ಪುತ್ತೂರು: ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಸಲ್ಲಿಕೆಯಾಗಿದ್ದ 15 ನಾಮಪತ್ರಗಳ ಪೈಕಿ ಎರಡು ಬುಧವಾರ ತಿರಸ್ಕೃತಗೊಂಡಿವೆ. 2 ನಾಮಪತ್ರ ಸಲ್ಲಿಸಿದ್ದ ಸಂಜೀವ ಮಠಂದೂರು ಅವರ ನಾಮಪತ್ರವನ್ನು ಒಂದು ಎಂದು ಪರಿಗಣಿಸಲಾಗಿದೆ. ಅಂತಿಮವಾಗಿ 12 ಮಂದಿ ಕಣದಲ್ಲಿ ಉಳಿದಂತಾಗಿದೆ.
ಸಹಾಯಕ ಆಯುಕ್ತ, ಚುನಾವಣಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರು ಬುಧವಾರ ಪುತ್ತೂರು ಮಿನಿ ವಿಧಾನಸೌಧದ ಕಚೇರಿಯಲ್ಲಿ ಮತಪತ್ರಗಳ ಪರಿಶೀಲನೆ ನಡೆಸಿದರು.
ಬಿಜೆಪಿ ಹೆಚ್ಚುವರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಗೋಪಾಲಕೃಷ್ಣ ಹೇರಳೆ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಶ್ರಫ್ ಕಲ್ಲೇಗ ಅವರ ನಾಮ ಪತ್ರಗಳು ತಿರಸ್ಕೃತಗೊಂಡಿವೆ. ಅಶ್ರಫ್ ಕಲ್ಲೇಗ 2 ನಾಮಪತ್ರ ಸಲ್ಲಿಸಿದ್ದು, ಪಕ್ಷೇತರ ಉಮೇದುವಾರಿಕೆಗೆ ತೊಡಕಾಗಿಲ್ಲ. ಎ. 23ರಂದು ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ, ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು (2 ನಾಮಪತ್ರ), ಸಸಂತ್ರ ತುಳುನಾಡು ಪಕ್ಷದ ವಿದ್ಯಾಶ್ರೀ, ಪ್ರಜಾ ಪರಿವರ್ತನಾ ಪಕ್ಷದಿಂದ ಶೇಖರ್ ಮಾಡಾವು, ಪಕ್ಷೇತರ ಅಭ್ಯರ್ಥಿ ಅಮರನಾಥ ನಾಮಪತ್ರ ಸಲ್ಲಿಸಿದ್ದರು.
ಎ. 24ರಂದು ಜೆಡಿಎಸ್ ಅಭ್ಯರ್ಥಿ ಐ.ಸಿ. ಕೈಲಾಸ್, ಜೆಡಿಯುನಿಂದ ಮಜೀದ್ ಎನ್.ಕೆ., ಆಲ್ ಇಂಡಿಯಾ ಮಹಿಳಾ ಎಂಪವರ್‌ವೆುಂಟ್ ಪಾರ್ಟಿಯ (ಎಂಇಪಿ) ಶಬನಾ ಎಸ್. ಶೇಖ್, ಸಾಮಾನ್ಯ ಜನತಾ ಪಕ್ಷದ ಎಂ.ಎಸ್. ರಾವ್, ಪಕ್ಷೇತರ ಅಭ್ಯರ್ಥಿಗಳಾಗಿ ಚೇತನ್, ಬಶೀರ್ ಬೂಡಿಯಾರ್, ಅಶ್ರಫ್ ಕಲ್ಲೇಗ ಅವರ ನಾಮಪತ್ರಗಳು ಸ್ವೀಕೃತಿಯಾಗಿವೆ. ಹೀಗಾಗಿ ಒಟ್ಟು 12 ಮಂದಿ ಕಣದಲ್ಲಿದ್ದಾರೆ. ಇವರಲ್ಲಿ ಎಷ್ಟು ಮಂದಿ ನಾಮಪತ್ರ ಹಿಂದೆಗೆದುಕೊಳ್ಳುತ್ತಾರೆ ಎನ್ನುವುದು ಎ. 27ರಂದು ಅಂತಿಮವಾಗಲಿದೆ.
7 ನಾಮಪತ್ರ ಕ್ರಮಬದ್ಧ
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿದ ಎಲ್ಲ ಏಳು ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ. ಚುನಾವಣಾಧಿಕಾರಿ ಬಿ.ಟಿ. ಮಂಜುನಾಥ ಅವರ ಉಪಸ್ಥಿತಿಯಲ್ಲಿ ನಾಮಪತ್ರ ಪರಿಶೀಲನೆ ನಡೆಯಿತು. ಬಿಜೆಪಿಯಿಂದ ಹಾಲಿ ಶಾಸಕ ಎಸ್. ಅಂಗಾರ, ಕಾಂಗ್ರೆಸ್‌ನಿಂದ ಡಾ| ರಘು, ಬಿಎಸ್‌ಪಿಯಿಂದ ರಘುವೀರ್ ಧರ್ಮಸೇನ, ಪಕ್ಷೇತರ ಅಭ್ಯರ್ಥಿಗಳಾಗಿ ಸುಂದರ ಕೆ., ರಮೇಶ ಕೆ., ಚಂದ್ರಶೇಖರ ಕೆ., ಸಂಜೀವ ಬಾಬುರಾವ್ ಕುರಂದವಾಡ ಅವರು ನಾಮಪತ್ರ ಸಲ್ಲಿಸಿದ್ದರು.