Advertisement
ಸೇತುವೆಯ ಸಂಪರ್ಕ ರಸ್ತೆಗಳ ಪೈಕಿ ಸುಮಾರು 800 ಮೀ. ರಸ್ತೆ ಡಾಮರು ಕಾಮಗಾರಿ ಅನುದಾನದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿತ್ತು. ಶಾಸಕ ಎಸ್. ಅಂಗಾರ ಅವರ ಶಿಫಾರಸಿನಂತೆ 34 ಲಕ್ಷ ರೂ. ಅನುದಾನದಲ್ಲಿ ಡಾಮರು ಕಾಮಗಾರಿ ನಡೆಯುತ್ತಿದೆ. ಕೂರ ಮಸೀದಿಯ ಹತ್ತಿರ ಹಾಗೂ 800 ಮೀ. ರಸ್ತೆ ಎರಡು ವರ್ಷಗಳಿಂದ ಹೊಂಡಮಯವಾಗಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಶಾಂತಿಮುಗೇರುವಿನಲ್ಲಿ ಸೇತುವೆ ನಿರ್ಮಾಣವಾದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿತ್ತು.
ಶಾಂತಿಮುಗೇರು ಎನ್ನುವಲ್ಲಿ ಸೇತುವೆ ನಿರ್ಮಾಣವಾಗಬೇಕು. ಇಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕು. ಆ ಮೂಲಕ ಸವಣೂರು, ಕುದ್ಮಾರು, ಕಾಣಿಯೂರು ಭಾಗದ ಜನರಿಗೆ ಆಲಂಕಾರು ನೆಲ್ಯಾಡಿ, ಕಡಬ, ಧರ್ಮಸ್ಥಳಕ್ಕೆ ಸುಲಭ ಸಂಪರ್ಕವಾಗಬೇಕು. ಮಾತ್ರವಲ್ಲ, ಅಪಾಯಕಾರಿ ನಾಡದೋಣಿ ಕಡವಿಗೆ ಮುಕ್ತಿ ದೊರೆಯಬೇಕು. ಮೈಸೂರಿನಿಂದ ಸುಳ್ಯ -ಬೆಳ್ಳಾರೆ-ಸವಣೂರು-ಶಾಂತಿಮೊಗೇರು-ಆಲಂಕಾರು-ನೆಲ್ಯಾಡಿ-ಧರ್ಮಸ್ಥಳಕ್ಕೆ ಸುಲಭ ಸಂಪರ್ಕವಾಗಬೇಕು ಎನ್ನುವ ಸುಮಾರು 30 ವರ್ಷದ ಬೇಡಿಕೆ ಸದ್ಯ ಈಡೇರಿದೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಿದೆ. ಇದರಲ್ಲಿ 50 ಲಕ್ಷ ರೂ. ಭೂಸ್ವಾಧೀನ ಪರಿಹಾರ ನೀಡಲಾಗಿದೆ. ಸೇತುವೆ ಸಂಪರ್ಕ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ವ್ಯಯ ಮಾಡಲಾಗಿದೆ. ಆಲಂಕಾರಿನಿಂದ ಸೇತುವೆಯ ತನಕ 4.5 ಕಿ.ಮೀ. ರಸ್ತೆಯನ್ನು 6 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೀಗ ಸಂಪರ್ಕ ರಸ್ತೆಯ ಉಳಿಕೆ ಭಾಗ ಕೂಡಾ ಅಭಿವೃದ್ದಿಯಾಗಿದ್ದು, ಮೂರು ದಶಕಗಳ ಬೇಡಿಕೆ ಈಡೇರಿದಂತಾಗಿದೆ.
Related Articles
ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಶಾಂತಿಮೊಗೇರು ಸೇತುವೆಗೆ ಅನುದಾನ ಮಂಜೂರಾಗಿತ್ತು. ಸುಮಾರು 15.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದೆ. ಆಲಂಕಾರು ತನಕ ರಸ್ತೆ ಅಭಿವೃದ್ಧಿ, ಸೇತುವೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಸರಕಾರದಿಂದ ಅನುದಾನ ತಂದು ಕಾಮಗಾರಿ ನಡೆಸಲಾಗಿದೆ. ಈ ಭಾಗದ ಜನತೆಯ ಆಶಯದಂತೆ ಈ ಎಲ್ಲ ಕಾರ್ಯಗಳನ್ನು ಮಾಡಲಾಗಿದೆ. ನನ್ನ ಕ್ಷೇತ್ರದಲ್ಲಿ ಇನ್ನಷ್ಟು ರಸ್ತೆಗಳು ಅಭಿವೃದ್ದಿಗೆ ಬಾಕಿ ಇದೆ. ಶೀಘ್ರವೇ ಬಾಕಿ ಇರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.
– ಎಸ್.ಅಂಗಾರ,
ಶಾಸಕರು, ಸುಳ್ಯ
Advertisement