Advertisement

ಸಾಹಿತ್ಯ ವಿಚಾರಧಾರೆಗಳ ದಾಖಲೀಕರಣ ಅಗತ್ಯ

09:29 AM Jan 25, 2019 | Team Udayavani |

ನೆಹರೂನಗರ: ಸಾಹಿತಿ ಯೊಬ್ಬನು ಸೃಷ್ಟಿಸಿದ ಸಾಹಿತ್ಯವನ್ನು, ಆತನ ಮಾತು, ಅಭಿಪ್ರಾಯಗಳನ್ನು ವೀಡಿಯೋ ಮೂಲಕ ದಾಖಲೀಕರಿಸಬೇಕಾದ ಅಗತ್ಯ ವಿದೆ. ಆಗ ಸಾಹಿತಿಯ ಅನಂತರವೂ ವಿಚಾರಧಾರೆಗಳು ಪರಿಣಾಮಕಾರಿಯಾಗಿ ಉಳಿದುಕೊಳ್ಳುತ್ತವೆ ಎಂದು ಸಾಹಿತಿ ಎ.ಪಿ. ಮಾಲತಿ ಅಭಿಪ್ರಾಯಿಸಿದರು.

Advertisement

ವಿವೇಕಾನಂದ ಕಾಲೇಜಿನಲ್ಲಿ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಕೊಡಮಾಡಿದ ನಿರಂಜನ ಪ್ರಶಸ್ತಿ ಸ್ವೀಕರಿಸಿದ ಅವರು, ನಮ್ಮ ವರ್ತಮಾನದ ಬದುಕಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳ ಅರಿವಿಗಾಗಿ ಅಪಾರವಾದ ಓದು ಅಗತ್ಯ ಎಂದು ಹೇಳಿದರು.

ನಿರಂಜನ ಅವರ ಪ್ರತಿಯೊಂದು ಸಾಹಿತ್ಯದಲ್ಲೂ ಆಶಾವಾದವಿದೆ. ಅವರ ಸತ್ವಭರಿತ ಸಾಹಿತ್ಯ ಹಾಗೂ ಶ್ರೇಷ್ಠ ಕಾರ್ಯಗಳನ್ನು ವಿದ್ಯಾರ್ಥಿಗಳು ಅರಿಯಬೇಕಾದ ಅಗತ್ಯವಿದೆ. ನಿರಂಜನ ಅವರ ಅರಿವೇ ಬರೆಯುವ ಬದುಕಿಗೆ ಹೊಸ ಹಾದಿಯನ್ನು ಕಲ್ಪಿಸಿಕೊಡಬಲ್ಲುದು. ಅಂತಹ ಮಹಾನ್‌ ಸಾಹಿತಿಯ ಹೆಸರಿಸಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಸ್ವೀಕರಿಸುವುದೇ ಸೌಭಾಗ್ಯ ಎಂದರು.

ನೆಲದ ಸಾಹಿತ್ಯ
ಅಧ್ಯಕ್ಷತೆ ವಹಿಸಿದ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ಡಾ| ತಾಳ್ತಜೆ ವಸಂತ ಕುಮಾರ ಮಾತನಾಡಿ, ಇಂದು ಕಮ್ಯೂನಿಸ್ಟ್‌ ಸಿದ್ಧಾಂತದಿಂದ ಪ್ರೇರಿತರಾದ ಸಾಹಿತಿಗಳು ಪಾಶ್ಚಿಮಾತ್ಯ ಸಾಹಿತಿಗಳನ್ನು, ಬರಹಗಳನ್ನು ಮಾದರಿಯಾಗಿ ಸ್ವೀಕರಿಸಿರುವುದು ಭಾರತೀಯ ನೆಲೆಗಟ್ಟಿನ ಸಾಹಿತ್ಯದ ವಾಸ್ತವಿಕ ವಿಮರ್ಶೆಗೆ ಅಡ್ಡಿಯುಂಟು ಮಾಡುತ್ತಿದೆ. ಇಲ್ಲಿಯ ಸಾಹಿತ್ಯದ ಚರ್ಚೆಗಳು, ವಿಶ್ಲೇಷಣೆಗಳು ಈ ನೆಲದ ಸಾಹಿತ್ಯದ ಆಧಾರದಲ್ಲಿರಬೇಕು. ಪಶ್ಚಿಮದ ಚಿಂತನೆಗಳಿಗೆ ಇಲ್ಲಿಯದನ್ನು ತಾಳೆ ಹಾಕುತ್ತಾ ವಿಮರ್ಶಿಸಿದರೆ ಸರಿಯೆನಿಸದು. ಎ.ಪಿ.ಮಾಲತಿ ಅವರ ಸಾಹಿತ್ಯದಲ್ಲಿ ಪ್ರಾದೇಶಿಕ ಸೌಂದರ್ಯವಿದೆ. ಇದು ಈ ಮಣ್ಣಿನ ನಿಜವಾದ ಸಾಹಿತ್ಯ ಎಂದರು.

ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ, ಸಂಚಾಲಕ ಎಂ.ಟಿ. ಜಯರಾಮ ಭಟ್ ಉಪಸ್ಥಿತರಿದ್ದರು. ಎ.ಪಿ. ಮಾಲತಿ ಅವರ ಕಥೆಯೊಂದನ್ನು ಕನ್ನಡ ವಿದ್ಯಾರ್ಥಿ ಅರುಣ್‌ ಕುಮಾರ್‌ ವಾಚಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಧರ ಎಚ್.ಜಿ. ವಂದಿಸಿದರು. ಕನ್ನಡ ಉಪನ್ಯಾಸಕಿ ಡಾ| ಗೀತಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಐಚ್ಛಿಕ ಕನ್ನಡ ವಿದ್ಯಾರ್ಥಿನಿ ಅಶ್ವಿ‌ನಿ ಆಶಯ ಗೀತೆಯನ್ನು ಪ್ರಸ್ತುತಪಡಿಸಿದರು.

Advertisement

ಮಾದರಿ ಸಾಹಿತಿ
ಅಭಿನಂದನ ಭಾಷಣ ಮಾಡಿದ ಉಪ್ಪಿನಂಗಡಿಯ ಸ.ಪ್ರ.ದ. ಕಾಲೇಜಿನ ಉಪನ್ಯಾಸಕಿ ಸತ್ಯಭಾಮಾ ಪಿ. ಅವರು, ಎ.ಪಿ. ಮಾಲತಿಯವರು ಓರ್ವ ಗೃಹಿಣಿ ಹೇಗೆ ಸಮಾಜಮುಖೀಯಾಗಿ ತೆರೆದುಕೊಳ್ಳಬಲ್ಲಳು ಎಂಬುದಕ್ಕೆ ನಿದರ್ಶನ. ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಅತ್ತೆಯಾಗಿ ಕರ್ತವ್ಯ ನಿಭಾಯಿಸುವ ಜತೆಗೆ ತನ್ನ ಆಸಕ್ತಿಯ ಕ್ಷೇತ್ರದಲ್ಲೂ ಅಪಾರ ಪರಿಶ್ರಮ ಮಾಡಿದ್ದಾರೆ. ವೈಚಾರಿಕ ನೆಲೆಗಟ್ಟಿನಿಂದ ಓದುಗರ ಅಂತರಂಗದಲ್ಲಿ ಸ್ಥಾಯಿಯಾಗಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next