Advertisement

ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿ: ಕಂಡಲ್ಲೆಲ್ಲ ಗುಂಡಿ,ಹೋದಲ್ಲೆಲ್ಲ ಕೆಸರು

01:42 PM Jul 08, 2023 | Team Udayavani |

ಪುತ್ತೂರು: ಪುತ್ತೂರು- ಉಪ್ಪಿನಂಗಡಿ ಅವಳಿ ಪಟ್ಟಣಗಳನ್ನು ಬೆಸೆಯುವ, ಅತೀ ಹೆಚ್ಚು ವಾಹನ ಸಂಚಾರವಿರುವ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದ ಸಂಚಾರವೆಂದರೆ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

Advertisement

ಚರಂಡಿ ಅವ್ಯವಸ್ಥೆ, ಅಲ್ಲಲ್ಲಿ ಹೊಂಡ, ಏರು ತಗ್ಗು, ಕೆಸರು ನೀರಿನ ಎರಚುವಿಕೆಯ ಸಮಸ್ಯೆಗಳೊಂದಿಗೆ ಪುತ್ತೂರಿನಿಂದ ಉಪ್ಪಿನಂಗಡಿ ತನಕ ಈ ರಸ್ತೆಯಲ್ಲಿ ಪ್ರಯಾಣಿಸುವ ಸ್ಥಿತಿ ಇದ್ದರೂ ಲೋಕೋ ಪಯೋಗಿ ಇಲಾಖೆ ಮಾತ್ರ ಎಲ್ಲವೂ ಸುಂದರ ಎಂಬ ಫಲಕ ಪ್ರದರ್ಶಿಸಿ ನಿರ್ಲಕ್ಷ್ಯ ತೋರಿದೆ.

ಕೇಪುಳುವಿನಿಂದ ಕೋಡಿಂಬಾಡಿ ಶಾಂತಿನಗರದ ತನಕ ಎರಡು ಬದಿಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಿದೆ. ಆದರೆ ರಸ್ತೆ ನಿರ್ಮಾಣವೇ ಅವೈಜ್ಞಾನಿಕ ಎಂಬಂತಿದೆ. ಏಕೆಂದರೆ ಸುರಕ್ಷತೆಯ ದೃಷ್ಟಿ ಯಿಂದ ಅಳವಡಿಸಿರುವ ಹಂಪ್‌ ಬಳಿ ನೀರು ನಿಲ್ಲುವ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಮಧ್ಯಭಾಗದಲ್ಲಿ ನಿರ್ಮಿ ಸಿರುವ ಡಿವೈಡರ್‌ ಬದಿಗಳಲ್ಲಿ ರಸ್ತೆ ಏರು- ತಗ್ಗಿನ ಪರಿಣಾಮ ಮಳೆ ನೀರು ನಿಲ್ಲುತ್ತಿದೆ. ಇದರಿಂದ ಒಂದು ಬದಿಯಿಂದ ವಾಹನ ಸಂಚರಿಸುವಾಗ ಕೆಸರು ನೀರು ಇನ್ನೊಂದು ಬದಿಯಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ ಚಿಮ್ಮುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಕಾಮಗಾರಿಯ ಲೋಪ ದೋಷದಿಂದಲೇ ಈ ರೀತಿ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದೆ.

ಚರಂಡಿ ಕಥೆ ಹೇಳಿ ಸುಖವಿಲ್ಲ
ಮಳೆಗಾಲದ ಮೊದಲೇ ಚರಂಡಿ ದುರಸ್ತಿ ಮಾಡುವಂತೆ ಶಾಸಕರು ಲೋಕೋ ಪಯೋಗಿ ಇಲಾಖೆಯ ಅಧಿಕಾರಿ ಗಳಿಗೆ ಖಡಕ್‌ ಸೂಚನೆ ನೀಡಿದ್ದರು. ಸ್ಥಳಕ್ಕೆ ಕರೆಯಿಸಿ ಗಡುವು ನೀಡಿದ್ದರು. ಆದರೆ ಮಾಡಿದ ಕೆಲಸ ಅಪೂರ್ಣ ಅನ್ನು ವುದಕ್ಕೆ ರಸ್ತೆ ಇಕ್ಕೆಡೆಗಳಲ್ಲಿನ ಚರಂಡಿಯ ಸ್ಥಿತಿಯೇ ಉದಾಹರಣೆ. ಬೇರಿಕೆ ಬಳಿ ತಿರುವು ಪ್ರದೇಶದಲ್ಲಿ ಚರಂಡಿ ಬ್ಲಾಕ್‌ ಆಗಿ ಮಳೆ ನೀರು ತುಂಬಿ ಕೆರೆಯ ರೂಪ ಪಡೆದಿದೆ. ಇಂತಹ ಹತ್ತಾರು ಅವ್ಯವಸ್ಥೆಗಳು ರಸ್ತೆಯೊದ್ದಕ್ಕೂ ತುಂಬಿದೆ. ಕೆಲವೆಡೆ ಧರೆ ಜರಿದು ಚರಂಡಿ ಬಂದ್‌ ಆಗಿದ್ದರೆ, ಇನ್ನೊಂದೆಡೆ ಕಡಿದು ಹಾಕಿದ ಮರ ಗಿಡದ ತುಂಡು ಕಣಿ ತುಂಬಿ ನೀರು ಹರಿಯುತ್ತಿಲ್ಲ.

