Advertisement

Puttur; ರಾಜ್ಯಮಟ್ಟದ ಕ್ರೀಡಾಕೂಟ: ದಕ್ಷಿಣ ಕನ್ನಡ ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ

11:24 PM Dec 04, 2023 | Team Udayavani |

ಪುತ್ತೂರು: ಇಲ್ಲಿನ ಕೊಂಬೆಟ್ಟು ಮೈದಾನದಲ್ಲಿ ನಡೆದ 17ರ ವಯೋಮಾನದ ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 61 ಅಂಕ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

Advertisement

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆ (21 ಅಂಕ) ತಂಡ ಪ್ರಶಸ್ತಿ ಪಡೆದರೆ, ದಕ್ಷಿಣ ಕನ್ನಡ ಜಿಲ್ಲೆ (17ಅಂಕ) ದ್ವಿತೀಯ ಸ್ಥಾನ ಗಳಿಸಿತು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ (44 ಅಂಕ) ತಂಡ ಪ್ರಶಸ್ತಿ ಪಡೆದರೆ, ಶಿರಸಿ ಜಿಲ್ಲೆ (21 ಅಂಕ) ದ್ವಿತೀಯ ಸ್ಥಾನ ಪಡೆಯಿತು.

ಉತ್ತಮ ಆ್ಯತ್ಲೀಟ್‌ ಪ್ರಶಸ್ತಿ
ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆಯ ಸಯ್ಯದ್‌ ಶಾಬೀರ್‌ ಉತ್ತಮ ಆ್ಯತ್ಲೀಟ್‌ ಪ್ರಶಸ್ತಿಗೆ ಭಾಜನರಾದರು. ಹಾಸನ ಜಿಲ್ಲೆಯ ಸುಮಂತ್‌ ಬಿ.ಎಸ್‌. (ಉದ್ದಜಿಗಿತ, ತ್ರಿವಿಧ ಜಿಗಿತ ಪ್ರಥಮ) ವೈಯಕ್ತಿಕ ಚಾಂಪಿಯನ್‌ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗೋಪಿಕಾ ಜಿ. ಉತ್ತಮ ಆ್ಯತ್ಲೀಟ್‌ ಪ್ರಶಸ್ತಿ ಪಡೆದರೆ, ಬೆಂಗಳೂರು ಉತ್ತರ ಜಿಲ್ಲೆಯ ಹರ್ಷಿತಾ ಪಿ. (100 ಮೀಟರ್‌ ಹರ್ಡಲ್ಸ್‌, ಹೈಜಂಪ್‌ ಮತ್ತು ತ್ರಿವಿಧ ಜಿಗಿತದಲ್ಲಿ ಪ್ರಥಮ) ವೈಯಕ್ತಿಕ ಚಾಂಪಿಯನ್‌ ಪ್ರಶಸ್ತಿ ಪ್ರಶಸ್ತಿಗೆ ಭಾಜನರಾದರು.

ಒಟ್ಟು 4 ಕೂಟ ದಾಖಲೆ
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಒಟ್ಟು ನಾಲ್ಕು ಕೂಟ ದಾಖಲೆ ನಿರ್ಮಾಣಗೊಂಡಿತು. ಕೊನೆಯ ದಿನ ಬಾಲಕಿಯರ ವಿಭಾಗದ 1,500 ಮೀ. ಓಟದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಕಡಬದ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಚರಿಷ್ಮಾ ನೂತನ ಕೂಟ ದಾಖಲೆ ನಿರ್ಮಿಸಿದರು (4.55.1 ನಿ.). 2017-18ರಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಅರ್ಪಿತಾ ಎ.ಬಿ. (4.58.19 ನಿ.) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿದರು. ಮೊದಲನೇ ದಿನ ಸಯ್ಯದ್‌ ಶಾಬೀರ್‌, ಪುಷ್ಪಕ್‌ ನೆಲವಾಡ್‌, ಧನ್ಯಾ ನಾಯ್ಕ ದಾಖಲೆ ನಿರ್ಮಿಸಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭ
ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕ್ಕಳ, ಡಿಡಿಪಿಐ ದಯಾನಂದ ನಾಯಕ್‌, ಉದ್ಯಮಿ ಸುಮಾ ಅಶೋಕ್‌ ರೈ, ಸಹಕಾರ ಧುರೀಣ ದಂಬೆಕ್ಕಾನ ಸದಾಶಿವ ರೈ, ಉದ್ಯಮಿ ನುಳಿಯಾಲು ರವೀಂದ್ರನಾಥ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್‌, ಕ್ಷೇತ್ರ ಶಿಕ್ಷಣಾದಿಕಾರಿ ಲೋಕೇಶ್‌ ಎಸ್‌.ಆರ್‌., ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಅಜಿತ್‌ ಕುಮಾರ್‌ ಜೋಡುಕಟ್ಟೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next