Advertisement
ಕಳೆದ ಕೆಲವು ವರ್ಷಗಳಿಂದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಗಳ ಕೊರತೆ ಎದುರಿಸುತ್ತಿದೆ. ಮಂಗಳೂರು ವಿ.ವಿ.ವ್ಯಾಪ್ತಿಯ ಕೆಲವು ಸರಕಾರಿ ಕಾಲೇಜುಗಳ ಸ್ಥಿತಿಯು ಇದೇ ತೆರನಾಗಿದ್ದು ನಾನಾ ಕಾರಣಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕ್ಷೀಣಿಸಿದೆ.
2007 ರಲ್ಲಿ ಪುತ್ತೂರಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಯಿತು. ಅಂದ ಹಾಗೆ, ಇದು ನಗರದ ಮೊದಲ ಸರಕಾರಿ ಪದವಿ ಕಾಲೇಜು. ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದಲ್ಲಿ ಪ್ರಾರಂಭಗೊಂಡು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿತ್ತು. 2009 ರಲ್ಲಿ ನಗರದಿಂದ ಐದು ಕಿ.ಮೀ. ದೂರದಲ್ಲಿ ಇರುವ ಜಿಡೆಕಲ್ಲಿಗೆ ಸ್ಥಳಾಂತರಗೊಂಡು ಸ್ವಂತ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಗೊಂಡಿತ್ತು. 500ರಿಂದ 40ಕ್ಕೆ ಇಳಿಯಿತು
ನೆಲ್ಲಿಕಟ್ಟೆಯಲ್ಲಿ ಇರುವಾಗ ಸುಮಾರು 500ರ ತನಕ ವಿದ್ಯಾರ್ಥಿ ಸಂಖ್ಯೆ ಹೊಂದಿದ್ದ ಈ ಕಾಲೇಜು ಪ್ರಸ್ತುತ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಕೇವಲ 40 ವಿದ್ಯಾರ್ಥಿಗಳನ್ನಷ್ಟೇ ಹೊಂದಿದೆ. ಬಿಎ, ಬಿಕಾಂ, ಬಿಸಿಎ ವಿಭಾಗ ಇಲ್ಲಿದೆ. ಆದರೆ ಬಿಸಿಎ ವಿಭಾಗಕ್ಕೆ ವಿದ್ಯಾರ್ಥಿಗಳೇ ಇಲ್ಲದ ಕಾರಣ ಅದಿನ್ನು ತೆರದಿಲ್ಲ. ಬಿಎ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ. ತೃತೀಯ ವರ್ಷದಲ್ಲಿ ಮಾತ್ರ ವಿದ್ಯಾರ್ಥಿಗಳು ಇದ್ದಾರೆ. ಬಿಕಾಂನಲ್ಲಿ ಪ್ರಥಮ ಮತ್ತು ತೃತೀಯ ವರ್ಷ ತರಗತಿಯಲ್ಲಿ ವಿದ್ಯಾರ್ಥಿಗಳಿದ್ದರೆ ದ್ವಿತೀಯ ಬಿಕಾಂನಲ್ಲಿ ವಿದ್ಯಾರ್ಥಿ ಸಂಖ್ಯೆ ಶೂನ್ಯ.
Related Articles
ಮೊದಲ ವರ್ಷದ ಬಿಎ, ಬಿಸಿಎಯಲ್ಲಿ ವಿದ್ಯಾರ್ಥಿಗಳು ಇಲ್ಲದ ಕಾರಣ ಕ್ರಮೇಣ ಅವೆರೆಡು ಮುಚ್ಚುವ ಭೀತಿಯು ಇದೆ. ಬಿಕಾಂನಲ್ಲಿ ಬೆರಳೆಣಿಕೆಯಷ್ಟೇ ವಿದ್ಯಾರ್ಥಿಗಳಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇಡೀ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯವಾಗಬಹುದು. ಹೀಗಾಗಿ ಇಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಪೂರಕವಾಗಿ ಸ್ನಾತಕೋತ್ತರ ವಿಭಾಗ ತೆರೆಯಬೇಕು, ಸಾರಿಗೆ ವ್ಯವಸ್ಥೆಯ ಸುಧಾರಣೆಯಾಗಬೇಕು ಅನ್ನುವ ಬೇಡಿಕೆ ಇದೆ.
