Advertisement

ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಕರ ಗೋಳು ಕೇಳುವವರಿಲ್ಲ

08:00 AM Sep 11, 2017 | Team Udayavani |

ಮಂಗಳೂರು: ಪುತ್ತೂರು-ಮಂಗಳೂರು(ಸ್ಟೇಟ್‌ಬ್ಯಾಂಕ್‌) ಮಾರ್ಗದ ಮಧ್ಯೆ ಬರೋಬ್ಬರಿ 216 ಟ್ರಿಪ್‌ಗ್ಳು ಕಾರ್ಯಾಚರಿಸುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದರೂ, ಎಲ್ಲ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ ಎಂಬ ಆರೋಪ ನಿತ್ಯ ಪ್ರಯಾಣಿಕರಿಂದ ಕೇಳಿಬರುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ನವರು ಖಾಸಗಿ ಬಸ್‌ ಮಾಲಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಚೇರಿ ವೇಳೆ ಟ್ರಿಪ್‌ ಕಟ್‌ ಮಾಡುತ್ತಿದ್ದಾರೆ ಎಂದು ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಸುವವರು ಕೆಎಸ್‌ಆರ್‌ಟಿಸಿ ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. 

Advertisement

ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನೀಡಿರುವ ಮಾಹಿತಿ ಗಮನಿಸಿದರೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲು ಸಾಧ್ಯವಿಲ್ಲ. ಆದರೆ ಬೆಳಗ್ಗೆ ಹಾಗೂ ಸಂಜೆ ಕಚೇರಿ ವೇಳೆ ಈ ಈ ಮಾರ್ಗದ ಬಸ್‌ಗಳು ಎಲ್ಲಿ ಹೋಗುತ್ತವೆ ಎಂಬುದು ಪ್ರಯಾಣಿಕರಿಗೆ ಗೊತ್ತಾಗುತ್ತಿಲ್ಲ. ಅಂದರೆ, ನಾಮಕಾವಸ್ಥೆಗಷ್ಟೇ ಕೆಎಸ್‌ಆರ್‌ಟಿಸಿಯ ಟ್ರಿಪ್‌ಶೀಟ್‌ನಲ್ಲಿ ಈ ಬಸ್‌ಗಳ ಸಂಚಾರದ ಅವಧಿ ಮತ್ತು ಟ್ರಿಪ್‌ಗ್ಳನ್ನು ನಮೂದಿಸಲಾಗಿದೆಯೇ ಹೊರತು, ಅವು ರಸ್ತೆಯಲ್ಲಿ ಓಡಾಡುವುದು ಕಾಣಿಸುತ್ತಿಲ್ಲ ಎನ್ನುವುದು ಪ್ರಯಾಣಿಕರ ಆರೋಪ. “ನಾವು ಕೆಎಸ್‌ಆರ್‌ಟಿಯವರ ಪಾಸ್‌ ಮಾಡಿಸಿಕೊಂಡು ಕೆಎಸ್‌ಆರ್‌ಟಿಸಿಗೆ ಕಾದು ಕಾಂಟ್ರಾÂಕ್ಟ್ ಕ್ಯಾರೇಜ್‌ ಬಸ್‌ನಲ್ಲಿ ಹೋಗಬೇಕಾದ ಸ್ಥಿತಿ ಬಂದಿದೆ ಇದೆ’ ಎನ್ನುವುದು ಪ್ರಯಾಣಿಕರ ನಿತ್ಯದ ಗೋಳಾಗಿದೆ. 

