Advertisement
ಈ ಹಿಂದೆ ಅನಧಿಕೃತ ಲೇಔಟ್‌ಗಳಲ್ಲಿ ಖರೀದಿಸಿರುವ ಹಾಗೂ ಸ್ವಂತ ಜಾಗ ತುಂಡರಿಸಿ ಮಾರಾಟ ಮಾಡಿ ಕಟ್ ಕನ್ವರ್ಷನ್‌ಗೆ ಒಳಗಾದ ಮಂದಿ ಒಂದೆಡೆ ನಿವೇಶನ ಮಾರಲಾಗದೆ, ಇನ್ನೊಂದೆಡೆ ಮನೆ ನಿರ್ಮಿಸಲಾಗದೆ ಒದ್ದಾಡುತ್ತಿದ್ದಾರೆ. ಇತ್ತ ಸರಕಾರವು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರೂ ಅದರ ಅನುಷ್ಠಾನಕ್ಕೆ ಮೀನ ಮೇಷ ಎಣಿಸುತ್ತಿದೆ.
Related Articles
Advertisement
ನಿಯಮ ಹೇಗಿದೆ
ಬಡಾವಣೆ ನಿರ್ಮಿಸಲು ನಗರ ಯೋಜನ ಪ್ರಾಧಿಕಾರದಲ್ಲಿ ಹಲವು ಕಾನೂನಾತ್ಮಕ ಷರತ್ತುಗಳಿವೆ. 9 ಸೆಂಟ್ಸ್‌ಗಿಂತ ಕಡಿಮೆ ಜಾಗ ಇದ್ದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ 7ಮೀಟರ್, 10 ಸೆಂಟ್ಸ್‌ಗಿಂತ ಮೇಲ್ಪಟ್ಟಿದ್ದರೆ 9 ಮೀಟರ್ ಜಾಗವನ್ನು ಬಿಟ್ಟುಕೊಡಬೇಕು. ಪಾರ್ಕ್, ಚರಂಡಿ, ನೀರಿನ ಟ್ಯಾಂಕ್ ವ್ಯವಸ್ಥೆ ಇರುವ ಹಾಗೆ ಬಡಾವಣೆ ನಿರ್ಮಿಸಬೇಕು. ಈ ನಿಯಮ ಪಾಲಿಸದೆ ಬಡಾವಣೆ ನಿರ್ಮಿಸಿರುವುದು ಈಗಿನ ಸಮಸ್ಯೆಗೆ ಮುಖ್ಯ ಕಾರಣ. ಸೈಟ್ ಖರೀದಿ ಮಾಡಿದ ಹಲವಾರು ಮಂದಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಸಿಂಗಲ್ ಲೇ ಔಟ್‌ಗಿಲ್ಲ ಸಮತ್ಮಿ
ಸ್ವಂತ ನಿವೇಶನವೊಂದರ ಪಕ್ಕದ ನಿವೇಶನ ಮಾರಾಟ ಮಾಡುವ ಸಂದರ್ಭ ತನ್ನ ಸೈಟ್‌ನಿಂದ ಸ್ವಲ್ಪ ಜಾಗವನ್ನು ಕತ್ತರಿಸಿ ನೀಡಿರುವ ಉದಾಹರಣೆಗಳಿವೆ. ಪರಿಣಾಮ ಒಂದು ಸರ್ವೇ ನಂಬರ್‌ನಲ್ಲಿ 2 ವಿಭಾಗಗಳಾದಂತಾಯಿತು. ಇಂತಹ ಜಾಗವನ್ನು ಸಿಂಗಲ್ ಲೇಔಟ್ ಮಾಡಲು ನಗರ ಯೋಜನ ಪ್ರಾಧಿಕಾರದಲ್ಲಿ ಯಾವುದೇ ಅವಕಾಶ ಇಲ್ಲ. ಈ ಪ್ರಕರಣದಲ್ಲಿ ಸಿಂಗಲ್ ಲೇ ಔಟ್‌ಗಾಗಿ ಅರ್ಜಿ ನೀಡಲು ಬಂದರೆ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುತ್ತಿಲ್ಲ. ಸಿಂಗಲ್ ಲೇ ಔಟ್ ಆಗದೆ ನಗರಾಡಳಿತದಿಂದ ಮನೆ ಕಟ್ಟಲು ಪರವಾನಿಗೆಯೂ ಸಿಗುತ್ತಿಲ್ಲ.
ತೊಡಕುಗಳನ್ನು ತೆಗೆದು ಹಾಕಿ
ಕಟ್ ಕನ್ವರ್ಷನ್‌ಗಿರುವ ತೊಡಕುಗಳನ್ನು ತೆಗೆದು ಹಾಕಿ ಸಿಂಗಲ್ ಲೇಔಟ್‌ಗಾಗಿ ಸಲ್ಲಿಸಿರುವ ಅರ್ಜಿಗಳಿಗೆ ಶೇ. 10ರಿಂದ ಶೇ. 15 ದಂಡ ವಿಧಿಸಿದಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣ ದಂಡ ರೂಪದಲ್ಲಿ ಬರುವ ಸಾಧ್ಯತೆಯಿದೆ. ಇದನ್ನು ನಗರ ಯೋಜನ ಪ್ರಾಧಿಕಾರ, ನಗರಸಭೆ ಮೂಲಕ ಸಂಗ್ರಹಿಸದೆ ನೇರ ಸರಕಾರದ ಖಜಾನೆ ಮೂಲಕ ತುಂಬುವಂತಾಗಬೇಕು. ಈ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಅಲ್ಲದೆ ಸಾವಿರಾರು ಮನೆಗಳ ನಿರ್ಮಾಣದಿಂದ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ನಿರ್ಮಾಣ ಆಗುತ್ತದೆ, ಕಟ್ಟಡಕ್ಕೆ ಬಳಕೆಯಾಗುವ ವಸ್ತುಗಳಾದ ಕಬ್ಬಿಣ, ಸಿಮೆಂಟ್ ಮೊದಲಾದವುಗಳಿಂದ ತೆರಿಗೆ ಸಂಗ್ರಹವಾಗುತ್ತದೆ ಅನ್ನುವುದು ಅಧಿಕಾರಿಗಳ ಅಭಿಪ್ರಾಯ.
ಶೀಘ್ರ ಸಮಸ್ಯೆ ಪರಿಹಾರ: ಕಟ್ ಕನ್ವರ್ಷನ್‌ನ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪುತ್ತೂರು, ಬಂಟ್ವಾಳ, ಮೂಡುಬಿದಿರೆ ಸಹಿತ ಕರಾವಳಿ ಭಾಗದ ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾವಿಸಿದ್ದೇವೆ. ಸಂಬಂಧಿಸಿದ ಇಲಾಖೆಯ ಸಚಿವರು ಕೂಡ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಶೀಘ್ರ ಸಮಸ್ಯೆ ಪರಿಹಾರವಾದೀತು. -ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಕಿರಣ್ ಪ್ರಸಾದ್ ಕುಂಡಡ್ಕ