Advertisement

ಪುತ್ತೂರು, ಸುಳ್ಯ: ಕೆಪಿಎಂಇ ಕಾಯಿದೆಗೆ ವಿರೋಧ 

10:34 AM Nov 04, 2017 | Team Udayavani |

ಪುತ್ತೂರು: ಕೆಪಿಎಂಇ ಕಾಯಿದೆ ವಿರೋಧಿಸಿ ರಾಜ್ಯದಲ್ಲಿ ಕರೆ ನೀಡಿದ ಖಾಸಗಿ ಆಸ್ಪತ್ರೆ, ಮೆಡಿಕಲ್‌ಗ‌ಳ ಬಂದ್‌ಗೆ
ಪುತ್ತೂರು ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಶುಕ್ರವಾರ ಬೆಳಗ್ಗೆ 6ರಿಂದ ಶನಿವಾರ ಬೆಳಗ್ಗೆ 6ರ ತನಕ ಮುಷ್ಕರ ನಡೆಯಲಿದ್ದು, ಶುಕ್ರವಾರ ತಾಲೂಕಿನ ವಿವಿಧ ಖಾಸಗಿ ಆಸ್ಪತ್ರೆಗಳು, ಮೆಡಿಕಲ್‌ ಶಾಪ್‌ ಗಳು  ಬಂದ್‌ಗೆ ಪೂರ್ಣ ಬೆಂಬಲ ಸೂಚಿಸಿತ್ತು.

Advertisement

ರೋಗಿಗಳ ಪರದಾಟ
ಆಸ್ಪತ್ರೆಯ ಮುಂಭಾಗದಲ್ಲಿ ಕುರಿತಂತೆ ಬ್ಯಾನರ್‌ ಅಳವಡಿ ಸಲಾಗಿತ್ತು. ಚಿಕಿತ್ಸೆಗೆ ಬರುವವರಿಗೆ ನೋಂದಣಿಗೆ ಅವಕಾಶ ಇರಲಿಲ್ಲ. ಎಲ್ಲ ವಿಭಾಗದ ಖಾಸಗಿ ಆಸ್ಪತ್ರೆಗಳು ಮುಷ್ಕರ ದಲ್ಲಿ ಪಾಲ್ಗೊಂಡ ಪರಿಣಾಮ ತುರ್ತು ಸಂದರ್ಭ ರೋಗಿಗಳು ಪರದಾಡಿದರು. ಪೂರ್ವ ಮಾಹಿತಿ ಇದ್ದ ಕಾರಣ, ಕೆಲವರು ಬಂದಿರಲಿಲ್ಲ. ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿ ಬಿಕೋ ಎನ್ನುತ್ತಿದಯದವು.ಆದರೆ ಹೊರ ರೋಗಿಗಳಾಗಿ ದಾಖಲಾಗಿದ್ದವರಿಗೆ ಮಾತ್ರ ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿತ್ತು. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರೋಗಿಗಳು ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸಿದರು.

ಮೆಡಿಕಲ್‌ ಬಂದ್‌
ಮೆಡಿಕಲ್‌ ಶಾಪ್‌ ಬಂದ್‌ ಆಗಿ ಅಗತ್ಯ ಔಷಧ ಖರೀದಿಗೆ ಸಮಸ್ಯೆ ಉಂಟಾಯಿತು. ಗ್ರಾಮಾಂತರ ಪ್ರದೇಶದಲ್ಲಿ ಬಹುತೇಕ ಕ್ಲಿನಿಕ್‌ಗಳು ಮುಚ್ಚಿದ್ದರಿಂದ ಜನರು ಸರಕಾರಿ ಆಸ್ಪತ್ರೆಗೆ ಆಗಮಿಸಿದ್ದರು. ಬಂದ್‌ ಮಾಹಿತಿ ಇಲ್ಲದ ಕಾರಣ ಮೆಡಿಕಲ್‌ಗೆ ಬಂದವರು ಔಷಧ ಸಿಗದೆ ಪರದಾಡಿದರು.

ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಳ
ಖಾಸಗಿ ಆಸ್ಪತ್ರೆ ಕಾರ್ಯಾಚರಿಸದ ಹಿನ್ನೆಲೆಯಲ್ಲಿ ಜನರು ಸರಕಾರಿ ಆಸ್ಪತ್ರೆಗೆ ತೆರಳುತ್ತಿರುವ ದೃಶ್ಯ ಕಂಡು ಬಂತು. ದಿನವಿಡೀ ತಾಲೂಕು ಸರಕಾರಿ ಆಸ್ಪತ್ರೆ ಹಾಗೂ ಗ್ರಾಮಾಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ನಿರತ ರೋಗಿ ಗಳ ಸಂಖ್ಯೆ ಹೆಚ್ಚಾಗಿತ್ತು. ಐ.ಎಂ.ಎ.ಯ ಟಾಸ್ಕ್ ಪೋರ್ಸ್‌ನ ವೈದ್ಯರು ಅಗತ್ಯ ಸಂದರ್ಭ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೋರಿಕೆ ಮೇರೆಗೆ ತುರ್ತು ಸೇವೆ ನೀಡುವ ಭರವಸೆ ನೀಡಿದ್ದರೂ ಅದು ನಮ್ಮ ಗಮನಕ್ಕೆ ಬಂದಿಲ್ಲ. ಸರಕಾರಿ ಆಸ್ಪತ್ರೆಯ ವೈದ್ಯರೇ ರೋಗಿಗಳ ತಪಾಸಣೆ ನಡೆಸಿದ್ದರು ಎಂದು ತಾಲೂಕು ಆರೋಗ್ಯ ಇಲಾಖೆ ತಿಳಿಸಿದೆ.