ನಿತ್ಯ ಪ್ರಯಾಣಿಕರ ಆರೋಪ
ಉದಾಹರಣೆಗೆ ಪುತ್ತೂರಿನಿಂದ ಮಂಗಳೂರಿಗೆ ಬರುವ ಪಾಸ್‌ ಹೊಂದಿರುವ ನಿತ್ಯ ಪ್ರಯಾಣಿಕರೊಬ್ಬರು ಬುಧವಾರ(ಆ. 16ರಂದು) ಬೆಳಗ್ಗೆ 8.05ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾದು ಕೊನೆಗೆ ಉಪಾಯವಿಲ್ಲದೆ 8.30ಕ್ಕೆ ಖಾಸಗಿ ಬಸ್‌ ಮೂಲಕ ಮಂಗಳೂರಿಗೆ ಬಂದಿಳಿಯಬೇಕಾಯಿತು. ಆದರೆ, ಈ ಅವಧಿಯಲ್ಲಿ ಪುತ್ತೂರಿನಿಂದ ಮಂಗಳೂರು ಕಡೆಗೆ ಕೆಎಸ್‌ಆರ್‌ಟಿಸಿಯ ಕೇವಲ ಒಂದು ಷಟಲ್‌ ಬಸ್‌ ಬಿಟ್ಟರೆ ಬೇರೆ ಯಾವುದೇ ಸರಕಾರಿ ಬಸ್‌ ಸಂಚಾರ ನಡೆಸಿಲ್ಲ. ಇನ್ನೊಂದೆಡೆ, ಈ ಅವಧಿ ಮಧ್ಯೆ ಒಟ್ಟು ಮೂರು ಖಾಸಗಿ ಬಸ್‌ಗಳು ಸಂಚರಿಸಿವೆ ಎನ್ನುವುದು ನೊಂದ ಪ್ರಯಾಣಿಕರ ವಾದ. 

ಪ್ರತಿದಿನ ಪುತ್ತೂರಿನಿಂದ ಮಂಗಳೂರಿಗೆ ಸುಮಾರು 10 ಖಾಸಗಿ ಬಸ್‌ಗಳು ಒಂದರ ಹಿಂದೆ ಒಂದರಂತೆ ಸಂಚರಿಸುತ್ತಿರುತ್ತವೆ. ಬಹುತೇಕ ಎಲ್ಲ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿರುತ್ತದೆೆ. ವಿಶೇಷ ಅಂದರೆ, ಮಕ್ಕಳು ಶಾಲೆಗೆ ಹಾಗೂ ನೌಕರರು ಕಚೇರಿಗೆ ಹೋಗುವ ವೇಳೆಯಲ್ಲಿ ಸರಕಾರಿ ಬಸ್‌ಗಳು ನಾಪತ್ತೆಯಾಗಿರುತ್ತವೆ. ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿರುತ್ತವೆ. ಆದರೆ ಕಚೇರಿ ವೇಳೆ ಬಿಟ್ಟರೆ ಉಳಿದ ಸಮಯಗಳಲ್ಲಿ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಲಿಯಾಗಿಯೇ ಓಡುತ್ತವೆ. ಈ ರೀತಿ ಖಾಸಗಿ ಬಸ್‌ನವರ ಈ ರೀತಿಯ ಲಾಬಿಯಿಂದಾಗಿ ಸಾರ್ವಜನಿಕರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಇದ್ದು ಕೂಡ ಇಲ್ಲದಂತಾಗಿವೆ. ಈ ಸಮಸ್ಯೆಯಿಂದಾಗಿ ಹೆಚ್ಚಿನ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಪಾಸ್‌ ಮಾಡುವುದನ್ನೇ ಬಿಟ್ಟಿದ್ದಾರೆ. ಕೆಲವರು ಪಾಸ್‌ ಇದ್ದರೂ ಖಾಸಗಿ ಬಸ್‌ನಲ್ಲಿ ಅನ್ಯಮಾರ್ಗವಿಲ್ಲದೆ ಹೋಗುತ್ತಿದ್ದಾರೆ !

