Advertisement
ಕೇಂದ್ರ ಸರಕಾರ ಎಲ್ಲ ಮನೆಗಳಿಗೆ ವಿದ್ಯುತ್ ಕಲ್ಪಿಸುವ ಉದ್ದೇಶದಿಂದ ಆರಂಭಿಸಿರುವ ಯೋಜನೆಯ ಅನ್ವಯ ವಿದ್ಯುತ್ ರಹಿತ ಕುಟುಂಬಗಳ ಗುರುತಿಸುವಿಕೆಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಕೈಗೊಳ್ಳಲಾಗಿತ್ತು. ಉಭಯ ತಾಲೂಕಿನಲ್ಲಿ ಪ್ರಥಮವಾಗಿ ಕೈಗೊಂಡ ವಿಸ್ತೃತ ಕಾರ್ಯ ಯೋಜನಾ ವರದಿಯಲ್ಲಿ 1,851 ವಿದ್ಯುತ್ ರಹಿತ ಮನೆಗಳು ಕಂಡು ಬಂದರೆ, ಎರಡನೆ ಸರ್ವೆಯಲ್ಲಿ 1,480 ಮನೆಗಳನ್ನು ಗುರುತಿಸಲಾಯಿತು. ಈ ಮನೆಗಳು ವಿದ್ಯುತ್ ಆಧಾರಿತ ಬೆಳಕಿನಿಂದ ದೂರ ಉಳಿದಿವೆ. ಅವುಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮೆಸ್ಕಾಂ ಕ್ರಿಯಾ ಯೋಜನೆ ತಯಾರಿಸಿದೆ.
ಆರಂಭಿಕ ಸಮೀಕ್ಷೆಯಲ್ಲಿ ಪುತ್ತೂರಿನಲ್ಲಿ 1,338, ಸುಳ್ಯದಲ್ಲಿ 513 ಮನೆಗಳು ವಿದ್ಯುತ್ ರಹಿತ ಎಂದು ಕಂಡು ಬಂದಿತ್ತು.
ಎರಡನೆ ಸರ್ವೆಯಲ್ಲಿ ಪುತ್ತೂರಿನಲ್ಲಿ 804, ಸುಳ್ಯದಲ್ಲಿ 680 ಮನೆಗಳಿಗೆ ವಿದ್ಯುತ್ ಇಲ್ಲ ಎಂಬ ಅಂಕಿ-ಅಂಶ ಬೆಳಕಿಗೆ ಬಂದಿತ್ತು. ಡಿಡಿಯುಜಿಜೆವೈ ಯೋಜನೆ ಪ್ರಕಾರ, ಆಯಾ ಗ್ರಾ.ಪಂ. ತನ್ನ ವ್ಯಾಪ್ತಿಯಲ್ಲಿ ವಿದ್ಯುತ್ ರಹಿತ ಮನೆಗಳನ್ನು ಗುರುತಿಸಿ, ಪಟ್ಟಿ ಮಾಡಿತ್ತು. ಅನಂತರ ಅದನ್ನು ಮೆಸ್ಕಾಂಗೆ ಕಳುಹಿಸಿದೆ. ಆ ಪಟ್ಟಿಯಲ್ಲಿ ಈ ಅಂಕಿ-ಅಂಶ ದಾಖಲಾಗಿದೆ. ಏನಿದು ಯೋಜನೆ?
ಈ ಹಿಂದೆ ಅಸ್ತಿತ್ವದಲ್ಲಿದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ಪಲ್ಲಟಗೊಳಿಸಿ, ಕೇಂದ್ರ
ಸರಕಾರ ದೀನ್ ದಯಾಳ್ ವಿದ್ಯುತ್ ಗ್ರಾಮ ಜ್ಯೋತಿ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಕಲ್ಪಿಸುವ ಹೊಸ ಯೋಜನೆ ಪ್ರಕಟಿಸಿತ್ತು. ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿ, 24 ತಾಸು ವಿದ್ಯುತ್ ಹರಿಸುವುದು ಈ ಯೋಜನೆ ಉದ್ದೇಶ. ಗ್ರಾ.ಪಂ. ಮಟ್ಟದಲ್ಲಿ ಸಮೀಕ್ಷೆ ನಡೆದಿದೆ. ಸಮೀಕ್ಷೆಯಲ್ಲಿ ಗುರುತಿಸಲಾದ ವಿದ್ಯುತ್ ರಹಿತ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿ. ವೈರಿಂಗ್, ವಿದ್ಯುತ್ ಕಂಬ ಸಹಿತ ಎಲ್ಲವನ್ನೂ ಉಚಿತವಾಗಿ ಕಲ್ಪಿಸಲಾಗುತ್ತದೆ. ಹತ್ತಾರು ಕಿ.ಮೀ. ದೂರ ಇದ್ದರೂ, ಗುಡ್ಡಗಾಡಿನ ಮನೆ ಆಗಿದ್ದರೂ ವೆಚ್ಚ ಪರಿಗಣಿಸದೆ
ವಿದ್ಯುತ್ ಸಂಪರ್ಕ ಒದಗಿಸಬೇಕು ಎಂಬ ಪರಿಕಲ್ಪನೆ ಹೊಂದಲಾಗಿದೆ.