ಬಂದ್‌ ಏತಕೆ?
ಕೆಪಿಎಂಇ ಕಾಯಿದೆ ಮುಖಾಂತರ ಖಾಸಗಿ ವೈದ್ಯರು ಸಂಕಷ್ಟಕ್ಕೆ ಗುರಿಯಾಗಲಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿ, ವೈದ್ಯರ ವಿರುದ್ಧದ ಅಹವಾಲು ವಿಚಾರಣೆ ನಡೆಸುತ್ತದೆ. ವಾದ ಮಂಡಿಸಲು ವೈದ್ಯರಿಗೆ ವಕೀಲರ ನೇಮಕಾತಿಗೆ ಅವಕಾಶ ನಿರಾಕರಿಸಲಾಗಿದೆ. ಕಾಯಿದೆ ಜಾರಿಗೆ ಬಂದರೆ, ಅನಾವಶ್ಯಕ ದೂರು ದಾಖಲಾಗಿ
ವೈದ್ಯರು ಚಿಕಿತ್ಸೆ ನೀಡುವುದನ್ನು ಬಿಟ್ಟು, ನ್ಯಾಯಾಲಯ, ಮೆಡಿಕಲ್‌ ಕೌನ್ಸೆಲ್‌ಗೆ ಅಲೆದಾಡಬೇಕಾದ ಸ್ಥಿತಿ ಇದೆ. ಸದುದ್ದೇಶದ ಚಿಕಿತ್ಸೆಗೆ ವೈದ್ಯರು ಜೈಲು ಪಾಲಾಗುವ ಸಾಧ್ಯತೆ ಇದೆ ಎನ್ನುವುದು ಖಾಸಗಿ ಆಸ್ಪತ್ರೆಯ ಅಳಲು. ಈ ಹಿನ್ನೆಲೆಯಲ್ಲಿ ಕಾಯಿದೆ ಜಾರಿಗೆ ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ

Advertisement

ಸೇವೆಗೆ ತಂಡ
ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಿಲ್ಲ. ತುರ್ತು ದಾಖಲಾತಿಯು ನಡೆದಿಲ್ಲ. ಸರಕಾರಿ ಆಸ್ಪತ್ರೆಗೆ ರೋಗಿಗಳು ತೆರಳುವ ಕಾರಣಕ್ಕೆ, ಅಲ್ಲಿಗೆ ಅಗತ್ಯವಿದ್ದರೆ ಐಎಂಎಯ ಟಾಸ್ಕ್ ಫೋರ್ಸ್‌ನ 10 ವೈದ್ಯರ ತಂಡವನ್ನು ಸಿದ್ಧಪಡಿಸಲಾಗಿತ್ತು. ಅಗತ್ಯ ಸಂದರ್ಭ ಚಿಕಿತ್ಸೆಗೆ ಸಿದ್ಧವಿದ್ದು, ಸರಕಾರಿ ಆಸ್ಪತ್ರೆಯವರು ಸಂಪರ್ಕಿಸಿದರೆ ಸೇವೆ ನೀಡುವ ಬಗ್ಗೆ ಸೂಚನೆ ನೀಡಲಾಗಿದೆ. ಮಧ್ಯಾಹ್ನದ ತನಕ ಸ. ಆಸ್ಪತ್ರೆ ಯಿಂದ ಕರೆ ಬಂದಿಲ್ಲ. ಕರೆ ಬಂದಲ್ಲಿ ಸೇವೆ ನೀಡಲು ಸಿದ್ದರಿದ್ದೇವು.
– ಡಾ| ರವಿಪ್ರಕಾಶ್‌,
ಟಾಸ್ಕ್ಫೋರ್ಸ್‌ನ ಮುಖ್ಯಸ್ಥ

ಸಂಖ್ಯೆ ಹೆಚ್ಚಳ
ಶುಕ್ರವಾರ ತಾಲೂಕು ಆಸ್ಪತ್ರೆಯಲ್ಲಿ ಹೊರ ಮತ್ತು ಒಳ ರೋಗಿಗಳ ಸಂಖ್ಯೆ ಹೆಚ್ಚಳವಾಗಿತ್ತು. ಸರಕಾರಿ ಆಸ್ಪತ್ರೆಯಲ್ಲಿ
ವೈದ್ಯರು ರೋಗಿಗಳ ತಪಾಸಣೆ ನಡೆಸಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದ ಸಂದರ್ಭ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.
 – ಡಾ| ವೀಣಾ
   ಆಡಳಿತಾಧಿಕಾರಿ, ತಾಲೂಕು ಆಸ್ಪತ್ರೆ 

