ಪುತ್ತೂರು : ಮಂಗಳೂರು-ಬೆಂಗಳೂರು ರೈಲು ಮಾರ್ಗದ ಪುತ್ತೂರಿನ ಹೊರವಲಯದ ನರಿಮೊಗರು ಬಳಿ ಗುಡ್ಡ ಕುಸಿತ ಉಂಟಾಗಿದೆ. ಒಂದು ಬದಿಯ ಗುಡ್ಡ ಈಗಾಗಲೇ ರೈಲು ಮಾರ್ಗದ ಮೇಲೆ ಕುಸಿದು ಬಿದ್ದಿದ್ದು, ತೆರವು ಕಾರ್ಯ ನಡೆದಿದೆ. ಈಗ ಮತ್ತೂಂದು ಬದಿಯ ಗುಡ್ಡವೂ ಕುಸಿಯುವ ಆತಂಕ ಉಂಟಾಗಿದೆ.
ಶಿರಾಡಿ: ರಾತ್ರಿ ಸಂಚಾರ ನಿರ್ಬಂಧ
ಉಪ್ಪಿನಂಗಡಿ: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಶಿರಾಡಿ ಘಾಟಿ ಪ್ರದೇಶದ ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲು ಎಂಬಲ್ಲಿ ಭೂ ಕುಸಿತವುಂಟಾಗಿ ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ಟ್ಯಾಂಕರನ್ನು ಶುಕ್ರವಾರ ತೆರವುಗೊಳಿಸಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಸುರಕ್ಷೆ ಕಾರಣಕ್ಕೆ ರಾತ್ರಿ ವಾಹನ ಸಂಚಾರವನ್ನು ತಡೆಹಿಡಿಯಲು ಹಾಸನ ಜಿಲ್ಲಾಡಳಿತ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.
ರಾತ್ರಿ ವೇಳೆ ಸಂಭಾವ್ಯ ಭಾರೀ ಮಳೆಯಿಂದ ಮತ್ತೆ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿಯವರು ಶುಕ್ರವಾರ ರಾತ್ರಿ 7 ಗಂಟೆಯಿಂದ ಶನಿವಾರ ಮುಂಜಾನೆ ವರೆಗೆ ವಾಹನ ಸಂಚಾರಕ್ಕೆ ನಿಷೇಧ ವಿಧಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಗುಂಡ್ಯ ತಪಾಸಣ ಕೇಂದ್ರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಮರ್ದಾಳ: ಕೂಲಿ ಕಾರ್ಮಿಕ ನೀರಿನಲ್ಲಿ ಮುಳುಗಿ ಸಾವು
ಕಡಬ: ಮರ್ದಾಳ ಸಮೀಪದ 102 ನೆಕ್ಕಿಲಾಡಿ ಗ್ರಾಮದ ನಿವಾಸಿ ಹುಕ್ರ ಅವರ ಪುತ್ರ ಕೂಲಿ ಕಾರ್ಮಿಕ ರಮೇಶ (48) ಅವರು ಸ್ಥಳೀಯ ಕೆಎಫ್‌ಡಿಸಿ ರಬ್ಬರ್ ತೋಟದ ಪಕ್ಕದಲ್ಲಿ ಹರಿಯುತ್ತಿರುವ ಅರ್ಬಿ ತೋಡಿನ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆ. 2ರ ಬೆಳಗ್ಗೆ ಬೆಳಕಿಗೆ ಬಂದಿದೆ.
ಅವರು ಗುರುವಾರ ರಾತ್ರಿ ಮನೆಯಿಂದ ಹೊರ ಹೋದವರು ಮರಳಿ ಬಂದಿರಲಿಲ್ಲ. ಹುಡುಕಿದಾಗ ಶುಕ್ರವಾರ ಅವರ ಮೃತದೇಹ ಪತ್ತೆಯಾಗಿದೆ. ವಿಪರೀತ ಮಳೆಯ ಕಾರಣದಿಂದಾಗಿ ತೋಡಿನಲ್ಲಿ ನೀರು ಉಕ್ಕಿ ಹರಿಯುತ್ತಿದ್ದಾಗ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಅವರ ಪತ್ನಿ ಕಡಬ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.