ಪುತ್ತೂರು: ವಾರದಿಂದ ಸಂಚಾರ ನಿಯಮದಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ ಮಾಡಿದ್ದ ಪುತ್ತೂರು ಪೊಲೀಸರು ಗುರುವಾರ ಮತ್ತೆ ಅನಗತ್ಯ ಸಂಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ನಗರದ ಅಶ್ವಿನಿ ಸರ್ಕಲ್ ಕಣ್ಗಾವಲು ಹಾಕಿರುವ ಪೊಲೀಸರು ಅನಗತ್ಯ ಸಂಚರಿಸುವ ವಾಹನ ಸವಾರರನ್ನು ವಾಪಸು ಕಳುಹಿಸುತ್ತಿದ್ದು, ನಗರದಲ್ಲಿ ಜನಸಂಚಾರ ನಿಯಂತ್ರಣಕ್ಕೆ ಬಂದಿದೆ.
ಹಲವು ಬಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ವಾಹನ ಸವಾರರಿಗೆ ದಂಡವನ್ನೂ ವಿಧಿಸಿ, ನಗರ ಸಂಪರ್ಕಿಸುವ ಒಳ ರಸ್ತೆಗಳ ಸಂಪರ್ಕಗಳಿಗೆ ತಡೆ ಹಾಕಿದ್ದರು. ಒಂದು ಹಂತದಲ್ಲಿ ಈ ಕ್ರಮಗಳಿಂದಾಗಿ ಅನಗತ್ಯ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತಾದರೂ, ಏತನ್ಮಧ್ಯೆ ಪೊಲೀಸರು ಸ್ವಲ್ಪ ಮಟ್ಟಿಗೆ ಸಂಚಾರ ನಿಯಮಗಳನ್ನು ಸಡಿಲಗೊಳಿಸಿದ್ದರು. ಇದರ ದುರ್ಲಾಭ ಪಡೆದುಕೊಂಡವರು ಪೇಟೆ ಸುತ್ತಾಟಕ್ಕೆ ಮುಂದಾಗಿದ್ದರು. ಇದೀಗ ಪೊಲೀಸರು ಕಾರ್ಯ ವೈಖರಿ ಬದಲಾಯಿಸಿದ್ದಾರೆ. ನಗರ ಪ್ರವೇಶವನ್ನು ಅಗತ್ಯವುಳ್ಳವರಿಗೆ ಮಾತ್ರ ನೀಡಿ, ಅನಗತ್ಯ ಸಂಚಾರ ನಡೆಸುವವರಿಗೆ ತಡೆ ಹಾಕಿದ್ದಾರೆ. ಬುಧವಾರದಿಂದಲೇ ಪೊಲೀಸರು ಈ ಕ್ರಮ ಅನುಸರಿಸಿದ್ದು, ಗ್ರಾಮಾಂತರದಿಂದ ಬರುವ ಸಂಟ್ಯಾರು ಭಾಗ ಪರಿಶೀಲಿಸಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ ಮತ್ತೆ ಕೋವಿಡ್-19 ಸೋಂಕು ಪೀಡಿತರು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರದ ಈ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಬೈಕ್ ಸವಾರರ ಓಡಾಟ ಅತಿಯಾಗುತ್ತಿದೆ. ಈ ನಡುವೆ ಅಟೋ ರಿಕ್ಷಾಗಳ ಓಡಾಟಕ್ಕೂ ಅನುಮತಿ ಸಿಕ್ಕಿದ ಕಾರಣ ವಾಹನ ದಟ್ಟಣೆಗೆ ಕಾರಣ ವಾಗುತ್ತಿದೆ. ಓಡಾಟಕ್ಕೆ ನಿರ್ಬಂಧವಿದ್ದರೂ ನಗರದಲ್ಲಿ ಈ ಖಾಸಗಿ ವಾಹನಗಳ ಅಬ್ಬರ ಹೆಚ್ಚಾಗುತ್ತಿದೆ. ಇ ಪಾಸು ಮೂಲಕ ಪಾಸು ಪಡೆದುಕೊಂಡು ವಿನಾ ಕಾರಣ ನಗರಕ್ಕೆ ಬರುತ್ತಿರುವ ಈ ಖಾಸಗಿ ಕಾರುಗಳಲ್ಲಿಯೂ ನಿಯಮ ಉಲ್ಲಂಘನೆ ಕಂಡುಬರುತ್ತಿದೆ.