ಗೊತ್ತಿರಲಿಲ್ಲ
ತೀವ್ರ ಜ್ವರ ಇತ್ತು. ಹಾಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದೇನೆ. ಇಲ್ಲಿ ಬಂದ್‌ ಇದೆ ಅನ್ನುವುದು ಫಲಕ ನೋಡಿ ತಿಳಿಯಿತು. ಸರಕಾರಿ ಆಸ್ಪತ್ರೆಗೆ ಬಂದಿದ್ದು, ಇಲ್ಲಿ ರಶ್‌ ಇದೆ. ನಿತ್ರಾಣ ಆಗಿದ್ದು, ವೈದ್ಯರ ಭೇಟಿಗೆ ಕಾಯುತ್ತಿದ್ದೇನೆ.
– ಲೀಲಾವತಿ,ಉಪ್ಪಿನಂಗಡಿ

ಪೂರ್ಣ ಬೆಂಬಲ
ಕಾಯಿದೆ ವಿರೋಧಿಸಿ ಕರೆ ನೀಡಿದ ಬಂದ್‌ಗೆ ಪೂರ್ಣ ಬೆಂಬಲ ಸಿಕ್ಕಿದೆ. ತಾಲೂಕಿನ 11 ಖಾಸಗಿ ಆಸ್ಪತ್ರೆಗಳು, ಇತರೆ ವಿಭಾಗದ ಆಸ್ಪತ್ರೆ, ಮೆಡಿಕಲ್‌ ಶಾಪ್‌, ಗ್ರಾಮಾಂತರ ಪ್ರದೇಶದಲ್ಲಿನ ಕ್ಲಿನಿಕ್‌ಗಳು ಬೆಂಬಲ ಸೂಚಿಸಿವೆ. ಗುರುವಾರದ ತನಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹೊರ ರೋಗಿಗಳಿಗೆ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ, ಔಷಧೋಪಚಾರ ನೀಡಲಾಗಿದೆ.
ಡಾ| ಶ್ರೀಪತಿ ರಾವ್‌,
ಅಧ್ಯಕ್ಷರು, ತಾಲೂಕು ಆಸ್ಪತ್ರೆಗಳ ಒಕ್ಕೂಟ

ಬೆಂಬಲಕ್ಕೆ ಕೃತಜ್ಞತೆ
ಕೆಪಿಎಂಇ ಕಾಯಿದೆ ಖಾಸಗಿ ಆಸ್ಪತ್ರೆ, ಮೆಡಿಕಲ್‌, ಕ್ಲಿನಿಕ್‌ಗಳ ಪಾಲಿಗೆ ಮರಣ ಶಾಸನ ಇದ್ದ ಹಾಗೆ. ಇದನ್ನು ವಿರೋಧಿಸಿ
ನೀಡಿದ ಬಂದ್‌ಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನಗರದಲ್ಲಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ಆಸ್ಪತ್ರೆ, ಕ್ಲಿನಿಕ್‌, ಮೆಡಿಕಲ್‌ ಶಾಪ್‌ ತೆರೆದಿಲ್ಲ. ಕಾಯಿದೆ ವಿರೋಧಕ್ಕೆ ಸಿಕ್ಕ ಬೆಂಬಲವನ್ನು ಸರಕಾರ ಅರ್ಥೈಸಿಕೊಂಡು, ಕಾಯಿದೆ ಜಾರಿಯನ್ನು ಕೈ ಬಿಡಬೇಕಿದೆ.
 - ಡಾ| ಗಣೇಶ್‌ ಪ್ರಸಾದ್‌ ಮುದ್ರಾಜೆ,
    ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ
    ಪುತ್ತೂರು ಶಾಖೆ

ಸ್ಪಂದನೆ ನೀಡಿದ್ದೇವೆ
ಸರಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಯಾವುದೇ ಸಿಬಂದಿಗೆ ರಜೆ ನೀಡಬಾರದು ಎಂದು ಸರಕಾರ ಸುತ್ತೋಲೆ ನೀಡಿದ್ದು, ಅದರಂತೆ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬಂದಿ ಸೇವೆಗೆ ಲಭ್ಯರಿದ್ದರು. ಐಎಂಎಯ ಟಾಸ್ಕ್ಪೋರ್ಸ್‌ನ ವೈದ್ಯರು ಅಗತ್ಯ ಸಂದರ್ಭ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೋರಿಕೆ ಮೇರೆಗೆ ತುರ್ತು ಸೇವೆ ನೀಡುವ ಭರವಸೆ ನೀಡಿರುವ ವಿಚಾರ ಗಮನಕ್ಕೆ ಬಂದಿಲ್ಲ. ಅಂತಹ ಸೇವೆಯನ್ನು ಬಳಸಿಕೊಂಡಿಲ್ಲ.
ಡಾ| ಅಶೋಕ್‌ ಕುಮಾರ್‌ ರೈ,
   ತಾಲೂಕು ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next