Advertisement

ಪುತ್ತೂರು: ಎಲ್ಲ ದೇವಾಲಯಗಳಲ್ಲಿ ಭಕ್ತ ಸಾಗರ 

11:18 AM Jul 29, 2018 | |

ಪುತ್ತೂರು: ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ಸಂಜೆಯಿಂದ ವಿಶೇಷ ಶಾಂತಿ ಹೋಮಗಳು ನಡೆದವು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಶನಿವಾರವೂ ದೇವಾಲಯಗಳಿಗೆ ಆಗಮಿಸಿ, ದೋಷ ನಿವಾರಣೆಗೆ ಪ್ರಾರ್ಥನೆ ಸಲ್ಲಿಸುವ ದೃಶ್ಯಗಳು ಕಂಡುಬಂದವು.

Advertisement

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶುಕ್ರವಾರ ಸಂಜೆ ಯಿಂದ ಗ್ರಹಣ ಶಾಂತಿ ಹೋಮ ನಡೆಯಿತು. ಗ್ರಹಣದಿಂದ ದೋಷವಿದ್ದ ನಕ್ಷತ್ರ, ರಾಶಿಯವರು ಹೆಚ್ಚಿನ ಸಂಖ್ಯೆಯಲ್ಲಿ ಹೋಮದಲ್ಲಿ ಪಾಲ್ಗೊಂಡರು. ಶನಿವಾರ ಬೆಳಗ್ಗಿನಿಂದ ಸಾವಿರಾರು ಮಂದಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವರಿಗೆ ದೀಪದ ಎಣ್ಣೆ, ಇತರ ಸೇವೆಗಳನ್ನು ಸಮರ್ಪಿಸಿದರು. 

ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಶ್ರೀ ಪಂಚಲಿಂಗೇಶ್ವರ, ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನ ಮುಂತಾದ ಕಡೆಗಳಲ್ಲಿ ರಾತ್ರಿ ವಿಶೇಷ ಗ್ರಹಣ ಶಾಂತಿ ಹೋಮಗಳು ನಡೆದವು. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತಾಲೂ ಕಿನ ಹಲವು ಮಸೀದಿಗಳಲ್ಲಿ ವಿಶೇಷ ನಮಾಜು ಮತ್ತು ಪ್ರಾರ್ಥನೆ ನಡೆಯಿತು. ಮಧ್ಯರಾತ್ರಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕುಕ್ಕೆ: ಗ್ರಹಣದ ಬಳಿಕ ದೇಗುಲದಲ್ಲಿ ಭಕ್ತರ ದಂಡು
ಸುಬ್ರಹ್ಮಣ್ಯ : ಶುಕ್ರವಾರ ರಾತ್ರಿ ಸಂಭವಿಸಿದ ಖಗ್ರಾಸ ಚಂದ್ರಗ್ರಹಣದ ಪ್ರಯುಕ್ತ ಶನಿವಾರ ಅಪಾರ ಪ್ರಮಾಣದ ಭಕ್ತರು ದೇಗುಲಗಳಿಗೆ ಆಗಮಿಸಿ, ಶಾಂತಿ ಹೋಮ ಸಹಿತ ದೇವರ ದರ್ಶನ, ವಿವಿಧ ಸೇವೆ, ಪೂಜೆಗಳನ್ನು ನೆರವೇರಿಸಿಕೊಂಡರು.

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಬೆಳಗ್ಗೆ ಶುದ್ಧಿ ಕಾರ್ಯ ನೆರವೇರಿದ ಬಳಿಕ ದೇಗುಲದಲ್ಲಿ ನಿತ್ಯ ನಡೆಯುವ ಸೇವೆಗಳು ನಡೆದವು. ಗ್ರಹಣ ಸಂಭವಿಸಿದ ಶನಿವಾರ ದೇಗುಲದಲ್ಲಿ ಭಕ್ತರ ಸಂಖ್ಯೆ ಕ್ಷೀಣವಾಗಿತ್ತು.

Advertisement

ಶನಿಪೂಜೆಗೆ ಪ್ರಸಿದ್ಧಿ ಪಡೆದ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇಗುಲದಲ್ಲಿ ಖಗ್ರಾಸ ಚಂದ್ರಗ್ರಹಣದ ಪ್ರಯುಕ್ತ ಶನಿವಾರ ಬೆಳಗ್ಗೆ 9ರಿಂದ ಗ್ರಹಣ ಶಾಂತಿ ಹೋಮ ನಡೆಯಿತು. ಗ್ರಹಣ ಶಾಂತಿ ಹೋಮದಲ್ಲಿ ಭಕ್ತರು ಭಾಗವಹಿಸಿ ಜಪ-ತಪಗಳಲ್ಲಿ ಪಾಲ್ಗೊಂಡರು. ದೇವರಿಗೆ ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ಎಳ್ಳೆಣ್ಣೆ ಸಮರ್ಪಿಸಿ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ ಸಹಿತ ವ್ಯವಸ್ಥಾಪನ ಸಮಿತಿ ಸದಸ್ಯರು, ಸಹಸ್ರಾರು ಭಕ್ತರು ನೆರೆದಿದ್ದರು. ಸುಬ್ರಹ್ಮಣ್ಯ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇಗುಲದಲ್ಲಿ ಗ್ರಹ ಶಾಂತಿ ಹೋಮ ಸೇವಾ ಸಂಕಲ್ಪ, ಪೂರ್ಣಾಹುತಿ ನಡೆಯಿತು. ಗ್ರಹಣ ಶಾಂತಿ ಹೋಮ ವೇಳೆ ಭಕ್ತರು ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ಹುರುಳಿ ಅರ್ಪಿಸಿದರು. ಭಕ್ತರು ಅಗ್ರಹಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕೊಲ್ಲಮೊಗ್ರು ಕಟ್ಟ ಮಯೂರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ತೆರಳಿ, ದೇವರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next