ಪುತ್ತೂರು: ಮೇರಿ ಮಾತೆಯ ಧನಾತ್ಮಕತೆ, ಪ್ರೀತಿ, ತ್ಯಾಗ ಹಾಗೂ ಭ್ರಾತೃತ್ವದ ಚಿಂತನೆಗಳನ್ನು ನಮ್ಮ ಕುಟುಂಬದಲ್ಲಿ ಅಳವಡಿಸುತ್ತಾ ಸಮಾಜದಲ್ಲಿ ಆದರ್ಶವಾಗಿ ಜೀವಿಸಬೇಕು ಎಂದು ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ| ಪ್ರವೀಣ್ ಡಿ’ಸೋಜಾ ಹೇಳಿದರು.
ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಶನಿವಾರ ನಡೆದ ಏಸು ಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ‘ಮೊಂತಿ ಫೆಸ್ತ್-ಕುಟುಂಬದ ಹಬ್ಬದಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಿದರು. ತ್ಯಾಗವೇ ಪರಿಪೂರ್ಣ ಜೀವನಕ್ಕೆ ದಾರಿ. ಸಮಾಜದಲ್ಲಿ ಜೀವಿಸುವಾಗ ನಾವು ಇತರರಿಗೆ ಆದರ್ಶರಾಗಿ ಬಾಳುತ್ತಾ, ಪರಸ್ಪರ ಹೊಂದಾಣಿಕೆಯಲ್ಲಿ ಸಾಗುತ್ತಾ, ಸಹೋದರತ್ವ ಭಾವನೆಯಿಂದ ಎಲ್ಲರನ್ನು ನೋಡುವಂತಾದಾಗ ಇತರರು ನಮ್ಮನ್ನು ಅನುಕರಿಸಲು ಶಕ್ತರಾಗುತ್ತಾರೆ. ತಂದೆ- ತಾಯಿಯನ್ನು ಗೌರವದಿಂದ ಕಾಣುವುದೇ ಮೇರಿ ಮಾತೆಗೆ ನಮನ ಸಲ್ಲಿಸಿದಂತೆ ಎಂದರು.
ಪ್ರಧಾನ ಧರ್ಮಗುರು ವಂ| ಆಲ್ಫ್ರೆಡ್ ಜಾನ್ ಪಿಂಟೊ ಅವರು ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಸಹಾಯಕ ಧರ್ಮಗುರು ವಂ| ಪ್ರವೀಣ್ ಡಿ’ಸೋಜಾ ಅವರು ಭತ್ತದ ತೆನೆಗಳನ್ನು ಶುದ್ಧೀಕರಿಸಿ, ಆಶೀರ್ವಚಿಸಿದರು. ವಂ| ವಲೇರಿಯನ್ ಮಸ್ಕರೇನ್ಹಸ್ ಮಿತ್ತೂರು ಅವರು ಬಲಿಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಜೆ.ಪಿ. ರೋಡ್ರಿಗಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಚರ್ಚ್ ಸ್ಯಾಕ್ರಿಸ್ಟಿಯನ್ ಬ್ಯಾಪ್ಟಿಸ್ಟ್ ತಾವ್ರೊ, ಗಾಯನ ಮಂಡಳಿ ಸದಸ್ಯರು, ವೇದಿ ಸೇವಕರು, ವಾಳೆ ಗುರಿಕಾರರು ಸಹಕರಿಸಿದರು.
ಮರೀಲ್ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಬೆದ್ರಾಳ-ಕಾಡುಮನೆ ಪರಿಸರದ ಕ್ರೈಸ್ತ ಬಾಂಧವರು ಹೊಸ ಧಾನ್ಯಗಳ, ಭತ್ತದ ತೆನೆಯ ಜೊತೆಗೆ ಭಕ್ತಿ ಮೆರವಣಿಗೆ ಮೂಲಕ ಚರ್ಚ್ಗೆ ಆಗಮಿಸಿದರು. ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಚರ್ಚ್‌ನ ಪ್ರವೇಶ ದ್ವಾರದಲ್ಲಿನ ಮರಿಯಮ್ಮರವರ ಗ್ರೊಟ್ಟೊ ಬಳಿಯಲ್ಲಿ ಭತ್ತದ ತೆನೆಗಳಿಗೆ ಪ್ರಧಾನ ಧರ್ಮಗುರು ವಂ| ಪ್ರಶಾಂತ್ ಫೆರ್ನಾಂಡೀಸ್ ಅವರು ಪವಿತ್ರ ಜಲ ಸಂಪ್ರೋಕ್ಷಿಸಿ ಆಶೀರ್ವಚಿಸಿದರು. ಹೂವು ತಂದ ಮಕ್ಕಳಿಗೆ ಕಬ್ಬು ವಿತರಿಸಲಾಯಿತು. ಹಬ್ಬದ ಇನ್ನೊಂದು ವಿಶೇಷವೆಂದರೆ ಹೊಸ ಅಕ್ಕಿ ಊಟ. ತೆನೆಯನ್ನು ಮೆರವಣಿಗೆಯ ಮೂಲಕ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದ ಪಡೆದು, ಮನೆಗೆ ಕೊಂಡೊಯ್ಯಲಾಗುತ್ತದೆ. ಮನೆಯಲ್ಲಿ ಮೇಣದ ಬತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸ ಸಂಖ್ಯೆ ಆಧಾರದಲ್ಲಿ ಪುಡಿ ಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲ ಅಡುಗೆ ಸಸ್ಯಾಹಾರವಾಗಿದ್ದು, ಬೆಸ ಸಂಖ್ಯೆ ಆಧಾರದಲ್ಲಿರುತ್ತದೆ.