ಪುತ್ತೂರು: ಲಕ್ಕಿ ಡ್ರಾ ನಂಬಿ ಕೊಡಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಬಟ್ರಾಪ್ಪಾಡಿಯ ಮಹಿಳೆಯೊಬ್ಬರು ವಂಚನೆಗೊಳಗಾಗಿದ್ದು, 5.34 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಬಟ್ರಾಪ್ಪಾಡಿ ನಿವಾಸಿ ಬ್ಯೂಟಿಷಿಯನ್ ಮಹಿಳೆಗೆ ಜೂ. 3ರಂದು ಅಂಚೆ ಮೂಲಕ ಕವರ್ ಬಂದಿದ್ದು, ಅದನ್ನು ತೆರೆದು ನೋಡಿದಾಗ ಒಂದು ಕೂಪನ್ ಮತ್ತು ಒಂದು ಫಾರ್ಮ್ ಇತ್ತು. ಅದರಲ್ಲಿ ಕೂಪನ್ ಸ್ಕ್ರ್ಯಾಚ್ ಮಾಡುವಂತೆ ಸೂಚಿಸಲಾಗಿತ್ತು.
ಸ್ಕ್ರ್ಯಾಚ್ ಮಾಡಿದಾಗ ಅದರಲ್ಲಿ ಪ್ರಥಮ ಬಹುಮಾನ ಬಂದಿದೆ ಎಂದು ನಮೂದು ಮಾಡಲಾಗಿತ್ತು. ಕೂಪನ್ ಬದಿಯಲ್ಲಿ ಎರಡು ಮೊಬೈಲ್ ಸಂಖ್ಯೆಗಳನ್ನು ಬರೆದಿದ್ದು, ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ನಿಮಗೆ ಪ್ರಥಮ ಬಹುಮಾನ 11,00,000 ರೂ. ಬಂದಿದೆ. ಆ ಬಹುಮಾನದ ಹಣ ಸಿಗಬೇಕಾದರೆ, 11 ಸಾವಿರ ರೂ. ತೆರಿಗೆ ಕಟ್ಟಬೇಕು ಎಂದು ತಿಳಿಸಿದಂತೆ ಮಹಿಳೆ ಅವರ ಬ್ಯಾಂಕ್ ಖಾತೆಗೆ 11 ಸಾವಿರ ರೂ. ಅನ್ನು ಮೊಬೈಲ್ ಮೂಲಕ ವರ್ಗಾವಣೆ ಮಾಡಿದ್ದರು.
ಮರುದಿನ ಅದೇ ಮೊಬೈಲ್ ನಂಬರ್‌ನಿಂದ ಮಹಿಳೆಗೆ ಫೋನ್ ಕರೆ ಮಾಡಿ ಪುನಃ 48,000 ರೂ. ಅನ್ನು ಅದೇ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದಂತೆ ಮಹಿಳೆ ಅದನ್ನೂ ಮೊಬೈಲ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಆ ಸಮಯ ಬಹುಮಾನದ ಹಣ ಬೇಗನೆ ನಿಮಗೆ ಸಿಗುತ್ತದೆ ಎಂದು ಹೇಳಿದ್ದರು. ಇದಾದ ಎರಡು ದಿನಗಳ ಬಳಿಕ ಅದೇ ಮೊಬೈಲ್ ನಂಬರ್‌ನಿಂದ ಮಹಿಳೆಗೆ ಮತ್ತೂಮ್ಮೆ ಕರೆ ಮಾಡಿ 52,000 ರೂ. ಜಿಎಸ್‌ಟಿ ಮತ್ತು ಸಿಜಿಎಸ್‌ಟಿ ಹಣವೆಂದು 51,000 ರೂ. ಹಣವನ್ನು ನೀಡುವಂತೆ ತಿಳಿಸಿದ್ದರು. ಮಹಿಳೆ ಮತ್ತೆ ಅವರು ನೀಡಿದ ಖಾತೆಗೆ ಮೊಬೈಲ್‌ನಲ್ಲಿಯೇ ಈ ಹಣವನ್ನೂ ಪಾವತಿಸಿದ್ದರು.
ಎರಡು ದಿನ ಕಳೆದು ಮಹಿಳೆ ಹಾಗೂ ಮಹಿಳೆಯ ತಾಯಿಯ ಮೊಬೈಲ್‌ನಿಂದ 1,52,000 ರೂ. ಅನ್ನು ಅದೇ ಖಾತೆಗೆ ವರ್ಗಾವಣೆ ಮಾಡಿದ್ದರು. ಅತ್ತ ಕಡೆಯಿಂದ ಮತ್ತೆ ಕರೆ ಮಾಡಿ ನಿಮ್ಮ ಖಾತೆ ವಿದ್ಯಾರ್ಥಿ ಖಾತೆಯಾಗಿದ್ದು, ಇದಕ್ಕೆ ಹಣ ಕಳುಹಿಸಬೇಕಾದಲ್ಲಿ ಖಾತೆಯಲ್ಲಿ 4,00,000 ರೂ. ಇರಬೇಕೆಂದು ತಿಳಿಸಿದ್ದರು. ಅವರು ಅರ್ಧ ಹಣವನ್ನು ಕಂಪೆನಿಯ ವತಿಯಿಂದ ಡೆಪಾಸಿಟ್ ಮಾಡುತ್ತೇವೆ. ಉಳಿದ 2,20,000 ರೂ. ಅನ್ನು ಪಾವತಿಸುವಂತೆ ತಿಳಿಸಿದ್ದರು. ಹಣ ಕಳುಹಿಸಲು ನಿರಾಕರಿಸಿದಾಗ ಈ ಹಣ ಮಾತ್ರ ಕಟ್ಟಿದರೆ ಸಾಕು ಎಲ್ಲ ಷರತ್ತುಗಳು ಪೂರ್ತಿಯಾಗುತ್ತದೆ ಎಂದು ನಂಬಿಸಿದ ಪ್ರಕಾರ ಮಹಿಳೆ ಮತ್ತೆ 1,99,000 ರೂ. ಅನ್ನು ಅವರ ಖಾತೆಗೆ ವರ್ಗಾವಣೆ ಮಾಡಿದ್ದಾರೆ.
ಉಳಿದ ಹಣ 21,000 ರೂ. ಅನ್ನು ಬಳಿಕ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಕೂಡಲೇ ಅವರು ಮೂವತ್ತು ನಿಮಿಷದಲ್ಲಿ ಬಹುಮಾನದ ಹಣ ಖಾತೆಗೆ ಜಮೆ ಆಗುತ್ತದೆ ಎಂದು ತಿಳಿಸಿದ್ದರು. ಆ ಬಳಿಕ ಪದೇ ಪದೇ ಕರೆ ಮಾಡಿದರೂ ಬೇರೆ ಬೇರೆ ಕಾರಣ ನೀಡಿ ವಂಚಿಸಿದ್ದಾರೆ. ಮಹಿಳೆ ಆರೋಪಿಗಳ ಬೇರೆ ಬೇರೆ ಬ್ಯಾಂಕ್ ಖಾತೆಗೆ ಒಟ್ಟು 5,34,000 ರೂ. ಹಣವನ್ನು ಫೋನ್ ಪೇ ಮೂಲಕ ಪಾವತಿಸಿದ್ದಾರೆ. ಈ ಕುರಿತು ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.