Advertisement

ಪುತ್ತೂರು: ರಾಜ ಕಾಲುವೆ ಗಬ್ಬೆದ್ದರೂ ತ್ಯಾಜ್ಯಮುಕ್ತ ನಗರ ರ್‍ಯಾಂಕಿಂಗ್‌ ಕನಸು !

09:42 AM Apr 05, 2022 | Team Udayavani |

ಪುತ್ತೂರು : ಸಾವಿರಾರು ಕಟ್ಟಡ, ಮನೆಗಳಿಂದ ಹರಿದು ಬರುವ ತ್ಯಾಜ್ಯ ನೀರು ನಗರದ ರಾಜ ಕಾಲುವೆಗಳಲ್ಲಿ ಮಡುಗಟ್ಟಿ ನಿಂತಿದ್ದರೂ ಪುತ್ತೂರು ನಗರಾಡಳಿತ ಮಾತ್ರ ರಾಷ್ಟ್ರಮಟ್ಟದಲ್ಲಿ ತ್ಯಾಜ್ಯ ಮುಕ್ತ ನಗರ ಘೋಷಣೆಯಡಿಯ ಸ್ಪರ್ಧೆಯಲ್ಲಿ ತ್ರಿಸ್ಟಾರ್‌ ರ್‍ಯಾಂಕಿಂಗ್‌ ಪಡೆಯುವ ಕನಸು ಕಾಣುತ್ತಿದೆ.

Advertisement

ಒಳಚರಂಡಿ ವ್ಯವಸ್ಥೆ ಇಲ್ಲದ ನಗರದಲ್ಲಿ ದಿನಂಪ್ರತಿ ಉತ್ಪತ್ತಿಯಾಗುವ ತ್ಯಾಜ್ಯ ಮಳೆಗಾಲದಲ್ಲಿ ರಾಜ ಕಾಲುವೆ, ವಾರ್ಡ್‌ಗಳಲ್ಲಿನ ಚರಂಡಿಯಲ್ಲಿ ಹಾದು ಕುಮಾರಾಧಾರಾ ನದಿಗೆ ಸೇರಿದರೆ, ಬೇಸಗೆ ಕಾಲದಲ್ಲಿ ಚರಂಡಿಯಲ್ಲೇ ಸಂಗ್ರಹವಾಗಿ ರೋಗ ಹರಡುವ ತಾಣವಾಗಿ ಮಾರ್ಪಾಡಾಗಿದ್ದು ಅದರ ತೆರೆವಿಗೆ ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ಯೋಜನೆ ಜಾರಿಗೊಳ್ಳಬೇಕಿದೆ.

ರಾಜಕಾಲುವೆಯ ಸ್ಥಿತಿ

ಉರ್ಲಾಂಡಿಯಿಂದ ಎಪಿಎಂಸಿ ಮೂಲಕ ಏಳ್ಮುಡಿ, ತೆಂಕಿಲದಿಂದ ಏಳ್ಮುಡಿ ಸಂಪರ್ಕ ಕಲ್ಪಿಸುವ ಎರಡು ರಾಜಕಾಲುವೆಗಳಿವೆ. ಇವೆರಡು ಸುಮಾರು ಐದು ಕಿ.ಮೀ.ಗೂ ಜಾಸ್ತಿ ಉದ್ದವಿದೆ. ಇಲ್ಲಿಂದ ಉತ್ಪತ್ತಿಯಾಗುವ ತ್ಯಾಜ್ಯ, ಮಲಿನ ನೀರು ಹರಿದು ಹೋಗಲು ಪ್ರತ್ಯೇಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿಯುವ ತೆರೆದ ಚರಂಡಿಯಲ್ಲೇ ತ್ಯಾಜ್ಯ ನೀರು ಸಾಗುತ್ತಿದೆ. ಹಾಗಾಗಿ ಮಳೆಗಾಲ, ಬೇಸಗೆ ಕಾಲದಲ್ಲಿ ತೆರೆದ ಚರಂಡಿ, ರಾಜಕಾಲುವೆಯ ದುರ್ಗಂಧ ನಗರದ ಜನರಿಗೆ ನಿತ್ಯದ ಗೋಳಾಗಿದೆ.

ಈಗಿನ ಲೆಕ್ಕಚಾರದ ಪ್ರಕಾರ ಜನಸಂಖ್ಯೆ 60 ಸಾವಿರ ದಾಟಿರುವ ನಗರದಲ್ಲಿ ನೂರಾರು ವಾಣಿಜ್ಯ ಕಟ್ಟಡ, ಆಸ್ಪತ್ರೆ, ಕೈಗಾರಿಕೆ, ಹೊಟೇಲ್‌, ಶಿಕ್ಷಣ ಸಂಸ್ಥೆ ಹತ್ತಾರು ಬಗೆಯ ವ್ಯವಹಾರಗಳಿವೆ. ಈ ಎಲ್ಲ ವಾಣಿಜ್ಯ-ವ್ಯವಹಾರ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಮಲಿನ ನೀರು ಹರಿಯಲು ರಾಜಕಾಲುವೆಯೇ ಏಕೈಕ ದಾರಿ. ಮನೆ, ಕಟ್ಟಡಗಳಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ನಗರ ಆಡಳಿತ ಸೂಚನೆ ನೀಡಿದ್ದರೂ ಅದಿನ್ನು ಪಾಲನೆ ಆಗಿಲ್ಲ. ಹಾಗಾಗಿ ತೆರದ ಚರಂಡಿಗೆ ತ್ಯಾಜ್ಯ ನೀರು ಹರಿಯುತ್ತಿದೆ. ಪ್ರತೀ ವರ್ಷ ಚರಂಡಿ ನಿರ್ವಹಣೆಗೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದ್ದು ಈ ಬಾರಿ 40 ಲಕ್ಷ ರೂ.ಮೀಸಲಿರಿಸಲಾಗಿದೆ.

