Advertisement
ಒಂದು ರೀತಿಯ ನೆಮ್ಮದಿ ನಮ್ಮೊಳಗೆ ಸೇರಿರುತ್ತದೆ. ಪುತ್ತೂರಿಗೆ ಬರುವವರು ಯಾರೂ ಅವನ ದರ್ಶನವನ್ನು ಪಡೆಯದೇ ಹಿಂದಿರುಗುವುದಿಲ್ಲ. ಭಕ್ತರು ಇವನನ್ನು ಹತ್ತೂರ ಒಡೆಯ ಎಂದು ಭಕ್ತಿಯಿಂದ ಕರೆಯುತ್ತಾರೆ. ಸುತ್ತ ಹತ್ತೂರಿನ ಜನರ ಬಳಿ ಹತ್ತೂರ ಒಡೆಯ ಯಾರು ಎಂದರೆ ಪುತ್ತೂರು ಮಹಾಲಿಂಗೇಶ್ವರ ಎಂದು ಖಡಾಖಂಡಿತವಾಗಿ ಹೇಳುತ್ತಾರೆ.
Related Articles
Advertisement
ವಾರದ ಪ್ರಾರಂಭ ಅಂದರೆ ಸೋಮವಾರದ ಮುಂಜಾನೆ ಸನ್ನಿಧಿಯಲ್ಲಿ ಜನಸಾಗರವೇ ಹರಿದುಬರುತ್ತದೆ. ಸೋಮವಾರ ಈಶನ ದಿನವಾಗಿದ್ದು, ವಾರದ ಪ್ರಾರಂಭದಲ್ಲೇ ಶಿವನನ್ನು ನೆನೆದು ಕೆಲಸ ಪ್ರಾರಂಭಿಸಿದರೆ ಎಲ್ಲವೂ ಶುಭವಾಗುವುದು ಎಂಬುದು ಜನರ ನಂಬಿಕೆ. ಈ ದಿನ ಈಶನಿಗೆ ಎಳ್ಳೆಣ್ಣೆ, ಎಳನೀರು, ತೆಂಗಿನಕಾಯಿ ಮುಂತಾದವುಗಳನ್ನು ಸಮರ್ಪಿಸಿ ಒಳಿತನ್ನು ಮಾಡು ಎಂದು ಜನ ಬೇಡಿಕೊಳ್ಳುತ್ತಾರೆ.
ದೇವಸ್ಥಾನದ ಎದುರು ಗದ್ದೆ ಇದ್ದು ಪಕ್ಕದಲ್ಲೇ ರಥಬೀದಿ ಇದೆ. ರಥಬೀದಿ ಪ್ರವೇಶಿಸುತ್ತಿದ್ದಂತೆಯೇ ಅಲ್ಲೊಂದು ಭಕ್ತಿಯ ಭಾವ ನಮ್ಮಲ್ಲಿ ಮೂಡುತ್ತದೆ. ಒಳಗೆ ಪ್ರವೇಶಿಸುವ ನಮಗೆ ಎಡಭಾಗದಲ್ಲಿ ದೈವಗಳಾದ ಪಂಜುರ್ಲಿ , ಪಿಲಿಭೂತ, ರಕ್ತೇಶ್ವರಿ ದೈವಗಳ ದರ್ಶನವಾಗುತ್ತದೆ. ಹೀಗೆ ಸುಬ್ರಮಣ್ಯ, ಶಾಸ್ತಾರ, ಮಹಾಗಣಪತಿ, ಉಳ್ಳಾಲ್ತಿ, ದೇವಿಯ ದರ್ಶನವಾಗುತ್ತದೆ.
