Advertisement

ಕಾರಂತರ ಕರ್ಮಭೂಮಿಯಲ್ಲಿ ಈಜುಕೊಳ ಹೆಮ್ಮೆ: ನಳಿನ್‌

03:04 PM Dec 07, 2018 | |

ಪುತ್ತೂರು: ಜ್ಞಾನಪೀಠ ಪುರಸ್ಕೃತ ಡಾ| ಕೆ. ಶಿವರಾಮ ಕಾರಂತರ ಕರ್ಮ ಭೂಮಿಯಾಗಿ ಹೆಸರು ಮಾಡಿದ ಪುತ್ತೂರಿನ ಬಾಲವನ ಈಗ ಇಲ್ಲಿನ ಈಜು ಕೊಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ಬೆಳೆಸುವ ಮೂಲಕ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದರು.

Advertisement

ಪುತ್ತೂರಿನ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಗುರುವಾರ ಆರಂಭಗೊಂಡ 4 ದಿನಗಳ ರಾಜ್ಯಮಟ್ಟದ ಶಾರ್ಟ್‌ಕೋರ್ಸ್‌ ಅಕ್ವೆಟಿಕ್‌ ಚಾಂಪಿಯನ್‌ಶಿಪ್‌ ಉದ್ಘಾಟನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ (ಕೆಎಸ್‌ಎ) ನೇತೃತ್ವದಲ್ಲಿ ಪುತ್ತೂರು ಅಕ್ವೆಟಿಕ್‌ ಕ್ಲಬ್‌ ಸಹಯೋಗದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯ ಅವಕಾಶ ಪುತ್ತೂರಿಗೆ ಸಿಗಬೇಕಾದರೆ ಪುತ್ತೂರಿನ ಈಜುಕೊಳ ಹೊಂದಿರುವ ಸೌಲಭ್ಯ ಮತ್ತು ಇಲ್ಲಿ ಸಿಗುತ್ತಿರುವ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಕಾರಣವಾಗಿದೆ. ತಾ| ಕೇಂದ್ರದಲ್ಲಿ ಇಂತಹ ಸೌಲಭ್ಯ ಇರುವುದು ಹೆಮ್ಮೆಯ ವಿಷಯ, ಉತ್ತಮ ಅವಕಾಶ ಎಂದರು.

ಕ್ರೀಡಾರಂಗದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಗುರುತಿಸುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರಸರಕಾರ ಹಲವು ಯೋಜನೆಗಳನ್ನೂ ಜಾರಿಗೊಳಿಸಿದೆ. ಪ್ರತಿಷ್ಟಿತ ಈಜುಕೊಳವಾಗಿ ಹೆಸರು ಮಾಡುತ್ತಿರುವ ಬಾಲವನದ ಈಜುಕೊಳಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಜಾಗತಿಕ ಮಟ್ಟದ ಹೆಗ್ಗಳಿಕೆ
ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಉದ್ಘಾಟನೆ ನೆರವೇರಿಸಿ, ಡಾ| ಕಾರಂತರ ಪ್ರಯೋಗ ಭೂಮಿ ರಾಜ್ಯಮಟ್ಟದ ಈಜುಕೊಳವನ್ನು ಹೊಂದಿ ಉತ್ತಮ ಹೆಸರು ಗಳಿಸಿದೆ. ಇಲ್ಲಿ ಆಧುನಿಕ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಅನುದಾನ ನೀಡಿದ್ದು, ಜಾಗತಿಕ ಮಟ್ಟದ ಕೊಳ ಗಮನ ಸೆಳೆದಿದೆ ಎಂದರು.

Advertisement

ಕಾರಂತರಿಗೂ ಖುಷಿ
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಡಾ| ಶಿವರಾಮ ಕಾರಂತರು ಬಾಲವನದಲ್ಲಿ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ರೂಪಿಸಿದ್ದರು. ಈಗ ಈಜುಕೊಳದ ಮೂಲಕ ಸಾವಿರಾರು ಮಕ್ಕಳು ಸಾಧನೆ ಮಾಡುತ್ತಿರುವುದು ಕಾರಂತರ ಆತ್ಮಕ್ಕೆ ಅತ್ಯಂತ ಸಂತೋಷ ಕೊಡುವ ವಿಚಾರವಾಗಿದೆ ಎಂದರು. ಕೆಎಸ್‌ಎ ಉಪಾಧ್ಯಕ್ಷರಾದ ವಿಜಯ ರಾಘವನ್‌, ಎಸ್‌.ಆರ್‌. ಸಿಂಧ್ಯಾ, ಕಾರ್ಯದರ್ಶಿ ಸತೀಶ್‌ ಕುಮಾರ್‌ ಎಂ., ಜತೆ ಕಾರ್ಯದರ್ಶಿ ಎಂ.ಪಿ. ನಾಗರಾಜ್‌, ಹಿರಿಯರಾದ ಕೃಷ್ಣಮೂರ್ತಿ ವಾರಣಾಶಿ, ಅಶ್ವಿ‌ನಿ ಕೃಷ್ಣಮೂರ್ತಿ ಶುಭ ಹಾರೈಸಿದರು. ಈಜುಕೊಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಸ್ವಾಗತಿಸಿ, ಈಜುಕೊಳದ ಪ್ರಧಾನ ತರಬೇತುದಾರ, ನಿರ್ವಾಹಕ ಪಾರ್ಥ ವಾರಣಾಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಅಕ್ವೆಟಿಕ್‌ ಕ್ಲಬ್‌ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ವಂದಿಸಿದರು. ಕಾರ್ಯದರ್ಶಿ ದಿವ್ಯಾ ಅನಿಲ್‌ ರೈ ಸಹಕರಿಸಿದರು. ನವೀನ್‌ ಕುಲಾಲ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next