Advertisement

ತ್ರಿಸ್ಟಾರ್‌ ಪಟ್ಟಕ್ಕೆ ಯತ್ನ

ಕೇಂದ್ರ ಸರಕಾರದ ವಸತಿ ಮತ್ತು ನಗರಾಡಳಿತ ಸಚಿವಾಲಯ ರಾಷ್ಟ್ರಮಟ್ಟ ದಲ್ಲಿ ಗಾರ್ಬೆಜ್‌ ಫ್ರೀ ಸಿಟಿ (ತ್ಯಾಜ್ಯ ಮುಕ್ತ ನಗರ) ಘೋಷಣೆಗಾಗಿ ಅಭಿಯಾನ ನಡೆಸುತ್ತಿದೆ. ಇದರಡಿ ನಾನಾ ಮಟ್ಟದ ಸ್ವತ್ಛ ಸರ್ವೇಕ್ಷಣೆ ಎಂಬ ಪ್ರತ್ಯೇಕ ವ್ಯವಸ್ಥೆಯಿದೆ. ಇದರಲ್ಲಿ ನಗರಾಡಳಿತಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ಪುತ್ತೂರು ನಗರಸಭೆ ತ್ರಿ ಸ್ಟಾರ್‌ ರ್‍ಯಾಂಕಿಂಗ್‌ ಪಡೆಯಲು ಯತ್ನಿಸುತ್ತಿದೆ. ಸ್ಟಾರ್‌ಗಳನ್ನು ಅವುಗಳ ತ್ಯಾಜ್ಯ ನಿರ್ವಹಣ ಸಾಧನೆಯ ಆಧಾರದಲ್ಲಿ ನೀಡಲಾಗುತ್ತದೆ.

ಘನ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಸಂಪೂರ್ಣ ಮರುಬಳಕೆ, ಹಳೆ ತ್ಯಾಜ್ಯಗಳ ಸಂಪೂರ್ಣ ತೆರವು, ತ್ಯಾಜ್ಯ ನೀರು ಶುದ್ಧೀಕರಣ, ತ್ಯಾಜ್ಯ ನೀರಿನ ಗರಿಷ್ಠ ಶೇ.50 ಮರು ಬಳಕೆ ಇತ್ಯಾದಿ ಸಾಧನೆ ಆಧರಿಸಿ ಸ್ಟಾರ್‌ ನೀಡಲಾಗುತ್ತದೆ.

ಸಂಸ್ಕರಣ ಘಟಕ ಸ್ಥಾಪಿಸಲು ಆದೇಶವಿದ್ದರೂ ಪಾಲನೆ ಇಲ್ಲ

ಸವ್ರೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕಲುಷಿತ ನೀರಿಗೆ ಪ್ರಾಥಮಿಕ ಸಂಸ್ಕರಣ ಘಟಕಗಳನ್ನು ಅಳವಡಿಸಿ ಚಾಲನಾ ಸ್ಥಿತಿಯಲ್ಲಿ ಇಟ್ಟು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸಮ್ಮತಿ ಪತ್ರವನ್ನು ಪಡೆಯುವುದು ಅವಶ್ಯಕವಾಗಿರುತ್ತದೆ ಎಂದು 2017 ರಲ್ಲಿ ತಿಳಿಸಲಾಗಿತ್ತು. ಸವ್ರೋಚ್ಚ ನ್ಯಾಯಾಲಯದ ಆದೇಶದ ದಿನದಿಂದ 3 ವರ್ಷದೊಳಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಚಾಲನಾ ತಮ್ಮ ಪತ್ರವನ್ನು ಪಡೆಯಬೇಕಾಗಿರುವ ಎಲ್ಲ ಕಾರ್ಖಾನೆ/ಸಂಸ್ಥೆ/ ಘಟಕಗಳು ಕಲುಷಿತ ನೀರಿಗೆ ಪ್ರಾಥಮಿಕ ಸಂಸ್ಕರಣ ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿ ಸಂಪೂರ್ಣ ಚಾಲನ ಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಲು ನಿರ್ದೇಶಿಸಲಾಗಿತ್ತು. ಚಾಲನ ಸಮ್ಮತಿ ಪತ್ರ ಪಡೆದು ಕಲುಷಿತ ನೀರಿಗೆ ಪ್ರಾಥಮಿಕ ಸಂಸ್ಕರಣ ಘಟಕಗಳನ್ನು ಅಳವಡಿಸದೆ ಇರುವ ಅಥವಾ ಚಾಲನಾ ಸಮ್ಮತಿ ಪತ್ರ ಪಡೆಯಬೇಕಾಗಿರುವ ಕಾರ್ಖಾನೆ/ಸಂಸ್ಥೆ/ಘಟಕಗಳ ವಿರುದ್ಧ ವಿದ್ಯುತ್‌ ಸಂಪರ್ಕ ಕಡಿತ ಸೇರಿದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದರೂ ಅನುಷ್ಠಾನ ಕಾರ್ಯ ಪಾಲನೆ ಆಗಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಿ.ಕೆ.ಭಟ್‌.

-ಕಿರಣ್ ಪ್ರಸಾದ್ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next