Advertisement

ಚೆಲ್ಯಡ್ಕ ಮುಳುಗು ಸೇತುವೆಗಿಲ್ಲ ಮುಕ್ತಿ

10:39 AM Jul 14, 2022 | Team Udayavani |

ಪುತ್ತೂರು: ತಾಲೂಕಿನ ಏಕೈಕ ಮುಳುಗು ಸೇತುವೆಗೆ ಮುಕ್ತಿ ನೀಡಿ ಎಂಬ ಬೇಡಿಕೆಗೆ ಬರೋಬ್ಬರಿ ಐದು ದಶಕಗಳೇ ಸಂದರೂ ಸ್ಪಂದನೆ ಮಾತ್ರ ಶೂನ್ಯ. ಹೀಗಾಗಿ ಒಂದು ತಾಸು ಮಳೆ ಬಂದರೂ ಇಕ್ಕೆಲೆಗಳಲ್ಲಿ ನಿಂತು ನೀರು ಇಳಿಯುವುದನ್ನು ಕಾಯಬೇಕಾದ ದುಸ್ಥಿತಿ ಚೆಲ್ಯಡ್ಕ ಸೇತುವೆಯನ್ನು ನಂಬಿ ಸಂಚರಿಸುವ ಪ್ರಯಾಣಿಕರದ್ದು!

Advertisement

ಹೊಸ ಸೇತುವೆ ನಿರ್ಮಾಣಕ್ಕಾಗಿ ಅನುದಾನಕ್ಕೆ ಕಾಯುತ್ತಿರುವುದರಿಂದ ಮುಳುಗು ಸೇತುವೆಗೆ ಸದ್ಯಕ್ಕೆ ಮುಕ್ತಿ ದೊರೆ ಯುವುದು ಅನುಮಾನ ಎಂದೆನಿಸಿದೆ.

ರಸ್ತೆ ಮೇಲ್ದರ್ಜೆಗೆ

ಪುತ್ತೂರು-ಪರ್ಲಡ್ಕ-ದೇವಸ್ಯ-ಪಾಣಾಜೆ ರಸ್ತೆಯಲ್ಲಿನ ಚೆಲ್ಯಡ್ಕ ಸೇತುವೆ ಅಂತಾರಾಜ್ಯ ಸಂಪರ್ಕದ ಪ್ರಮುಖ ರಸ್ತೆ. ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯಲ್ಲಿನ ಈ ಸೇತುವೆಯನ್ನು ಸೀರೆ ಹೊಳೆಗೆ ನಿರ್ಮಿಸಲಾಗಿದೆ. ಜಿ.ಪಂ. ವ್ಯಾಪ್ತಿಯ ರಸ್ತೆಯನ್ನು ಲೋಕೋಪಯೋಗಿ ರಸ್ತೆ ಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅದಾಗ್ಯೂ ಮುಳುಗು ಸೇತುವೆ ಸಂಕಟ ಬಗೆಹರಿದಿಲ್ಲ.

ಪ್ರಸ್ತಾವನೆಗೆ ಬಾರದ ಅನುದಾನ

Advertisement

ಕೆಲವು ವರ್ಷಗಳ ಹಿಂದೆ ನಬಾರ್ಡ್‌ನಡಿ ಸೇತುವೆ ನಿರ್ಮಾಣಕ್ಕೆ 1.5 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಅನುದಾನ ಬರಲಿಲ್ಲ. ಈ ವರ್ಷ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮಾತ್ರ ಅನುದಾನ ಬಂದಿದ್ದು ಸೇತುವೆ ನಿರ್ಮಾಣಕ್ಕೆ ಅನು ದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಬೇರೆ ಯೋಜನೆಗಳ ಮೂಲಕ ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು.

ಅಂತಾರಾಜ್ಯ ಸಂಪರ್ಕ ರಸ್ತೆ

ಪುತ್ತೂರಿನಿಂದ ಪಾಣಾಜೆ ಮೂಲಕ ಕೇರಳಕ್ಕೆ ಸಂಪರ್ಕ ರಸ್ತೆ ಇದಾಗಿದೆ. ಉಭಯ ರಾಜ್ಯದ ಜನರ ಸಂಚಾರ, ಶಾಲಾ ಕಾಲೇಜುಗಳಿಗೆ ಸಂಪರ್ಕ ಕೊಂಡಿಯಾಗಿ ಯೂ ಈ ರಸ್ತೆ ಬಳಕೆಯಲ್ಲಿದೆ. ಪ್ರತೀ ಬಾರಿಯೂ ಮಳೆಗಾದಲ್ಲಿ ಬೆಟ್ಟಂಪಾಡಿ, ಪಾಣಾಜೆ ಗ್ರಾಮಸ್ಥರಿಗೆ ಚೆಲ್ಯಡ್ಕ ಸೇತುವೆಯದ್ದೇ ಚಿಂತೆ. ಪುತ್ತೂರಿಗೆ ದೇವಸ್ಯ-ಅಜ್ಜಿಕಲ್ಲು-ಪರ್ಲಡ್ಕದ ಮೂಲಕ ಬಂದರೆ ಮರಳಿ ಮನೆ ಸೇರಬೇಕಾದರೆ ಚೆಲ್ಯಡ್ಕ ಸೇತುವೆ ಕುರಿತು ವಿಚಾರಿಸಿಯೇ ಹೊರಡಬೇಕು. ಹೊಳೆಯಿಂದ ಕೇವಲ 4 ಅಡಿ ಎತ್ತರಕ್ಕಿರುವ ಈ ಸೇತುವೆ ಸಣ್ಣ ಮಳೆ ಬಂದರೂ ಮುಳುಗಡೆ ಆಗುತ್ತದೆ. ಈ ವರ್ಷದ ಮಳೆಗಾಲದಲ್ಲಿ ಈಗಾಗಲೇ ನಾಲ್ಕು ಬಾರಿ ಮುಳುಗಿ ಸಂಚಾರಕ್ಕೆ ತೊಡಕು ಉಂಟಾಗಿತ್ತು.

