Advertisement

ಪುತ್ತೂರು: ಶ್ರೀಕೃಷ್ಣ ಲೋಕ ಅನಾವರಣ

11:43 AM Sep 03, 2018 | |

ಪುತ್ತೂರು: ಶೋಭಾಯಾತ್ರೆಯಲ್ಲಿದ್ದ ಪ್ರತಿ ಮಗುವೂ ಕೃಷ್ಣನೇ. ಮಗುವಿನಲ್ಲೇ ದೇವರನ್ನು ಕಾಣುವ ಖುಷಿ. ಆ ಸಂಭ್ರಮದಲ್ಲಿದ್ದ ಪ್ರತಿ ಮಗುವಿನ ತಲೆಗೆ ಹೂವಿನ ಎಸಳನ್ನು ಸುರಿಸಿ ಹರ್ಷಿಸಿದರು. ಬಪ್ಪಳಿಗೆ ಬಳಿಯ ಮಕ್ಕಳ ಮಂಟಪದಿಂದ ಕೋರ್ಟ್‌ ರಸ್ತೆ, ಮುಖ್ಯ ರಸ್ತೆಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಬಂದ ಶ್ರೀಕೃಷ್ಣ ಲೋಕದ ಶೋಭಾಯಾತ್ರೆಯಲ್ಲಿ ಇಂತಹ ನೋಟ ಕಂಡುಬಂದಿತು.

Advertisement

ರವಿವಾರ ಬೆಳಗ್ಗೆ ಪುತ್ತೂರು ಪೇಟೆಯಲ್ಲಿ ಶ್ರೀಕೃಷ್ಣ ಲೋಕ ಅನಾವರಣಗೊಂಡಿತ್ತು. 1,300ಕ್ಕೂ ಅಧಿಕ ಪುಟಾಣಿಗಳು ಶ್ರೀಕೃಷ್ಣ, ರಾಧೆ, ಯಶೋದೆಯರ ವೇಷ ಧರಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಕ್ಕಳ ಹೆತ್ತವರು, ಪೋಷಕರು ಜತೆಯಾದರು. ಅದ್ದೂರಿಯಾಗಿ ಮೆರವಣಿಗೆ ಸಾಗಿ ಬಂದಿತು. ಹೀಗೆ ಶೋಭಾಯಾತ್ರೆ ಸಾಗಿ ಬರುವ ರಸ್ತೆಯುದ್ದಕ್ಕೂ, ಪುಷ್ಪವೃಷ್ಟಿಗರೆಯಲಾಯಿತು.

ವಿವೇಕಾನಂದ ಶಿಶುಮಂದಿರ, ಸಾರ್ವಜನಿಕ ಶ್ರೀ ಕೃಷ್ಣಲೋಕ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಲೋಕ ಕಾರ್ಯಕ್ರಮ ನಡೆಯಿತು. ಇದು 20ನೇ ವರ್ಷದ ಕೃಷ್ಣಲೋಕ ಎನ್ನುವುದು ವಿಶೇಷ.

ಶೋಭಾಯಾತ್ರೆ ಮುಂಭಾಗದಲ್ಲಿ ಕಣ್ಮನ ಸೆಳೆಯುವ ಪುಟ್ಟ ರಥ. ಆ ರಥದೊಳಗೆ ಪುಟಾಣಿ ಕೃಷ್ಣ ಸಾರಥಿ. ಬಿಲ್ಗಾರ ಅರ್ಜುನ. ದಾರಿ ತೋರಿಸುತ್ತಾ ಸಾಗಿದ ಈ ರಥವನ್ನು ಶೋಭಾಯಾತ್ರೆ ಅನುಸರಿಸಿತು. ಚೆಂಡೆ, ವಾದ್ಯ, ಜಾಗಟೆ ಶೋಭಾಯಾತ್ರೆಯ ಸೊಗಸನ್ನು ಇಮ್ಮಡಿಸಿತು. ಹಿಂಬದಿಯಿಂದ ಕೃಷ್ಣ- ರಾಧೆ ವೇಷಧಾರಿ ಪುಟಾಣಿಗಳು, ಭಗವಾಧ್ವಜ ಹಿಡಿದು ಸಾಗಿದ ಹೆತ್ತವರು. ಎರಡು ಸರತಿಯಲ್ಲಿ ಪೇಟೆಯಲ್ಲಿ ಶೋಭಾಯಾತ್ರೆ ಸಾಗಿ ಬರುತ್ತಿದ್ದರೆ, ಪೇಟೆಯಿಡೀ ಮೂಕವಿಸ್ಮಿತವಾಗಿ ನೋಡುತ್ತಿತ್ತು.

ಕಾರ್ಯಕ್ರಮಕ್ಕೆ ಚಾಲನೆ
ಬೆಳಗ್ಗೆ ಆರೆಸ್ಸೆಸ್‌ ಹಿರಿಯ ನಾಯಕ ಗೋಪಾಲ ನಾೖಕ್‌ ಅವರು ಶಿಶು ಮಂದಿರದಲ್ಲಿ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಹೇಶ್‌ ಪ್ರಸಾದ್‌- ಅರ್ಚನಾ ದಂಪತಿಯ ಮೂರುವರೆ ತಿಂಗಳ ಮಗು ಶಿವಾಂಶ್‌ಗೆ ಶ್ರೀಕೃಷ್ಣ ವೇಷ ತೊಡಿಸಿ, ತೊಟ್ಟಿಲಿಗೆ ಹಾಕಲಾಯಿತು. ಮಹಿಳೆಯರು ಜೋಗುಳ ಹಾಡಿ, ಶ್ರೀಕೃಷ್ಣ ಲೋಕಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು. ಶ್ರೀಕೃಷ್ಣ ವೇಷಧಾರಿ ಪುಟಾಣಿಗೆ ಮಾತೆಯರು ಬೆಣ್ಣೆ ತಿನ್ನಿಸಿ, ಸಂಭ್ರಮಿಸಿದರು. ಮಗುವಿನ ತಾಯಿ ಅರ್ಚನಾ ಅವರಿಗೆ ಬಾಗಿನ ನೀಡಲಾಯಿತು. ಬಳಿಕ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

Advertisement

ಹಿರಿಯ ಆರೆಸ್ಸೆಸ್‌ ಕಾರ್ಯಕರ್ತ ಬಿರ್ಮಣ್ಣ ಗೌಡ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಚಾಲನೆ ನೀಡಿದರು. ಶಾಸಕ ಸಂಜೀವ ಮಠಂದೂರು, ಆರೆಸ್ಸೆಸ್‌ ಹಿರಿಯ ನಾಯಕ ಅಚ್ಯುತ ನಾಯಕ್‌, ರಾಜೇಶ್‌ ಬನ್ನೂರು, ರವೀಂದ್ರ ಪಿ., ಇ. ಶಿವಪ್ರಸಾದ್‌, ಗೌರಿ ಬನ್ನೂರು, ವಿದ್ಯಾ ಗೌರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next