Advertisement
ದ.ಕ. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿಗೆ ಪೂರಕವಾಗಿ 2013ರಲ್ಲಿ ಅಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮೆಡಿಕಲ್ ಕಾಲೇಜು ನಿರ್ಮಾಣದ ಕುರಿತು ಸರಕಾರದ ಹಂತದಲ್ಲಿ ಬೇಡಿಕೆ ಇರಿಸಿದ್ದರು. ಅದಕ್ಕಾಗಿ ಬನ್ನೂರು ಸೇಡಿಯಾಪು ಬಳಿ 40 ಎಕರೆಯನ್ನು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಕಾದಿರಿಸಿ ಅದರ ಪಹಣಿ ಪತ್ರವು ಆಗಿತ್ತು.
ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಸ.ನ.84 ರಲ್ಲಿನ 40 ಎಕ್ರೆ ಜಮೀನನ್ನು ರದ್ದುಪಡಿಸಿ ಸೀ-ಫುಡ್ ಪಾರ್ಕ್ ನಿರ್ಮಾಣಕ್ಕೆ ಪಹಣಿ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ 7 ದಿವಸದೊಳಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಬನ್ನೂರಿನ ಗ್ರಾಮಕರಣಿಕರು ಪ್ರಕಟನೆ ಹೊರಡಿಸಿದ್ದಾರೆ. ಈ ಪರಭಾರೆ ವಿಚಾರ ಈಗ ಅನೇಕರ ವಿರೋಧಕ್ಕೂ ಕಾರಣವಾಗಿದೆ. 50 ಕೋ.ರೂ. ವೆಚ್ಚದಲ್ಲಿ ಸಿ-ಫುಡ್ ಪಾರ್ಕ್
ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಪುತ್ತೂರಿನಲ್ಲಿ ತಲಾ 50 ಕೋಟಿ ರೂ. ವೆಚ್ಚದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣದ ಮೂಲಸೌಕರ್ಯ ರಚನೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಸಾಗರೋತ್ಪನ್ನಕ್ಕೆ ಸಂಬಂಧಿಸಿದ ಕಾರ್ಖಾನೆಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಸ್ತಾವನೆಯಂತೆ ಜಿಲ್ಲಾ ಉಸ್ತುವಾರಿ ಸಚಿವರು ಬನ್ನೂರು ಗ್ರಾಮದ ಸರ್ವೇ ನಂಬರ್ 84ರಲ್ಲಿ 40 ಎಕರೆ ಜಮೀನನ್ನು ಮೆಡಿಕಲ್ ಕಾಲೇಜು ಯೋಜನೆಯಿಂದ ರದ್ದುಪಡಿಸಿ ಮೆಗಾ ಸೀ-ಫುಡ್ ಯೋಜನೆಗಾಗಿ ಬಳಸಿಕೊಳ್ಳಲು ಸೂಚನೆ ನೀಡಿದ್ದರು.
Related Articles
ಸಿ-ಫುಡ್ ಪಾರ್ಕ್ ಯೋಜನೆ ಪುತ್ತೂರಿನಲ್ಲಿ ಅನುಷ್ಠಾನಗೊಳಿಸುವುದಕ್ಕೆ ಆಕ್ಷೇಪ ಇಲ್ಲ. ಆದರೆ ಅದಕ್ಕೆ ಸರಕಾರಿ ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಜಾಗ ಬಳಸುವುದಕ್ಕೆ ವಿರೋಧ ಇದೆ. ಈಗಿನ ಶಾಸಕರು ಬೇರೆ ಜಾಗ ಗುರುತಿಸಲಿ. ಅದು ಬಿಟ್ಟು ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಜಾಗ ಬಳಸುವುದು ಸರಿ ಅಲ್ಲ. ಮೆಡಿಕಲ್ ಕಾಲೇಜು ಮಂಜೂರು ಆಗಬೇಕಾದರೆ ಅದಕ್ಕೆ ಮೊದಲೇ ಜಾಗ ಕಾದಿರಿಸಬೇಕು. ಆ ಕೆಲಸವನ್ನು ನನ್ನ ಅವಧಿಯಲ್ಲಿ ಮಾಡಿದ್ದೆ. ಈಗಿನ ಶಾಸಕರಿಗೆ ಮೆಡಿಕಲ್ ಕಾಲೇಜು ಮಾಡಲು ಆಸಕ್ತಿ ಇಲ್ಲ ಎಂದಾದರೆ ಮುಂದೆ ಬರುವ ಆಸಕ್ತ ಶಾಸಕರಿಗಾದರೂ ಕೆಲಸ ಮಾಡಲು ಜಾಗ ಇರಲಿ.
-ಟಿ.ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ
Advertisement
ಜಮೀನು ಬೇಕಾಗಿದೆಮೆಡಿಕಲ್ ಕಾಲೇಜ್ ಜಾಗವನ್ನು ಸಿ-ಫುಡ್‌ಗೆ ಕಾದಿರಿಸುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೆಡಿಕಲ್ ಕಾಲೇಜು ಯಾವಾಗ ಮಂಜೂರಾಗುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಈಗ ಸದ್ಯಕ್ಕೆ ನಮಗೆ ಸಿ- ಫುಡ್ ಪಾರ್ಕ್ ನಿರ್ಮಾಣಕ್ಕೆ ಜಮೀನು ಬೇಕಾಗಿದೆ. ಬೇರೆ ಯಾವುದಾದರೂ ಕಡೆ ಜಾಗ ಸಿಗಬಹುದೇ ಎಂದು ಪರಿಶೀಲನೆ ನಡೆಸಲಾಗುವುದು. ಸೂಕ್ತ ಜಾಗ ಸಿಕ್ಕಿದರೆ ಅದನ್ನೇ ಬಳಸಿಕೊಳ್ಳಲಾಗುವುದು. ಇಲ್ಲದಿದ್ದರೆ ಮೆಡಿಕಲ್ ಕಾಲೇಜಿಗೆ ಕಾದಿರಿಸಿದ ಜಾಗ ಬಳಸಲು ಉದ್ದೇಶಿಸಲಾಗಿದೆ.
-ಡಾ| ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ, ದ.ಕ.