ನೆಟ್ಟಣಿಗೆಮುಟ್ನೂರು: ಜೀವನದಲ್ಲಿ ಛಲ ಬೇಕು. ಕೇವಲ ಅಂಕದ ಮೇಲೆ ಮಕ್ಕಳನ್ನು ಬೆಳೆಸ ಬಾರದು. ಸುತ್ತಮುತ್ತ ನಡೆಯುವ ಆಗುಹೋಗುಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಆಟಪಾಠಗಳೊಂದಿಗೆ ಸಮಾಜದ ಕಡೆಗೆ ಹೆಚ್ಚು ಗಮನಕೊಡುತ್ತಿದ್ದಾರೆ. ಆದರಿಂದ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚು ಇದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ನೆಟ್ಟಣಿಗೆಮುಟ್ನೂರು ಸರಕಾರಿ ಪ್ರೌಢ ಶಾಲೆಯ ದಶಮಾನೋತ್ಸವದ ಪೂರ್ವಭಾವಿ ಸಭೆ ಯಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರಿ ಶಾಲೆಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಿ ರೂಪುಗೊಳ್ಳಬೇಕು. ದಶಮಾನೋತ್ಸವ ಸಂಭ್ರಮದಲ್ಲಿರುವ ಗಡಿಭಾಗದ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಸಭಾಂಗಣಕ್ಕೆ 5 ಲಕ್ಷ ರೂ. ಮಂಜೂರು ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜತೆಗೆ ಗ್ರಾಮಕ್ಕೆ ಕಾಲೇಜು ಮಂಜೂರುಗೊಳಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ಏಕೈಕ ಸರಕಾರಿ ಪ್ರೌಢಶಾಲೆ ಒಳ್ಳೆಯ ಫಲಿತಾಂಶಕ್ಕೆ ಕಾರಣವಾಗಿದೆ. ಪ್ರಸ್ತುತ 171 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರ ಕೊರತೆ ಇಲ್ಲದಿದ್ದರೂ ಶಾಲೆ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಮುಖ್ಯವಾಗಿ ಸುಸಜ್ಜಿತ ಸಭಾಂಗಣದ ವ್ಯವಸ್ಥೆಯನ್ನು ದಶಮಾನೋತ್ಸವದ ಸಂದರ್ಭದಲ್ಲಿ ಬೇಕಾಗಿರುವುದರಿಂದ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ. ಗ್ರಾಮದ ದಾನಿಗಳ ಸಹಕಾರದಿಂದ ಶಾಲೆ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ ಪಕ್ಕಳ ಮಾತನಾಡಿ, ಶಾಸಕರು ನೀಡಿದ ಭರವಸೆಗಳು ಈಡೇರಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಸಕರು ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಶಂಕರಿ ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ರಾಗಾಳಿ ಮಾತನಾಡಿ, ಮುಂದಿನ ದಿನದಲ್ಲಿ ಈ ಶಾಲೆಗೆ ವಿದೇಶಿ ಮಾದರಿ ಶಿಕ್ಷಣವನ್ನು ಸ್ಮಾರ್ಟ್ ಕ್ಲಾಸ್ ಮಾಡುವ ಯೋಜನೆಯನ್ನು ಹಮ್ಮಿಕ್ಕೊಂಡಿದ್ದೇನೆ. ಇದರಿಂದ ಮಕ್ಕಳಿಗೆ ಪ್ರಪಂಚದ ಆಗುಹೋಗುಗಳನ್ನು ತಿಳಿಯಬಹುದಾಗಿದೆ. ಅದಕ್ಕೆ ಬೇಕಾಗುವ ವೆಚ್ಚವನ್ನು ಸ್ವತಃ ಭರಿಸುತ್ತೇನೆ. ಜತೆಗೆ ಶಾಸಕರು ಇಂಜಿನಿಯರ್ ಹಾಗೂ ತಾಂತ್ರಿಕ ಶಿಕ್ಷಣದ ಕಾಲೇಜು ಮಂಜೂರು ಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಪುತ್ತೂರು ನಗರ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಫೌಝೀಯಾ ಇಬ್ರಾಹಿಂ ಕೆ., ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೇನಾಲ, ಮಾಯಿಲನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಕೆ.ಎಂ. ಮಹಮ್ಮದ್, ಶಿಕ್ಷಕಿಯರಾದ ಸುನೀತಾ, ಇಂದಿರಾ, ಎಸ್‌ಡಿಎಂಸಿ ಪದಾಧಿಕಾರಿಗಳು, ಹೆತ್ತವರು ಉಪಸ್ಥಿತರಿದ್ದರು.