Advertisement
ಎಲ್ಲ ಕಾಲೇಜುಗಳ ಕಥೆಯೇ ಇದೇ ಪುತ್ತೂರು ಗಡಿಗೆ ಹೊಂದಿಕೊಂಡಿರುವ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಥೆಯೂ ಇಂತಹುದೆ. ಈ ವರ್ಷ ಇರುವ ವಿದ್ಯಾರ್ಥಿ ಸಂಖ್ಯೆ 92. ಕಳೆದ ವರ್ಷ 143 ಮಂದಿ ವಿದ್ಯಾರ್ಥಿಗಳಿದ್ದರು ಅನ್ನುತ್ತಿದೆ ಕಾಲೇಜಿನ ಮಾಹಿತಿ. ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇ ಇದೆ. ಇಲ್ಲಿ ವಿದ್ಯಾರ್ಥಿಗಳಿದ್ದಾರೆ ಆದರೆ ಸ್ವಂತ ಕಟ್ಟಡ ಇಲ್ಲ
ಪುತ್ತೂರು ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ 600 ಕ್ಕೂ ಅಧಿಕ ಇದೆ. ಆದರೆ ಇಲ್ಲಿನ ಸಮಸ್ಯೆ ಸ್ವಂತ ಕಟ್ಟಡ ಇಲ್ಲದಿರುವುದು. ಹಳೆಯ ಜೈಲು ಕಟ್ಟಡದೊಳಗೆ ಇಲ್ಲಿ ವ್ಯಾಸಂಗ ಮಾಡಬೇಕಾದ ಸ್ಥಿತಿ ಇದೆ. ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಂಡು ಹಲವು ವರ್ಷಗಳು ಕಳೆದಿದ್ದು ಜಾಗದ ಸಮಸ್ಯೆ ಕಾಡಿತ್ತು. ಅಂತೂ ಕಳೆದ ವರ್ಷ ಬೊಳುವಾರಿನಲ್ಲಿ ಜಾಗ ನಿಗದಿಪಡಿಸಲಾಗಿತ್ತು. ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನಡೆದಿದ್ದರೂ ಅದಿನ್ನೂ ಅಪೂರ್ಣ ಸ್ಥಿತಿಯಲ್ಲಿಯೇ ಇದೆ. ಕಾಲೇಜಿಗೆ ಸಂಪರ್ಕವೇ ಕಷ್ಟ
ಕೇಂದ್ರ ಸ್ಥಾನದಲ್ಲಿದ್ದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಅನ್ನು ಐದು ಕಿ.ಮೀ. ದೂರದ ಜಿಡೆಕಲ್ಲಿನ ಗುಡ್ಡದ ಮೇಲೆ ಸ್ಥಾಪನೆ ಮಾಡಲಾಯಿತು. ಹಚ್ಚ ಹಸುರಿನ ಪ್ರಶಾಂತ ವಾತಾವರಣವಾಗಿದ್ದರೂ ಇಲ್ಲಿ ಸಂಪರ್ಕಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಪುತ್ತೂರು ತಾಲೂಕಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳು ನೇರವಾಗಿ ಜಿಡೆಕಲ್ಲಿಗೆ ಹೋಗಲು ವಾಹನ ವ್ಯವಸ್ಥೆ ಇಲ್ಲ. ನಗರದ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾಲೇಜಿನ ಸಂಪರ್ಕಕ್ಕೆಂದೇ ಮೀಸಲಿಟ್ಟಿರುವ ಬಸ್‌ನಲ್ಲಿ ಸಂಚರಿಸಬೇಕು. ಅದು ಕೈ ತಪ್ಪಿದರೆ ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕು. ಇದು ಕೂಡ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖಕ್ಕೆ ಕಾರಣ ಎನ್ನಲಾಗಿದೆ. -ಕಿರಣ್ ಪ್ರಸಾದ್ ಕುಂಡಡ್ಕ