Related Articles
ಎರಡು ತಾಲೂಕಿನ ವಿದ್ಯುತ್ ರಹಿತ ಕುಟುಂಬಗಳಿಗೆ ಸೌಲಭ್ಯ ಒದಗಿಸಲು ಮೆಸ್ಕಾಂ 76.24 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿದೆ. ಪುತ್ತೂರು ತಾಲೂಕಿನ 804 ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 58.44 ಕೋಟಿ ರೂ., ಸುಳ್ಯ ತಾಲೂಕಿನ 680 ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು 17.80 ಕೋಟಿ ರೂ. ಕ್ರಿಯಾಯೋಜನೆ ಸಿದ್ಧವಾಗಿದೆ. ಅದಕ್ಕೆ ಅನುಮೋದನೆ ದೊರೆತು, ಯೋಜನೆ ಅನುಷ್ಠಾನಕ್ಕೆ ಬರಲಿದೆ. ಇದರ ಮಧ್ಯೆ ಪುತ್ತೂರಿನಲ್ಲಿ ಕೆಲ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಕೂಡ ಆರಂಭಗೊಂಡಿದೆ.
Advertisement
ಎರಡು ವರ್ಷದ ಹಿಂದೆಯೇ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಅಭಿಯಾನ ಆರಂಭಗೊಂಡಿದ್ದರೂ ಉಳಿದ ಜಿಲ್ಲೆಗೆ ಹೋಲಿಸಿದರೆ, ದ.ಕ. ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಇಲ್ಲಿ ಕ್ರಿಯಾ ಯೋಜನೆ ಸಲ್ಲಿಕೆಯ ಹಂತದಲ್ಲಿದ್ದು, ಕಾಮಗಾರಿಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ. ಈ ಹಿಂದಿನ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ಕೈಗೆತ್ತಿ ಕೊಳ್ಳಲಾದ ಕಾಮಗಾರಿಗಳ ಪೈಕಿ ಕೆಲವು ಈಗಷ್ಟೇ ಪೂರ್ಣಗೊಂಡಿವೆ. ಹೊಸ ಸಮೀಕ್ಷೆಯಲ್ಲಿ ಕಂಡು ಬಂದಿರುವ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ವೇಗ ಸಿಗಬೇಕಿದೆ. ಆದರ್ಶ ಗ್ರಾಮದಲ್ಲೂ ವಿದ್ಯುತ್ ರಹಿತ ಮನೆ!
ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿ ಕಾಮಗಾರಿ ಪ್ರಗತಿಯಲ್ಲಿರುವ ಸುಳ್ಯದ ಬಳ್ಪ ಗ್ರಾಮದಲ್ಲಿ ಡಿಡಿಯುಜಿಜೆವೈ
ಸಮೀಕ್ಷೆಯಲ್ಲಿ 21 ಮನೆಗಳು ವಿದ್ಯುತ್ ರಹಿತ ಪಟ್ಟಿಯಲ್ಲಿ ಸೇರ್ಪಡೆ ಆಗಿದ್ದವು. ಅವುಗಳ ಪೈಕಿ 12 ಮನೆಗಳಿಗೆ ಬೆಳಕಿನ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 9 ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಿದೆ. 4,158 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 954 ಕುಟುಂಬಗಳಿವೆ. ಗೋವು ಆಧಾರಿಕ ಕೃಷಿ ಹಾಗೂ ಸೌರ ಶಕ್ತಿಯಿಂದ ಬೆಳಕು ಹರಿಸುವ ಚಿಂತನೆ
ನಡೆದಿತ್ತಾದರೂ ಮೆಸ್ಕಾಂಗೆ ಸಲ್ಲಿಸಲಾದ ವಿದ್ಯುತ್ ರಹಿತ ಕುಟುಂಬ ಪಟ್ಟಿಯಲ್ಲಿ ಎಂಟು ಮನೆಗಳು ಈ ಗ್ರಾಮಕ್ಕೆ ಸೇರಿವೆ. ಸಂಪರ್ಕ ಕಲ್ಪಿಸಲಾಗುತ್ತಿದೆ
ಉಭಯ ತಾಲೂಕಿನಲ್ಲಿ ವಿದ್ಯುತ ರಹಿತ ಮನೆಗಳ ಕುರಿತು ಗ್ರಾ.ಪಂ. ಸಲ್ಲಿಸಿದ ಪಟ್ಟಿ ಆಧಾರದಲ್ಲಿ ಹಾಗೂ ಮೆಸ್ಕಾಂ ಗಮನಕ್ಕೆ ಅಂತಹ ಕುಟುಂಬಗಳು ಕಂಡು ಬಂದರೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಡಿಡಿಯುಜಿಜೆವೈ ಯೋಜನೆಯ ಸಮೀಕ್ಷೆಯಲ್ಲಿ ಕಂಡು ಬಂದಿರುವ ವಿದ್ಯುತ್ ರಹಿತ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಬದ್ಧವಾಗಿದೆ.
– ನಾರಾಯಣ ಪೂಜಾರಿ, ಸಹಾಯಕ
ಕಾರ್ಯನಿರ್ವಾಹಕ, ಮೆಸ್ಕಾಂ, ಪುತ್ತೂರು ಕಿರಣ್ ಪ್ರಸಾದ್ ಕುಂಡಡ್ಕ