ಸೀಮಿತ ನಿಲುಗಡೆ: 216 ಟ್ರಿಪ್‌ಗ್ಳು
ಪುತ್ತೂರು-ಮಂಗಳೂರು(ಸ್ಟೇಟ್‌ಬ್ಯಾಂಕ್‌) ಮಧ್ಯೆ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಿಂದ ಒಟ್ಟು 33 ಸೀಮಿತ ನಿಲುಗಡೆ ಬಸ್‌ಗಳು ಹಾಗೂ 8 ಸಾಮಾನ್ಯ ಬಸ್‌ಗಳು ಸಂಚರಿಸುತ್ತಿವೆ. ಅಂದರೆ, ತಲಾ 108 ಟ್ರಿಪ್‌ಗ್ಳು ಪುತ್ತೂರಿನಿಂದ ಸ್ಟೇಟ್‌ಬ್ಯಾಂಕ್‌ಗೆ ಹಾಗೂ ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ಕಾರ್ಯಾಚರಿಸುತ್ತಿವೆ. ಅಂದರೆ ಒಟ್ಟು 216 ಟ್ರಿಪ್‌ಗ್ಳು ಈ ಮಾರ್ಗಮಧ್ಯೆ ಓಡುತ್ತಿದ್ದು, ಇವುಗಳಲ್ಲಿ ಕೆಲವೊಂದು ಬಸ್‌ಗಳು ಮಾತ್ರ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಚಲಿಸುತ್ತಿವೆ. ಪುತ್ತೂರು-ಮಂಗಳೂರು ಮಧ್ಯೆ ಪುತ್ತೂರು ವಿಭಾಗದಿಂದ ಮಾತ್ರ ಬಸ್‌ಗಳು ಓಡಾಡುತ್ತಿದ್ದರೆ, ಮಂಗಳೂರು ಧರ್ಮಸ್ಥಳ ಮಧ್ಯೆ ಬಹುತೇಕ ಬಸ್‌ಗಳು ಮಂಗಳೂರು ವಿಭಾಗದ ಬಸ್‌ಗಳೇ ಆಗಿವೆ. 

Advertisement

ಸುಳ್ಯ-ಸ್ಟೇಟ್‌ಬ್ಯಾಂಕ್‌ ಎಕ್ಸ್‌ಪ್ರೆಸ್‌
ಕಳೆದ ಒಂದು ತಿಂಗಳ ಹಿಂದೆ ಸುಳ್ಯ-ಸ್ಟೇಟ್‌ಬ್ಯಾಂಕ್‌ ಮಧ್ಯೆ ಹೊಸದಾಗಿ ಎಕ್ಸ್‌ಪ್ರೆಸ್‌ ಬಸ್‌ ಸಂಚಾರ ಆರಂಭಗೊಂಡಿದೆ. ಪ್ರಸ್ತುತ ನಾಲ್ಕು ಬಸ್‌ಗಳು ಓಡಾಡುತ್ತಿದ್ದು, ಪ್ರತಿ ಬಸ್‌ಗಳು ಎರಡು ಟ್ರಿಪ್‌ನಂತೆ ದಿನಕ್ಕೆ ತಲಾ ಎಂಟು ಟ್ರಿಪ್‌ನಂತೆ  ಒಟ್ಟು 16 ಟ್ರಿಪ್‌ಗ್ಳು ಓಡಾಡುತ್ತವೆ. ಈ ಬಸ್‌ ಸಮಯಕ್ಕೆ ಸರಿಯಾಗಿ ಓಡುವುದಿಲ್ಲ ಎಂದು ಪ್ರಯಾಣಿಕರು ಆರೋಪಿಸಿದರೆ, ಅದರ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ ಎನ್ನುವುದು  ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಾದ. 
ಪ್ರಸ್ತುತ ನಿಗದಿ ಪಡಿಸಿರುವ ಅದರ ಸಂಚಾರದ ವೇಳಾಪಟ್ಟಿ ಹೀಗಿದೆ. ಸ್ಟೇಟ್‌ಬ್ಯಾಂಕಿನಿಂದ ಬೆಳಗ್ಗೆ 8.30, 9.00, 10.00, 10.45, ಮಧ್ಯಾಹ್ನ 2.00, ಸಂಜೆ 4.45, 5.45, 6.30, ಸುಳ್ಯದಿಂದ ಬೆಳಗ್ಗೆ 5.45, 6.15, 6.50, 8.00, 11.00, ಮಧ್ಯಾಹ್ನ 2.00, 3.00, 3.30ಕ್ಕೆ ಹೊರಡುತ್ತಿದೆ. 

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next