Advertisement

ಇಂದು ವಿಷುಕಣಿ ವಿಶೇಷದೊಂದಿಗೆ ಪುತ್ತೂರು ಜಾತ್ರೆ ಉತ್ಸವದ ಸಂಭ್ರಮ

12:17 AM Apr 15, 2019 | Team Udayavani |

ಪುತ್ತೂರು: ಸೌರಮಾನ ಯುಗಾದಿ ತುಳುನಾಡಿನಲ್ಲಿ ಹೊಸ ವರ್ಷವನ್ನು ಆಚರಿಸುವ ದಿನ. ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಉತ್ಸವದೊಂದಿಗೆ ವಿಷು ಕಣಿ ಸಂಭ್ರಮವೂ ಸೇರಿಕೊಂಡು ಎ. 15ರಂದು ವಿಶೇಷ ಶಿಷ್ಟ ಸಂಪ್ರದಾಯದ ಧಾರ್ಮಿಕ ಆಚರಣೆಗಳು ನಡೆಯಲಿವೆ.

Advertisement

ರವಿವಾರ ವಿಷು ಸಂಕ್ರಮಣದ ದಿನ ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಮುಗಿದು, ದೇವಾಲಯದ ಆಡಳಿತದವರು, ಭಕ್ತರು ಸೇರಿ ಕಾಲ ಕಾಲಕ್ಕೆ ಮಳೆ-ಬೆಳೆ ಸಮೃದ್ಧಿಯಾಗಿ ಸುಭಿಕ್ಷೆ ಉಂಟಾಗಲಿ ಎಂದು ದೇಗುಲದ ತಂತ್ರಿಗಳ ಮೂಲಕ ದೇವರ ಸತ್ಯ ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಫಲಪುಷ್ಪಾದಿ ಸುವಸ್ತುಗಳನ್ನು ದರ್ಪಣ ಸಹಿತ ಗರ್ಭಗುಡಿಯಲ್ಲಿ ಇರಿಸಿ ಬಾಗಿಲು ಮುಚ್ಚಲಾಗುತ್ತದೆ.

ವಿಷು (ಬಿಸು)ವಿನ ದಿನ (ತುಳು ಪಂಚಾಂಗದಲ್ಲಿ ತಿಂಗಳಡಿ ದಿನ) ಪ್ರಾತಃಕಾಲ ಶ್ರೀ ದೇವರ ಗರ್ಭಗುಡಿಯ ಬಾಗಿಲು ತೆರೆದು ದರ್ಪಣ ಬಿಂಬ ದರ್ಶನವಾಗುತ್ತದೆ. ಒಳಾಂಗಣದ ಸಾಂಪ್ರದಾಯಿಕ ಚಪ್ಪರದ ಕಂಬಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗುತ್ತದೆ ಮತ್ತು ದೇವರು ಬಂದು ನಿಲ್ಲುವ ಕೊಡಿಮರದ ಬಲ ಭಾಗದಲ್ಲಿ ಚಪ್ಪರಕ್ಕೆ ಮೇಲ್ಕಾಪು ಹಾಸಲಾಗುತ್ತದೆ.

ವಿಶೇಷ ಉತ್ಸವ
ಸೌರ ಯುಗಾದಿ ವಿಷುಕಣಿ ಅಂಗವಾಗಿ ದೇವಾಲಯದ ಒಳಾಂಗಣದಲ್ಲಿ ಬೆಳಗ್ಗೆ ವಿಶೇಷ ಉತ್ಸವ ಬಲಿ, ವಸಂತ ಕಟ್ಟೆಪೂಜೆ ನಡೆಯುತ್ತದೆ. ಸಂಜೆ ತುಳು ಪಂಚಾಂಗ ಸಂಪ್ರದಾಯದಂತೆ ದೇಗುಲದ ಹೊರಾಂಗಣದಲ್ಲಿ “ಬಯ್ಯದ ಬಲಿ’ (ಸಂಜೆಯ ಉತ್ಸವ) ನಡೆದು ಬಳಿಕ ಶ್ರೀ ದೇವರ ಸಾಂಪ್ರದಾಯಿಕ ಚಂದ್ರ ಮಂಡಲ ಉತ್ಸವ (ಬಂಡಿ ಉತ್ಸವ) ನಡೆಯುತ್ತದೆ.

ದೇಗುಲದಲ್ಲಿ ಶತ ಮಾನಗಳ ಹಿಂದೆ ಬಂಡಿಯ ಪೀಠದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಹೊರಾಂಗಣದಲ್ಲಿ ಎಳೆಯಲಾಗುತ್ತಿತ್ತು. ಚಂದ್ರ ಮಂಡಲ ರಥವನ್ನು ನಿರ್ಮಿಸಿದ ಬಳಿಕ ಚಂದ್ರಮಂಡಲ ರಥ ಉತ್ಸವ ನಡೆಯುತ್ತದೆ. ಪುತ್ತೂರು ಸೀಮೆಯ ಜನರು ಇದನ್ನು ಬಂಡಿ ಉತ್ಸವ ಎಂದೂ ಕರೆಯುತ್ತಾರೆ.

Advertisement

ವಿಶೇಷ ಊಟ
ವಿಷುಕಣಿಯ ಅಂಗವಾಗಿ ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯಲ್ಲಿ ವಿಷು ಹಬ್ಬದ ಪ್ರಯುಕ್ತ ವಿಶೇಷ ಊಟ ಇರುತ್ತದೆ. ಮನೆಗಳಲ್ಲಿ ಸೌರಯುಗಾದಿ ಆಚರಣೆ ಇದ್ದರೂ, ಒಬ್ಬ ಸದಸ್ಯನಾದರೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ನಡೆಯುವ ವಿಷು ಊಟದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುವುದು ಅಂದಿನ ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next