Advertisement

ಹೊಸ ಬಟ್ಟೆ ಸಿಗಲೇ ಇಲ್ಲ ; ಹಳೆಯ ಬಟ್ಟೆಯೇ ಮತ್ತೆ ಉಡುವಂತಾಯಿತು

10:10 PM Mar 21, 2021 | Team Udayavani |

ಪುತ್ತೂರು: ಹೊಸ ಬಟ್ಟೆ ಉಡುವುದೆಂದು ಹಳೆಯ ಬಟ್ಟೆ ಎಸೆದಾತನಿಗೆ ಹೊಸ ಬಟ್ಟೆ ಸಿಗದೆ ಕೊನೆಗೆ ಹಳೆಯ ಬಟ್ಟೆಯನ್ನೇ ಉಟ್ಟ ಕಥೆಯನ್ನೇ ಹೋಲುತ್ತಿದೆ ಉಪ್ಪಿನಂಗಡಿ-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ!

Advertisement

ಚತುಷ್ಪಥ ರಸ್ತೆ ನಿರ್ಮಾಣಕ್ಕೆಂದು ಹಳೆ ಮೋರಿಯನ್ನು ಕೆಡವಿ ಹೊಸ ಮೋರಿ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡ ಸ್ಥಳದಲ್ಲೇ ಹಳೆಯ ಸ್ಥಿತಿಗೆ ಅನುಗುಣವಾಗಿ ಮರು ಜೋಡಣೆ ಕಾಮಗಾರಿ ಪ್ರಾರಂಭಿಸಲಾಗಿದೆ. ಅಂದರೆ ಚತುಷ್ಪಥ ವಿಸ್ತರಣೆ ಕಾಮಗಾರಿ ಸದ್ಯಕ್ಕೆ ಪುನಾರರಂಭಗೊಳ್ಳುವುದು ಅನುಮಾನ ಎನ್ನುವುದಕ್ಕೆ ಪುಷ್ಟಿ ನೀಡಿದೆ.

ತಡೆಗೋಡೆ ಕೆಡಹಿದರು ಈಗ ಮತ್ತೆ ಜೋಡಣೆ! :

ಬೆದ್ರೋಡಿ, ವಳಾಲು, ಗೋಳಿತೊಟ್ಟು, ಕೋಲ್ಪೆ ನಡುವಿನ ಸಣ್ಣ ಸಣ್ಣ ಜಂಕ್ಷನ್‌ಗಳಲ್ಲಿ ಹಳೆ ಮೋರಿಯನ್ನು ತೆಗೆದು ಹೊಸದಾಗಿ ನಿರ್ಮಿಸಲು ಮೋರಿಯ ಮೇಲ್ಭಾಗದ ಇಕ್ಕೆಲೆಗಳಲ್ಲಿ ರಸ್ತೆ ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಿದ ತಡೆಗೋಡೆ ತೆರವು ಮಾಡಲಾಗಿತ್ತು. ಚತುಷ್ಪಥ ರಸ್ತೆಯ ಉದ್ದಕ್ಕೆ ತಕ್ಕಂತೆ ಹಳೆ ಮೋರಿ ಜಾಗದಲ್ಲಿ ವಿಸ್ತರಿತ ಹೊಸ ಮೋರಿ ಅಳವಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಉದ್ದೇಶಿತ ರಸ್ತೆ ಕಾಮಗಾರಿ ನಿರೀಕ್ಷೆಯಂತೆ ಸಾಗದೆ ಹಳೆ ಮೋರಿಯಲ್ಲಿ ನೀರಿನ ಹರಿವಿಗೆ ತಡೆ ಉಂಟಾಗುವ ಸ್ಥಿತಿ ಉಂಟಾಗಿತ್ತು. ಜತೆಗೆ ತಡೆಗೋಡೆ ಇಲ್ಲದೆ ವಾಹನಗಳಿಗೆ ಸಂಚಾರದ ವೇಳೆ ಆತಂಕದ ಸ್ಥಿತಿಯೂ ಇತ್ತು. ಹೊಸ ರಸ್ತೆಯ ವಿಸ್ತರಣೆಗೆ ಅನುಗುಣವಾಗಿ ತಡೆಗೋಡೆ ನಿರ್ಮಿಸುವ ಬದಲು ಹೀಗಿರುವ ರಸ್ತೆಯಲ್ಲಿನ ಮೋರಿಗೆ ಅನುಗುಣವಾಗಿ ಈ ಹಿಂದೆ ಇದ್ದ ಜಾಗದಲ್ಲೇ ಮತ್ತೆ ತಡೆಗೋಡೆ ಕಟ್ಟಲಾಗಿದೆ.

ಕಿರು ಸೇತುವೆ ಅಪೂರ್ಣ :

Advertisement

ಅಡ್ಡಹೊಳೆಯಿಂದ ಉಪ್ಪಿನಂಗಡಿ ನಡುವಿನ 41 ಕಿ.ಮೀ. ರಸ್ತೆಯು ಕೇಂದ್ರ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಚತುಷ್ಪಥಗೊಳಿಸುವ ಸಲುವಾಗಿ ವಿದ್ಯುತ್‌ ಕಂಬಗಳು, ಕೊಳವೆ ಸಹಿತ ಹಳೆಯ ಮೋರಿ ವಿಸ್ತರಣೆ ಪ್ರಕ್ರಿಯೆಗಳು ನಡೆದಿವೆ. ರಸ್ತೆಯು ಹಲವು ತಿರುವುಗಳನ್ನು ಒಳಗೊಂಡಿರುವುದರಿಂದ ಮತ್ತು ಅಕ್ಕಪಕ್ಕದಲ್ಲಿ ಕಾಡು ಇರುವುದರಿಂದ ಇಲ್ಲಿ ರಸ್ತೆ ವಿಸ್ತರಣೆ ಸವಾಲಿನ ಕೆಲಸವಾಗಿದ್ದರೂ ಒಂದು ಭಾಗದಲ್ಲಿ ಗುಡ್ಡ ಹಾಗೂ ಇನ್ನೊಂದು ಭಾಗದಲ್ಲಿ ಹಳ್ಳ ಇದ್ದು ಇವುಗಳನ್ನು ಸಮತಟ್ಟುಗೊಳಿಸಿ ಅನಂತರ ಕಾಮಗಾರಿ ಕೈಗೆತ್ತಿಕೊಳ್ಳುವ ಕಾರ್ಯ ಆರಂಭಿಸಲಾಗಿತ್ತು. ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕ 2 ಮೇಲ್ಸೇತುವೆ, 2 ದೊಡ್ಡ ಸೇತುವೆ, 14 ಸಣ್ಣ ಸೇತುವೆ ನಿರ್ಮಿಸಲು ಉದ್ದೇಶಿಸಿದ್ದು ಉಪ್ಪಿನಂಗಡಿ-ಅಡ್ಡಹೊಳೆ ತನಕ ಸಣ್ಣ ಸೇತುವೆ ಕಾಮಗಾರಿ ಕೂಡ ಅಪೂರ್ಣ ಸ್ಥಿತಿಯಲ್ಲಿದೆ. ಗುಡ್ಡ ಪ್ರದೇಶ ಕುಸಿಯದ ಹಾಗೆ ನಿರ್ಮಿಸಲಾದ ತಡೆಗೋಡೆಗಳು ಕೂಡ ಪೂರ್ಣಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next