ದೇವಾಲಯದ ಮಧ್ಯದಲ್ಲಿ ಮಹಾಲಿಂಗೇಶ್ವರ ಸುತ್ತಲೂ ಈ ಎಲ್ಲಾ ದೈವ ದೇವರುಗಳ ಗುಡಿ ಇದೆ. ಹಾಗೂ ನಾವು ದೇವಾಲಯಕ್ಕೆ ಪ್ರವೇಶಿಸುತ್ತಿದಂತೆಯೇ ನಂದಿಯ ವಿಗ್ರಹ ಕಾಣುತ್ತದೆ. ಇದು ಶಿವನ ಮುಂಭಾಗದಲ್ಲಿದೆ. ಉಳ್ಳಾಲ್ತಿ ದೈವದ ನಡೆಯನ್ನು ಮಹಾಲಿಂಗೇಶ್ವರ ನ ಹಿಂಭಾಗಲ್ಲಿ ಕಾಣಬಹುದು. ಇದಕ್ಕೂ ತನ್ನದೇ ಆದ ಪೌರಾಣಿಕ ಕಥೆ ಇದೆ. ಮತ್ತು ಆ ದೈವದ ಹೆಜ್ಜೆ ಇರುವ ಸ್ಥಳದ ಬಾಗಿಲು ತೆರೆದೇ ಇರುತ್ತದೆ. ಆ ಪುಣ್ಯ ಪಾದಗಳಿಗೂ ದಿನಾ ಪೂಜೆ ಸಲ್ಲುತ್ತದೆ. ಭಕ್ತರೆಲ್ಲಾ ಭಕ್ತಿಯಿಂದ ಆ ಹೆಜ್ಜೆಗೆ ನಮಸ್ಕರಿಸಿ ಮುಂದೆ ಸಾಗುತ್ತಾರೆ. ದೇವಾಲಯದ ಹಿಂಭಾಗದಲ್ಲಿ ಒಂದು ಪವಿತ್ರ ಕೊಳವೂ ಇದೆ.
ಒಂದು ಸಿದ್ಧಾಂತದ ಪ್ರಕಾರ, ಪುತ್ತೂರು ಎಂಬ ಹೆಸರು ಕನ್ನಡ ಭಾಷೆಯ “ಮುತ್ತು” ಎಂಬ ಪದದಿಂದ ಬಂದಿದೆ. ಹಾಗಾಗಿ ಪುತ್ತೂರಿನ ಹೆಸರು ಮುತ್ತೂರು ಎಂದಾಗಿತ್ತು. ನಂತರ ನಿಧಾನವಾಗಿ ಇದು ತಾನಾಗಿಯೇ ಪುತ್ತೂರು ಎಂಬ ಹೆಸರಾಗಿ ಬದಲಾಯಿತು. ಶತಮಾನಗಳ ಹಿಂದೆ ಬರಗಾಲದ ಸಮಯದಲ್ಲಿ ಬ್ರಾಹ್ಮಣರು ಯಾಗ ಮಾಡಿ ಅನ್ನ ಸಂತರ್ಪಣೆಯನ್ನು ಮಾಡುತ್ತಾರೆ.
ಇದರಿಂದ ಕೊಳದಲ್ಲಿ ವರತೆಗಳು ಬರಲು ಪ್ರಾರಂಭವಾಗುತ್ತದೆ. ಕೊಳದಲ್ಲಿ ನೀರು ತುಂಬಿ ತುಳುಕುತ್ತದೆ. ಕೆಲ ಸಮಯದ ಬಳಿಕ ನೋಡುವಾಗ ಆ ಕೆರೆಯಲ್ಲಿ ಮುತ್ತಿನ ಚಿಪ್ಪುಗಳು ಕಾಣಸಿಗುತ್ತವೆ. ಇದು ಅನ್ನ ಸಂತರ್ಪಣೆಯ ಅನ್ನದ ಕಾಳುಗಳೇ ಮುತ್ತಾಗಿವೆ ಎಂಬ ನಂಬಿಕೆ ಇಲ್ಲಿತ್ತು . ಅದರಿಂದ ಇದಕ್ಕೆ ಮುತ್ತೂರು ಎಂಬ ಹೆಸರು ಬಂತು ಎಂದು ಜನರು ಹೇಳುತ್ತಾರೆ.