ರಾಜ್ಯ ಹೆದ್ದಾರಿ
ಪುತ್ತೂರು ಮತ್ತು ಉಪ್ಪಿನಂಗಡಿಯನ್ನು ಸಂಪರ್ಕಿಸುವ ಹೊಸ ರಾಜ್ಯ ಹೆದ್ದಾರಿ ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಇದು ಸಂಪರ್ಕಿಸುತ್ತದೆ. ಪುತ್ತೂರು ಮತ್ತು ಉಪ್ಪಿನಂಗಡಿ ಸಂಪರ್ಕಿಸುವ 10.2 ಕಿ.ಮೀ. ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿ-118 ಕ್ಕೆ ಸೇರ್ಪಡೆಗೊಳಿಸಲಾಗಿದೆ. ಪುತ್ತೂರು – ಉಪ್ಪಿನಂಗಡಿ ನಡುವೆ 13 ಕಿ.ಮೀ. ಅಂತರವಿದ್ದು, ಪ್ರತೀ ಐದು ನಿಮಿಷಕ್ಕೆ ಒಂದರಂತೆ ಬಸ್‌ ವ್ಯವಸ್ಥೆ ಇದೆ. ಇದಲ್ಲದೆ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತಿವೆ. ಮೈಸೂರು, ಮಡಿಕೇರಿ ಭಾಗದವರಿಗೆ ಪುತ್ತೂರು ಮೂಲಕ ಧರ್ಮಸ್ಥಳ ಸಂಪರ್ಕಿಸಲು ಕೂಡಾ ಇದು ಸಂಪರ್ಕ ರಸ್ತೆಯಾಗಿರುವ ಕಾರಣ ಸಾವಿರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ.

Advertisement

ಸಂಚಾರವಂತೂ ತ್ರಾಸ
ಹಾರಾಡಿಯಿಂದ ಕೇಪುಳುವರೆಗೆ ರಸ್ತೆ ವಿಸ್ತರಣೆ ಕಾರ್ಯ ನಡೆದಿದೆ. ಎರಡನೆ ಹಂತದಲ್ಲಿ ಕೆಮ್ಮಾಯಿ ಯಿಂದ ಸೇಡಿಯಾಪು ತನಕ, ಕೋಡಿಂಬಾಡಿಯಿಂದ ಶಾಂತಿನಗರ ತನಕ ರಸ್ತೆ ಪೂರ್ತಿ ವಿಸ್ತರಣೆ ಕಾರ್ಯ ನಡೆದಿದೆ. ಇದರಲ್ಲಿ ಕೋಡಿಂಬಾಡಿ-ಶಾಂತಿನಗರ ನಡುವೆ ಕೆಲಸ ಬಾಕಿ ಇದೆ. ಆರಂಭ ದಲ್ಲಿ ದ್ವಿಪಥ ರಸ್ತೆ ನಿರ್ಮಾಣದ ಪ್ರಸ್ತಾವನೆಯು ಅನಂತರ ಚತುಷ್ಪಥ ಯೋಜನೆ ಆಗಿ ಬದಲಾವಣೆಗೊಂಡಿತ್ತು. ಉಪ್ಪಿನಂಗಡಿ ತನಕವು ಚತುಷ್ಪಥ ರಸ್ತೆ ನಿರ್ಮಾಣಕ್ಕೂ ಗುದ್ದಲಿಪೂಜೆ ನಡೆದಿದೆ. ಒಟ್ಟಿನಲ್ಲಿ ವರ್ಷವಿಡೀ ರಸ್ತೆ ಕೆಲಸದಿಂದ ಸಂಚಾರವಂತೂ ತ್ರಾಸವೆನಿಸಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next