Advertisement

ತುಳು ವಿಶ್ವವಿದ್ಯಾನಿಲಯ ಪ್ರಾರಂಭಿಸಿದರೆ ಭಾಷೆಗೆ ಶಾಶ್ವತ ನೆಲೆ 

11:42 AM Nov 04, 2018 | |

ಪುತ್ತೂರು: ರಾಜಾಶ್ರಯ ಸಿಕ್ಕದೇ ಇರುವುದರಿಂದ ತುಳು ಹಿಂದೆ ಉಳಿಯಿತು. ಅಕಾಡೆಮಿ ಪ್ರಾರಂಭವಾದ ಬಳಿಕ ಒಂದಷ್ಟು ಬೆಳವಣಿಗೆ ಕಂಡಿದೆ. ತುಳುವಿಗೆ ವಿಶ್ವವಿದ್ಯಾಲಯ ಪ್ರಾರಂಭಿಸಿದರೆ ತುಳು ಭಾಷೆಗೆ ಶಾಶ್ವತ ನೆಲೆ ಸಿಗಲಿದೆ ಎಂದು ತುಳು ಸಂಘಟಕ ಸೇಸಪ್ಪ ರೈ ರಾಮಕುಂಜ ಹೇಳಿದರು. ಕುಂಬ್ರ ದುರ್ಗಾಪ್ರಸಾದ್‌ ರೈ ನೇತೃತ್ವದಲ್ಲಿ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಪಾತೆರಕತೆ – ತುಳು ಸಾಹಿತ್ಯ ಮರ್ಗಿಲ್‌ನಲ್ಲಿ ಅವರು ತುಳು ಪಠ್ಯದ ಕುರಿತಾಗಿ ಮಾತನಾಡಿದರು.

Advertisement

ತುಳು ಪಠ್ಯವನ್ನು ನಾಟಕ, ಸಿನೆಮಾ, ಯಕ್ಷಗಾನ ಹೊರತುಪಡಿಸಿ ಊಹಿಸಲು ಸಾಧ್ಯವಿಲ್ಲ. ಇದರ ಜತೆಗೆ ವಿದ್ಯೆಯನ್ನು ಕಲಿತುಕೊಂಡರೆ ತುಳು ಭಾಷೆ ಉನ್ನತಿಗೇರಲು ಸಾಧ್ಯ. ವಿದ್ಯೆ ತುಂಬಾ ಅಗತ್ಯ. ವಿದ್ಯೆ ಇಲ್ಲದೇ ಹೋದರೆ ಭಾಷೆಯ ಬೆಳವಣಿಗೆ ಅಸಾಧ್ಯ. ತುಳು ಭಾಷೆಯ ವಿದ್ಯೆ ಸಿಗದೇ ಹೋಗಿರುವುದು ತುಳುವಿನ ಹಿನ್ನಡೆಗೆ ಕಾರಣ. ಈ ಹಿನ್ನೆಲೆಯಲ್ಲಿ ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರನ್ನು ನೆನಪಿಸಿಕೊಳ್ಳಲೇಬೇಕು. ಅವರ ಕಲ್ಪನೆಯಲ್ಲಿ ಅಕಾಡೆಮಿ ಸ್ಥಾಪನೆಯಾದ ಬಳಿಕ, ತುಳು ಒಂದಷ್ಟು ಅಭಿವೃದ್ಧಿ ಕಂಡಿದೆ ಎಂದರು.

ಪಂಚದ್ರಾವಿಡ ಭಾಷೆಗಳಲ್ಲಿ ತುಳು ಮಾತ್ರ ಹಿಂದೆ ಬಿದ್ದಿದೆ. ಎಸೆಸೆಲ್ಸಿ, ಪದವಿ, ಈಗ ಸ್ನಾತಕೋತ್ತರದಲ್ಲೂ ತುಳು ಪಠ್ಯ ಸೇರಿಕೊಂಡಿದೆ. ಇದರ ನಡುವೆ ಪಿಯುಸಿಯಲ್ಲಿ ಮಾತ್ರ ತುಳು ಇಲ್ಲ. ಈ ಸ್ಥಳವನ್ನು ತುಂಬಿಸುವ ಕೆಲಸ ಆಗಬೇಕಿದೆ. ಮುಂದೆ ತುಳು ವಿಶ್ವವಿದ್ಯಾಲಯ ಪ್ರಾರಂಭಿಸಬೇಕು. ಅದು ಕಷ್ಟವೇ ಅಲ್ಲ. ಇದು ಸಾಧ್ಯವಾದರೆ, ಮುಂದೆ ಸಂಶೋಧನೆಗೂ ಬಾಗಿಲು ತೆರೆದುಕೊಳ್ಳುತ್ತದೆ ಎಂದರು.

ತುಳು ಪ್ರಸಂಗ ಪುಸ್ತಕ ಬರಲಿ
ತುಳು ಯಕ್ಷಗಾನದ ಬಗ್ಗೆ ಮಾತನಾಡಿದ ಹಿರಿಯ ಕಲಾವಿದ ಕೆ.ಎಚ್‌. ದಾಸಪ್ಪ ರೈ, ಒಂದು ಕಾಲದಲ್ಲಿ ತುಳು ಯಕ್ಷಗಾನವೇ ಮಾಡಬಾರದು ಎಂಬ ನಿರ್ಬಂಧ ಹೇರಿದ್ದರು. ಇದನ್ನು ವಿರೋಧಿಸಿ 5 ರೂ. ಟಿಕೆಟನ್ನು 50 ಪೈಸೆಗೆ ನೀಡಿ, ತುಳು ಯಕ್ಷಗಾನ ನಡೆಸಿದ್ದೇವೆ. ತುಳು ವಿರೋಧಕ್ಕೆ ಪ್ರತಿಭಟನೆಯಾಗಿ ಕಪ್ಪು ಪಟ್ಟಿ ಧರಿಸಿ, ನೆಲದಲ್ಲೇ ಕುಳಿತು ಯಕ್ಷಗಾನ ನೋಡಿದ್ದೇವೆ. ಸ್ಟಾರ್‌ ಕಲಾವಿದರು ಕಡಿಮೆಯಾದರೂ ಯಕ್ಷಗಾನ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮುಂದೆ ತುಳು ಪ್ರಸಂಗಗಳ ಪುಸ್ತಕ ಪ್ರಕಟಿಸುವಂತೆ ಆಗಬೇಕು ಎಂದರು. ತುಳು ಯಕ್ಷಗಾನದಲ್ಲಿ ಕನ್ನಡ, ಸಂಸ್ಕೃತ ಬಳಕೆ ಬರುತ್ತದೆ. ಆದರೆ ಕನ್ನಡ ಯಕ್ಷಗಾನದಲ್ಲಿ ತುಳು ಬಳಕೆಗೆ ನಿರ್ಬಂಧ ಹೇರಲಾಗುತ್ತಿದೆ ಎಂದು ಪ್ರಶ್ನಿಸಿದಾಗ, ಸಂಸ್ಕೃತ ಶ್ರೀಮಂತ ಭಾಷೆ. ಇತರ ಭಾಷೆಗಳಿಗೂ ಸಂಸ್ಕೃತದ ಶಬ್ದಗಳನ್ನು ಬಳಸಲಾಗುತ್ತಿದೆ. ಅದೇ ರೀತಿ ತುಳುವಿಗೂ ಬಂದಿದೆ. ಇದರ ಬಗ್ಗೆ ಗೊಂದಲ ಬೇಡ ಎಂದು ದಾಸಪ್ಪ ರೈ ಹೇಳಿದರು.

ನಾಟಕದಿಂದ ಕಿಸೆ ಖಾಲಿ
ರಂಗಕರ್ಮಿ ತಾರಾನಾಥ ಪಿ. ಪುತ್ತೂರು ಮಾತನಾಡಿ, ನಾಟಕ ಆಡಿ ಕಿಸೆ ಖಾಲಿ ಮಾಡಿಕೊಂಡ ದಿನಗಳಿದ್ದವು. ಆದರೆ ಇಂದು ನಾಟಕ ಆಡಿ ಕಿಸೆ ತುಂಬಿಸುವ ದಿನಗಳು ಬಂದಿವೆ. ಒಳ್ಳೆಯ ದಿನಗಳು ಇಂದು ಸಿಕ್ಕಿದೆ ಎಂದರೆ ಅದರ ಹಿಂದೆ ಶ್ರಮ ಇದೆ ಎಂದು ತಿಳಿಸಿದರು. ಸಮ್ಮೇಳನಾಧ್ಯಕ್ಷ ಡಾ| ಬಿ.ಎ. ವಿವೇಕ್‌ ರೈ ಉಪಸ್ಥಿತರಿದ್ದರು. ದುರ್ಗಾಪ್ರಸಾದ್‌ ಕುಂಬ್ರ ಸ್ವಾಗತಿಸಿ, ಸರಿತಾ ರಾಮಕುಂಜ ವಂದಿಸಿದರು.

Advertisement

ತಾಂತ್ರಿಕ ರೂಪ ಸಿನೆಮಾ
ಚಲನಚಿತ್ರ ನಟ ಶಿವಧ್ವಜ್‌ ಮಾತನಾಡಿ, ನಾಟಕದ ತಾಂತ್ರಿಕ ರೂಪವೇ ತುಳು ಸಿನೆಮಾ. ಕರಾವಳಿಯಲ್ಲಿ ಅತಿಹೆಚ್ಚು ಪ್ರಾದೇಶಿಕ ಭಾಷೆಗಳನ್ನು ಮಾತನಾಡುತ್ತಾರೆ. ಈ ಎಲ್ಲ ಭಾಷೆಗಳಲ್ಲೂ ಸಿನೆಮಾಗಳು ಬರುತ್ತಿವೆ. ತುಳುವಿನಲ್ಲಿ ವರ್ಷಕ್ಕೆ 15, 20 ಸಿನೆಮಾಗಳು ಬಿಡುಗಡೆಯಾಗುತ್ತಿವೆ. ತುಳು ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಭಾಷೆಯನ್ನು ಉಳಿಸುವಲ್ಲಿ ತುಳು ಸಿನೆಮಾ ಪ್ರಮುಖ ಪಾತ್ರ ವಹಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next