ಪುತ್ತೂರ ಒಡೆಯನ ಜಾತ್ರೆಯಂತೂ ಸುಮಾರು 10 ದಿನಗಳ ಕಾಲ ನಡೆಯುತ್ತದೆ. ವರ್ಷವೂ ಏಪ್ರಿಲ್ 10ರಂದು ಮಹಾದೇವನ ಧ್ವಜಾರೋಹಣ ನಡೆಯುತ್ತದೆ. ಧ್ವಜಾರೋಹಣ ಗೊಂಡ ನಂತರ ಪ್ರತಿ ಅಪರಾಹ್ನ ದೇವರ ದರ್ಶನ ಬಲಿ ನಡೆದು, ಸಂಜೆ ಮತ್ತೆ ಬಲಿಯ ಬಳಿಕ ಕಟ್ಟೆ ಪೂಜೆಗೆ ಈಶ ತೆರಳುತ್ತಾನೆ. 5ನೇ ದಿನ ಪೇಟೆ ಸವಾರಿ ನಡೆದು 6ನೇ ದಿನ ಉಳ್ಳಾಲ್ತಿ ಹಾಗೂ ಮಹಾಲಿಂಗೇಶ್ವರನ ಭೇಟಿ ನಡೆಯುತ್ತದೆ. ಇದನ್ನು ದೈವ ದೇವರ ಭೇಟಿ ಎಂದು ಹೇಳುತ್ತಾರೆ.
ಈ ದಿನ ಭಕ್ತರೆಲ್ಲಾ ಉಳ್ಳಾಲ್ತಿ ಗೆ ಮಲ್ಲಿಗೆಯನ್ನು ಅರ್ಪಿಸುತ್ತಾರೆ. ಅಂದು ಇಡೀ ಪುತ್ತೂರೇ ಮಲ್ಲಿಗೆಯ ಘಮದಿಂದ ತುಂಬಿರುತ್ತದೆ. ಹೀಗೆ 7ನೇ ದಿನ ಮಹಾಲಿಂಗೇಶ್ವರನ ಮಹಾ ರಥೋತ್ಸವ ನಡೆಯುತ್ತದೆ. ಈ ದಿನ ವಿವಿಧ ಸ್ಥಳಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ. ರಥೋತ್ಸವದ ನಂತರ ದೇವರು ವೀರಮಂಗಲದ ಕುಮಾರಧಾರ ನದಿಗೆ ಸ್ನಾನಕ್ಕೆಂದು ತೆರಳುತ್ತಾನೆ. ಸ್ನಾನಕ್ಕೆ ತೆರಳುವಾಗ ಭಕ್ತರೆಲ್ಲ ಬರಿಗಾಲಿನಲ್ಲೇ ಹೋಗುತ್ತಾರೆ. 10ನೇ ದಿನ ದ್ವಜ ಅವರೋಹಣವಾಗಿ ಮತ್ತೆ ಈಶ ಆಲಯದಲ್ಲಿ ನೆಲೆಯಾಗುತ್ತಾನೆ. ಹತ್ತು ದಿನಗಳ ಕಾಲ ನಡೆಯುವ ಈ ಜಾತ್ರಾ ಸಂಭ್ರಮವನ್ನು ಕಣ್ತುಂಬಿಕೊಂಡವನೇ ಪುಣ್ಯವಂತ.
ಹೀಗೆ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ಪೌರಾಣಿಕ ಹಿನ್ನಲೆಯಿರುತ್ತದೆ. ಮಹಾಲಿಂಗೇಶ್ವರನನ್ನು ಪುತ್ತೂರು ಮಾತ್ರವಲ್ಲದೆ ಹತ್ತೂರು ಪ್ರಾರ್ಥಿಸುತ್ತದೆ. ಭಕ್ತಿಯಿಂದ ಕೇಳಿಕೊಂಡರೆ ಸಕಲವನ್ನೂ ಮಹಾದೇವ ದಯಪಾಲಿಸುತ್ತಾನೆ. ಹತ್ತೂರ ಜನರನ್ನು ಪ್ರೀತಿಯಿಂದ ಪೊರೆಯುತ್ತಾನೆ.
-ಲಾವಣ್ಯ ಎಸ್
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು