Advertisement

ಸಬ್‌ ಜೈಲಿನ ಆವರಣ ಗೋಡೆ ಕುಸಿಯುವ ಭೀತಿ!

02:55 AM Jun 12, 2018 | Team Udayavani |

ಪುತ್ತೂರು: ನಗರದ ಸರಕಾರಿ ಆಸ್ಪತ್ರೆಯ ಬದಿಯಲ್ಲಿರುವ ಶತಮಾನ ಇತಿಹಾಸ ಹೊಂದಿರುವ ಸಬ್‌ ಜೈಲ್‌ ನ ಬೃಹತ್‌ ಗಾತ್ರದ ಆವರಣ ಗೋಡೆ ಯಾವುದೇ ಕ್ಷಣದಲ್ಲೂ ಕುಸಿಯುವ ಭೀತಿಯಲ್ಲಿದೆ. ಬ್ರಿಟಿಷ್‌ ಆಡಳಿತದಲ್ಲಿ ನಿರ್ಮಾಣವಾದ ಈ ಸಬ್‌ ಜೈಲ್‌ ನ ಒಂದು ಪಾರ್ಶ್ವದ ಗೋಡೆ ಕಳೆದ ಮಳೆಗಾಲದಲ್ಲಿ ಕುಸಿದಿತ್ತು. ಇದೀಗ ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಬಿರುಕು ಉಂಟಾಗಿದ್ದು, ಬುಡದಿಂದಲೇ ವಾಲಿ ನಿಂತಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಈ ಸಂದರ್ಭ ತತ್‌ ಕ್ಷಣ ಮುಂಜಾಗರೂಕತಾ ಕ್ರಮ ಕೈಗೊಳ್ಳದಿದ್ದಲ್ಲಿ ಸುಮಾರು ನೂರು ಮೀ. ಉದ್ದದ ಬೃಹತ್‌ ಗೋಡೆ ಕುಸಿದು ಅಪಾಯ ಸಂಭವಿಸುವ ಸಾಧ್ಯತೆ ಇದೆ.

Advertisement

ಬೃಹತ್‌ ಗೋಡೆಯಲ್ಲಿ ಬಿರುಕು
ಈ ಬಂಧಿಖಾನೆಯ ಹಳೆಯ ಆವರಣ ಗೋಡೆಗಳು ಈಗ ಪಳೆಯುಳಿಕೆ ಮಾದರಿಯಲ್ಲಿ ಮಾತ್ರ ಉಳಿದುಕೊಂಡಿದೆ. ಒಳಭಾಗದಲ್ಲಿ ಪೂರ್ತಿಯಾಗಿ ಪೊದೆಗಳಿಂದ ಆವರಿಸಿದ್ದು, ಮನುಷ್ಯರು ಕಾಲಿಡುವ ಸ್ಥಿತಿಯಲ್ಲಿ ಇಲ್ಲ. ಈ ರೀತಿಯಲ್ಲಿ ಜಾಗವೂ ವ್ಯರ್ಥವಾಗುತ್ತಿದೆ. ಪೊದೆಯೊಂದಿಗೆ ತ್ಯಾಜ್ಯಗಳೂ ಸೇರಿಕೊಂಡಿದ್ದು ದುರ್ವಾಸನೆಗೆ ಕಾರಣವಾಗಿದೆ.

ಹಳೆಯ ಸಬ್‌ ಜೈಲಿನ ಈ ಆವರಣ ಗೋಡೆ ಸುಮಾರು 20 ಅಡಿಯಷ್ಟು ಎತ್ತರವಿದೆ. ಬ್ರಿಟಿಷ್‌ ಕಾಲದ ಗೋಡೆಯಾದ ಕಾರಣ ಜೋಡಿ ದಪ್ಪ ಕಲ್ಲಿನಲ್ಲಿ ಕಟ್ಟಲಾಗಿದೆ. ಬುಡದಲ್ಲಿ ಸುಮಾರು ಐದು ಅಡಿ ಎತ್ತರಕ್ಕೆ ಕಗ್ಗಲ್ಲಿನ ಅಡಿಪಾಯವೂ ಇದೆ. ಈಗ ಗೋಡೆ ಬಿರುಕು ಬಿಟ್ಟ ಕಾರಣ ಅಡಿಪಾಯ ಸಮೇತ ಉರುಳುವ ಸಾಧ್ಯತೆ ಇದೆ. ಆವರಣ ಗೋಡೆಯ ಪಕ್ಕದಲ್ಲೇ ಸರಕಾರಿ ಆಸ್ಪತ್ರೆಯ ವಠಾರಕ್ಕೆ ಬೆಳಕು ಕೊಡುವ ಬೀದಿ ದೀಪಗಳಿವೆ. ಗೋಡೆ ಉರುಳಿದರೆ ಈ ವಿದ್ಯುತ್‌ ಕಂಬಗಳೂ ಕೂಡ ಉರುಳಲಿದೆ. ಪಕ್ಕದಲ್ಲೇ ಆಸ್ಪತ್ರೆಯ ನಿರ್ಗಮನ ಬಾಗಿಲು ಕೂಡ ಇರುವ ಕಾರಣ ನಿತ್ಯ ಇಲ್ಲಿ ರೋಗಿಗಳು, ಅವರನ್ನು ನೋಡಿಕೊಳ್ಳುವವರು ನಡೆದಾಡುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ಎನ್ನುವ ಎಂಬ ಆತಂಕವೂ ಇದೆ.


ಶತಮಾನದ ಇತಿಹಾಸ

ಬ್ರಿಟಿಷ್‌ ಆಳ್ವಿಕೆ ಕಾಲದಲ್ಲಿ ಕೋರ್ಟ್‌ ಮತ್ತು ಸಬ್‌ ಜೈಲ್‌ ಗಾಗಿ ಸರಕಾರ ಸುಸಜ್ಜಿತ ಕಟ್ಟಡ ನಿರ್ಮಿಸಿತ್ತು. ಮುಂಭಾಗದಲ್ಲಿ ನ್ಯಾಯಾಲಯ ಮತ್ತು ಹಿಂಭಾಗದಲ್ಲಿ ಜೈಲು ಕಾರ್ಯನಿರ್ವಹಿಸುತ್ತಿತ್ತು. 1960 ರ ಬಳಿಕದಲ್ಲಿ ಕೋರ್ಟ್‌ ಸಮುಚ್ಛಯವನ್ನು ತಾಲೂಕು ಕಚೇರಿಯಾಗಿ ಪರಿವರ್ತಿಸಲಾಯಿತು. ಇಲ್ಲಿನ ಸಬ್‌ ಜೈಲ್‌ ವ್ಯವಸ್ಥೆ ಮಂಗಳೂರಿಗೆ ಸ್ಥಳಾಂತರಗೊಂಡು ಕಾರಣ ಅನಾಥವಾಯಿತು. ಅನಂತರದಲ್ಲಿ ಈ ಜಾಗವನ್ನು ಖಜಾನೆ ರೂಪದಲ್ಲಿ ಕೂಡ ಬಳಸಲಾಯಿತು. ಅದಕ್ಕೂ ಪ್ರತ್ಯೇಕ ವ್ಯವಸ್ಥೆಯಾದ ಬಳಿಕ ಸಬ್‌ ಜೈಲ್‌ ಜಾಗ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಇದರ ಸನಿಹದಲ್ಲಿ ತಾಲೂಕು ಕಚೇರಿಯಾಗಿ ಕೆಲಸ ಮಾಡುತ್ತಿದ್ದ ಕಟ್ಟಡ ಈಗ ತಾತ್ಕಾಲಿಕ ನೆಲೆಯಲ್ಲಿ ಸರಕಾರಿ ಮಹಿಳಾ ಕಾಲೇಜಾಗಿದೆ.

ಆಸ್ಪತ್ರೆಗೂ ಅಪಾಯ
ಸಬ್‌ ಜೈಲಿನ ಆವರಣ ಗೋಡೆ ಸರಕಾರಿ ಆಸ್ಪತ್ರೆಯ ಪಕ್ಕದಲ್ಲೇ ಇದೆ. ಒಂದು ಭಾಗದಲ್ಲಿ ಸರಕಾರಿ ಆಸ್ಪತ್ರೆಯ ಶವಾಗಾರ, ಮತ್ತೂಂದು ಭಾಗದಲ್ಲಿ ಸರಕಾರಿ ಆಸ್ಪತ್ರೆ ಕಟ್ಟಡವಿದೆ. ಶವಾಗಾರಕ್ಕೆ ತಾಲೂಕಿನ ವಿವಿಧ ಕಡೆಗಳಿಂದ ಮೃತದೇಹವನ್ನು ಮೋರ್ಚರಿಗಾಗಿ ತರಬೇಕಾಗುತ್ತದೆ. ಈ ಕಾರಣದಿಂದ ರಾತ್ರಿ ಕೂಡ ಜನ ಜಂಗುಳಿ ಇರುತ್ತದೆ. ಇಂತಹ ಸಂದರ್ಭ ಪಕ್ಕದ ಜೈಲ್ ನ ಆವರಣ ಗೋಡೆ ಕುಸಿದು ಬಿದ್ದರೆ ಅಪಾಯವಿದೆ.

Advertisement

ಮಾಹಿತಿ ಸಿಕ್ಕಿದೆ
ಹಳೆ ಬಂಧಿಖಾನೆಯ ಆವರಣ ಗೋಡೆ ಕುಸಿಯುವ ಭೀತಿಯಲ್ಲಿರುವ ಕುರಿತು ಮಾಹಿತಿಯಷ್ಟೇ ಲಭಿಸಿದೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ. 
– ಎಚ್‌.ಕೆ. ಕೃಷ್ಣಮೂರ್ತಿ, ಸಹಾಯಕ ಕಮಿಷನರ್‌ ಪುತ್ತೂರು

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next