ನಗರ: ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕಬಿಕೂಟದಲ್ಲಿ ವಾಚಿಸಿದ 10 ಮಂದಿ ಕವನಗಳಲ್ಲಿ ದಾಯೆಗ್ ಮಾನ್ಯ ನಿಕ್ಕ್ ಈ ಬುದ್ಧಿ, ಒಕ್ಕೆಲುದಕ್ಲು, ಕೊರತೆನೇ ಇಜ್ಜಿ ಕವನಗಳು ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದವು.
ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಅವರು ವಾಚಿಸಿದ ದಾಯೆಗ್ ಮಾನ್ಯ (ಮನುಷ್ಯ) ನಿಕ್ಕ್ ಈ ಬುದ್ಧಿ… ನಿನ್ನ ಕೈಟ್ ಉಂಡು ತಲವಾರ್ ಕತ್ತಿ- ಕವನದಲ್ಲಿ ವಾಸ್ತವತೆಯಲ್ಲಿ ಮನುಷ್ಯನ ಹಿಂಸಾ ಪ್ರವೃತ್ತಿ ಹಾಗೂ ತಲವಾರು ಸಂಸ್ಕೃತಿಯನ್ನು ವಿಡಂಬನೆಗೊಳಿಸಲಾಗಿತ್ತು. ವಿಕೃತಿಯನ್ನು ಬಿಟ್ಟು ಪ್ರಾಮಾಣಿಕ ಹಾಗೂ ಸತ್ಯದ ಮಾರ್ಗದಲ್ಲಿ ನಡೆದರೆ ನಮ್ಮ ಬದುಕು ನೆಮ್ಮದಿಯನ್ನು ಕಾಣಲು ಸಾಧ್ಯ ಎಂಬ ಆಶಾವಾದವನ್ನು ಈ ಕವನದಲ್ಲಿ ಅಭಿವ್ಯಕ್ತಗೊಳಿಸಲಾಗಿತ್ತು.
ಕಬಿಕೂಟದ ಕವನಗಳಲ್ಲಿ ಪತ್ರಕರ್ತ ಸಿ.ಶೇ. ಕಜೆಮಾರ್ ಅವರು ವಾಚಿಸಿದ ಒಕ್ಕೆಲುದಕ್ಲು’ ಹೆಚ್ಚು ಅರ್ಥಪೂರ್ಣವಾಗಿ ಬಿಂಬಿತವಾಯಿತು. ಕವನವೊಂದು ರೂಪಕ ವಾಗಿ ಕಟ್ಟುವ ಜಾಣ್ಮೆ ಇದರಲ್ಲಿ ವ್ಯಕ್ತವಾಗಿತ್ತು. ಪ್ರಕೃತಿಯ ಶಕ್ತಿಯ ಮುಂದೆ ಮಾನವನ ಯಾವುದೇ ಶಕ್ತಿಯೂ ನಿಂತುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಪ್ರಕೃತಿಯ ಒಕ್ಕಲು. ಪ್ರಕೃತಿ ಮನಸ್ಸು ಮಾಡಿದರೆ ಯಾರನ್ನೂ ಒಕ್ಕಲೆಬ್ಬಿಸಬಹುದು. ಇದಕ್ಕೆ ಮಡಿಕೇರಿ, ಕೇರಳ ಉದಾಹರಣೆಯನ್ನೂ ಕವನದಲ್ಲಿ ನೀಡಲಾಗಿತ್ತು.
ಮಲ್ಲಿಕಾ ಜೆ. ರೈ ಗುಂಡ್ಯಡ್ಕ ಅವರು ವಾಚಿಸಿದ ‘ಕೊರತೆನೇ ಇಜ್ಜಿ’ ಬೇಸಾಯ ಸಂಸ್ಕೃತಿಯನ್ನು ಬಿಂಬಿಸಿದ ಹಾಗೂ ಸ್ವಾವಲಂಬನೆಯ ಅಗತ್ಯವನ್ನು ಒತ್ತಿ ಹೇಳಿದ ಕವನವಾಗಿತ್ತು. ಉಳಿದಂತೆ ಕವಿತಾ ಅಡೂರು ಅವರ ನಿರ್ಧಾರ, ಶ್ರೀಕಾಂತ್ ಪೂಜಾರಿ ಬಿರಾವು ಅವರ ಪೊರ್ಲು ಈ ತುಳುನಾಡ್, ಶಾಂತಾ ಕುಂಟಿನಿ ಅವರ ಭಾಷೆ ಬಗ್ಗೆ ದ್ವೇಷ ಬೇಡ, ವಸಂತಲಕ್ಷ್ಮೀ ಅವರ ತುಳು ವೈಭವ, ಆದಂ ಹೆಂತಾರು ಅವರ ನೆನಪು, ಉಮಾಪ್ರಸಾದ್ ನಡು ಬೈಲು ಅವರ ತುಳುನಾಡ್ ಬೆಳಗಡ್ ಹಾಗೂ ವಿಜಯ ಕುಮಾರ್ ಭಂಡಾರಿ ಹೆಬ್ಟಾರ್‌ಬೈಲು ಕೆದಂಬಾಡಿ ಅವರ ದಾರೆಗೊಂಜಿ ಓಲೆ ಎಂಬ ಕವನಗಳನ್ನು ವಾಚಿಸಲಾಯಿತು. ಕಬಿಕೂಟದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಮಾತನಾಡಿ, ಕವಿಗಳು ಅರ್ಥಪೂರ್ಣವಾಗಿ ಕವನಗಳನ್ನು ಕಟ್ಟಿದಾಗ ಮಾತ್ರ ಕೂಟಗಳಿಗೆ ಮೌಲ್ಯ ಬರುತ್ತದೆ.
ಕವನಗಳು ಸತ್ವಪೂರ್ಣ ಆಗಿರಬೇಕು. ಕವನ ಹೊಸೆಯಲು ಶ್ರಮ ಪಡಬೇಕು. ಕವನದ ವಸ್ತುಗಳ ಆಯ್ಕೆಯಲ್ಲೂ ಗಟ್ಟಿ ಇರಬೇಕು ಎಂದರು. ಕಬಿಕೂಟವನ್ನು ಶಿಕ್ಷಕ ರಮೇಶ್ ಉಳಯ ನಿರೂಪಿಸಿದರು.