ಪುತ್ತೂರು: ಸೀಮೆಯ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯು ಗುರುವಾರ ಬೆಳಗ್ಗೆ ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು.
ಬುಧವಾರ ಸಂಜೆ 5ಕ್ಕೆ ದೇವಾಲಯದಿಂದ ತೆರಳಿದ ಶ್ರೀ ದೇವರ ಅವಭೃಥ ಸವಾರಿ ಬುಧವಾರ ಬೆಳಗ್ಗೆ 13 ಕಿ.ಮೀ. ದೂರದ ವೀರಮಂಗಲ ಕುಮಾರಧಾರ ನದಿಗೆ ತಲುಪಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವಭೃಥ ಮುಗಿಸಿ ಗುರುವಾರ ಬೆಳಗ್ಗೆ 11 ಗಂಟೆಗೆ ದೇವಾಲಯಕ್ಕೆ ಮರಳಿತು.
ದಾರಿಯುದ್ದಕ್ಕೂ 50ಕ್ಕೂ ಹೆಚ್ಚು ಕಟ್ಟೆಪೂಜೆಗಳು, ಸುಮಾರು 8,000 ಕ್ಕೂ ಹೆಚ್ಚು ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ದೇವರ ಸವಾರಿ ವೀರಮಂಗಲಕ್ಕೆ ತೆರಳಿತು. ಮಂಗಳವಾರ ಬೆಳಗ್ಗೆ ದೇವರ ಮೂಲ ಉತ್ಸವ ಮೂರ್ತಿಯೊಂದಿಗೆ ಸವಾರಿಯು ದೇವಾಲಯದ ಒಳಾಂಗಣ ಪ್ರವೇಶಿಸಿತು. ಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು.
ಬಳಿಕ ಭಕ್ತರು ದೇವರ ಧರ್ಮನಡೆಯಲ್ಲಿ ನಿಂತು ಪ್ರಾರ್ಥಿಸಿ, ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಧ್ವಜಾವರೋಹಣ ಮುಗಿದ ಬೆನ್ನಲ್ಲೇ ದೇವಾಲಯದಲ್ಲಿ ಅನ್ನಸಂತರ್ಪಣೆ ಆರಂಭವಾಯಿತು.
ದೇವರ ಸ್ನಾನ
ಗುರುವಾರ ಬೆಳಗ್ಗೆ ವೀರಮಂಗಲ ಕುಮಾರಧಾರ ನದಿಯಲ್ಲಿ ಶ್ರೀ ದೇವರ ಅವಭೃತ ಸ್ನಾನ ವಿವಿಧ ವಿಧಿ ವಿಧಾನಗಳೊಂದಿಗೆ ನಡೆಯಿತು. ತುಪ್ಪ, ಜೇನು, ಸೀಯಾಳ ಸೇರಿದಂತೆ ಪಂಚ ದ್ರವ್ಯಗಳಿಂದ ಶ್ರೀ ದೇವರ ಅವಭೃಥ ಸ್ನಾನ ನಡೆಯಿತು.