ಬಹುಕಾಲದ ಬೇಡಿಕೆ

ಚೆಲ್ಯಡ್ಕ ಮುಳುಗು ಸೇತುವೆಗೆ ಮುಕ್ತಿ ನೀಡಬೇಕು ಎನ್ನುವುದು ಐದು ದಶಕಗಳ ಬೇಡಿಕೆ. ಹಲವು ಶಾಸಕರು ಪುತ್ತೂರು ಕ್ಷೇತ್ರವನ್ನು ಪ್ರತಿನಿಧಿ ಸಿದ್ದರೂ ಅವರ್ಯಾರೂ ಈ ಸಮಸ್ಯೆಗೆ ಸ್ಪಂದನೆ ನೀಡಿಲ್ಲ. ಹತ್ತಾರು ಹೋರಾಟ, ಮನವಿಗಳಿಗೆ ಬೆಲೆ ಸಿಕ್ಕಿಲ್ಲ. ಹೊಸ ಸೇತುವೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೃಷ್ಣ ಪ್ರಸಾದ್‌ ಆಳ್ವ.

ಪರ್ಯಾಯ ಸುತ್ತಾಟ

ಚೆಲ್ಯಡ್ಕ ಸೇತುವೆ ಮುಳುಗಡೆಯಿಂದ ಗುಮ್ಮಟಗದ್ದೆ, ಅಜ್ಜಿಕಲ್ಲು, ಬೈರೋಡಿ, ವಳತ್ತಡ್ಕ ವ್ಯಾಪ್ತಿಯ ಜನರಿಗೆ ಸಂಚಾರವೇ ಬಹುದೊಡ್ಡ ಸಂಕಟ. ಇದೇ ಹೊಳೆಗೆ ಬೈಲಾಡಿಯಲ್ಲಿ ಸೇತುವೆ ನಿರ್ಮಿಸಿದ ಕಾರಣ ಚೆಲ್ಯಡ್ಕ ಸೇತುವೆ ಮುಳುಗಿದಾಗ ಸಂಟ್ಯಾರ್‌ ಮೂಲಕ ಸುತ್ತು ಬಳಸಿ ಬರಲು ಒಂದು ಅವಕಾಶ ಇದೆ. ಅದು ಪರ್ಲಡ್ಕ ರಸ್ತೆಯನ್ನೇ ನಂಬಿ ಸಂಚರಿಸುವವರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಅನ್ನುತ್ತಾರೆ ಗ್ರಾಮಸ್ಥರು.

ಸ್ಪಂದಿಸಲಾಗುವುದು: ಚೆಲ್ಯಡ್ಕದಲ್ಲಿ ಸೇತುವೆ ನಿರ್ಮಾಣಕ್ಕೆ ಕೆಆರ್‌ಡಿಸಿಎಲ್‌ ಮೂಲಕ 3.5 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನರ ದಶಕದ ಬೇಡಿಕೆಗೆ ಸ್ಪಂದನೆ ನೀಡಲಾಗುವುದು. -ಸಂಜೀವ ಮಠಂದೂರು, ಶಾಸಕರು, ಪುತ್ತೂರು.

ಪ್ರಸ್ತಾವನೆ ಸಲ್ಲಿಕೆ:  ಕೆಆರ್‌ಡಿಸಿಎಲ್‌ ಮತ್ತು ನಬಾರ್ಡ್‌ ನಲ್ಲಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಎರಡರ ಪೈಕಿ ಯಾವುದರಲ್ಲಿ ಅನುದಾನ ಬಿಡುಗಡೆ ಆಗುತ್ತದೆಯೋ ಅದರಲ್ಲಿ ಹೊಸ ಸೇತುವೆ ನಿರ್ಮಿಸಲಾಗುವುದು. -ಬಿ.ರಾಜಾರಾಮ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಪುತ್ತೂರು   

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next