ಪುತ್ತೂರು: ಹಿಂದೂ ಸಂಘಟನೆಯ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬುಧವಾರ ಪುತ್ತೂರಿನಲ್ಲಿ ನಡೆದ ಬೃಹತ್ ಸಭೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಲು ಆಗ್ರಹ ಕೇಳಿ ಬಂದಿದ್ದು, ಈ ವಿಚಾರವಾಗಿ ಇನ್ನೆರಡು ದಿನದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಕಾರ್ಯಕರ್ತರ ಧ್ವನಿ ವಿಧಾನಸಭೆಯಲ್ಲಿ ಮೊಳಗಬೇಕಾದರೆ ಕಾರ್ಯಕರ್ತರ ನೋವು ನಲಿವು ಅರಿತಿರುವ ಸಂಘಟನೆಯಲ್ಲಿ ದುಡಿಯುವವರಿಗೆ ಅವಕಾಶ ಸಿಗಬೇಕು. ಆದರೆ ಕಳೆದ ಕೆಲವು ವರ್ಷಗಳಿಂದ ಕಾರ್ಯಕರ್ತರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಹಿಂದುತ್ವದ ಧ್ವನಿಯನ್ನು ಮತ್ತೆ ಮುನ್ನಲೆಗೆ ತರುವ ನಿಟ್ಟಿನಲ್ಲಿ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದಿರಿ. ಪಕ್ಷವು ನಿಮ್ಮ ಭಾವನೆಗಳಿಗೆ ಬೆಲೆ ನೀಡದಿದ್ದರೆ ನಿಮ್ಮ ಧ್ವನಿಯಾಗಿ ಕೆಲಸ ಮಾಡಲು ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಅವರು ಘೋಷಿಸಿದರು.
ಹಿರಿಯ ಮುಂದಾಳು ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಜಾತಿ ಅನ್ನುವುದು ಮನೆ, ಕುಟುಂಬಕ್ಕೆ ಮಾತ್ರ ಸೀಮಿತ. ಸಮಾಜ ಸೇವೆ ಮಾಡುವವನಿಗೆ ಜಾತಿ ಇಲ್ಲ. ಹಿಂದುತ್ವದ ಶಕ್ತಿಯಾಗಿ ನಾವಿಲ್ಲಿ ಸೇರಿದ್ದು ಬೇರೆ ಲಾಭಕೋಸ್ಕರ ಅಲ್ಲ. ನಮ್ಮ ಇಂದಿನ ಕೂಗು ಕಾರ್ಯಕರ್ತರ ಭಾವನೆಯ ಸಂಕೇತ ಎಂದರು.
ಇದೇ ವೇಳೆ ಸಭೆಯಲ್ಲಿ ಹಲವು ಅಭಿಪ್ರಾಯ ವ್ಯಕ್ತಪಡಿಸಿ, ಪುತ್ತೂರು ಹಿಂದುತ್ವದ ಕೋಟೆ. ಇಲ್ಲಿ ಹಿಂದುತ್ವದ ಅಸ್ಮಿತೆ ಉಳಿಯಬೇಕು. ಪುತ್ತೂರಿನಂತಹ ಕ್ಷೇತ್ರದಲ್ಲಿ ಜಾತಿ ಆಧಾರಿತವಾಗಿ ಪಕ್ಷ ಟಿಕೆಟ್ ನೀಡುವುದಲ್ಲ. ಅದು ಫಲಪ್ರದ ಆಗುವುದಿಲ್ಲ ಎಂದ ಅವರು ಪ್ರಾಮಾಣಿಕ ಕಾರ್ಯಕರ್ತ ವಿಧಾನಸಭೆಗೆ ಪ್ರವೇಶ ಮಾಡಬೇಕು. ಕಾರ್ಯಕರ್ತರ ವಿರುದ್ಧ ದಬ್ಬಾಳಿಕೆ ಮಾಡುವವರಿಗೆ ಅವಕಾಶ ಕೊಡಬಾರದು. ಇಂದಿನ ಧ್ವನಿ ಕಾರ್ಯಕರ್ತರ ಧ್ವನಿ ಎಂದರು.
ಮೊಳಗಿದ ಘೋಷಣೆ
ಆರಂಭದಲ್ಲಿ ವಂದೇ ಮಾತರಂ ಹಾಡಲಾಯಿತು. ಸಾವಿರಕ್ಕೂ ಮಿಕ್ಕಿ ಸೇರಿದ ಕಾರ್ಯಕರ್ತರು ಪುತ್ತಿಲ ಅವರು ಸ್ಪರ್ಧಿಸುವಂತೆ ಘೋಷಣೆ ಕೂಗಿದರು.