಲೆ ಶ್ರೀ ಕೂವೆಶಾಸ್ತರ ವಿಷ್ಣುಮೂರ್ತಿ ದೇವಸ್ಥಾನ, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಬೊಳುವಾರು ವಿಶ್ವಕರ್ಮ ಸಭಾಭವನ, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನ, ಕಲ್ಲಾರೆ ಶ್ರೀ ರಾಘವೇಂದ್ರ ಮಠ, ಸವಣೂರು ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಾಲಯ, ಕೌಡಿಚ್ಚಾರು ಶ್ರೀ ಕೃಷ್ಣ ಭಜನ ಮಂದಿರ, ಕುಂಜೂರು ದುರ್ಗಾಪರಮೇಶ್ವರಿ ದೇವಾಲಯ, ಪುರುಷರಕಟ್ಟೆ ಗುರು ಪೂರ್ಣಾನಂದ ಮಂದಿರ, ಮಜಲು ಮಾರು ಉಮಾಮಹೇಶ್ವರ ದೇವಸ್ಥಾನ, ಗೋಳಿತೊಟ್ಟು ಸಿದ್ದಿವಿನಾಯಕ ಭಜನ ಮಂದಿರ, ಕೆಯ್ಯೂರು ಶ್ರೀ ಮಹಿಷಾಮರ್ದಿನಿ ದುರ್ಗಾ ಪರಮೇಶ್ವರಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಾಲಯ ಮೊದಲಾದಡೆ ವರಮಹಾಲಕ್ಷ್ಮೀ ಪೂಜೆ ನಡೆಯಿತು.
ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯಲ್ಲಿ ದಾರಗಳಿಗೆ ಪೂಜೆ ಸಲ್ಲಿಸುವುದು ವಿಶೇಷ. ಹೊಸದಾಗಿ ತಯಾರಿಸಿದ 12 ದಾರಗಳಿಗೆ 12 ಗಂಟುಗಳನ್ನು ಹಾಕಿ ಅರಶಿನ ಹಚ್ಚಿ ದೇವಿಯ ಜತೆ ಇರಿಸಿ ಆರಾಧನೆ ನಡೆಸಿ, ದ್ವಾದಶ ನಾಮಾವಳಿ ಉಚ್ಛರಿಸಿ ಅನಂತರ ಬಲಗೈಗೆ ಧರಿಸಿಕೊಂಡರು. ಅನಂತರ ಮನೆಗೆ ತೆರಳಿ ಹಬ್ಬದ ಅಡುಗೆಗಳನ್ನು ಮಾಡಿ ಸಂಭ್ರಮಾಚರಣೆ ನಡೆಸಿದರು.