Advertisement

ಭತ್ತದ ಸುಗ್ಗಿ: ದತ್ತು ಗ್ರಾಮದಲ್ಲಿ ಕೃಷಿ ಕಲರವ

01:17 PM Nov 25, 2018 | |

ನೆಹರೂನಗರ: ಕೃಷಿಯನ್ನು ಮರೆತು ಕಂಪ್ಯೂಟರ್‌ನಲ್ಲಿ ಕಳೆದು ಹೋಗಿರುವ ಯುವಜನತೆಗೆ ಕೃಷಿಯ ಪ್ರಾಯೋಗಿಕ ಅನುಭವದ ಆವಶ್ಯಕತೆಯಿದೆ. ಕೃಷಿಯನ್ನು ಮರೆಯದೆ ಪ್ರವೃತ್ತಿಯಾಗಿ ಮುಂದುವರೆಸಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್‌ ಪೈ ಅವರು ಹೇಳಿದರು.

Advertisement

ಅವರು ವಿವೇಕಾನಂದ ಮಹಾವಿದ್ಯಾಲಯದ ಗ್ರಾಮ ವಿಕಾಸ ಸಮಿತಿ, ಪುತ್ತೂರು ಸಿಟಿ ರೋಟರಿ ಕ್ಲಬ್‌, ಕಾಲೇಜಿನ ಐಕ್ಯೂಎಸಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ಕಾಲೇಜು ದತ್ತು ಸ್ವೀಕರಿಸಿರುವ ಕೊಡಿಪಾಡಿ ಗ್ರಾಮದಲ್ಲಿ ಆಯೋಜಿಸಿದ ಭತ್ತದ ಸುಗ್ಗಿ ಹಬ್ಬ ಹಾಗೂ ಜಲಕೊಯ್ಲು ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರದ ಸೋಗಿಗೆ ಜೋತುಬಿದ್ದು ಹಳ್ಳಿಗಳನ್ನು ಮರೆಯುತ್ತಿದ್ದೇವೆ. ಕೃಷಿಯಿಂದ ದೂರವಾಗುತ್ತಿದ್ದೇವೆ. ಪದವಿ ಪಡೆದ ಮಾತ್ರಕ್ಕೆ ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸುವುದು ಅವಮಾನವೆಂದು ಭಾವಿಸುತ್ತಾರೆ. ವಿದ್ಯಾಭ್ಯಾಸದ ಅನಂತರ ನಮ್ಮ ಆಯ್ಕೆಯ ಕ್ಷೇತ್ರ ಯಾವುದೇ ಆಗಿದ್ದರೂ ಕೃಷಿ ಅದರ ಒಂದು ಭಾಗವಾಗಬೇಕು. ತಂತ್ರಜ್ಞಾನ ಮುಂದುವರೆದಿದ್ದರೂ ನಮಗೆ ಕೃಷಿ ಹೊರೆಯಾಗದು ಎಂದರು.

ಅಭಿನಂದನೆ
ಭತ್ತದ ಕೃಷಿಗಾಗಿ ಗದ್ದೆಯನ್ನು ನೀಡಿ ಸಹಕರಿಸಿದ ನಾರಾಯಣ ಮಯ್ಯ ಹಾಗೂ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಪಾಠವನ್ನು ನೀಡಿದ ಹಾಗೂ ಭತ್ತದ ಪೈರನ್ನು ಬೆಳೆಸಿದ ಮಹೇಶ್‌ ಅವರನ್ನು ಅಭಿನಂದಿಸಲಾಯಿತು. ವಿವೇಕಾನಂದ ಕಾಲೇಜು ಪುತ್ತೂರು ಸಿಟಿ ರೋಟರಿ ಕ್ಲಬ್‌ ಸಹಕಾರದೊಂದಿಗೆ ನಿರ್ಮಿಸಿದ ಜಲಕೊಯ್ಲು ಯೋಜನೆಯನ್ನು ಹಾಲೆರೆಯುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಬೆಳೆದ ಪೈರನ್ನು ಕೊಯ್ಲು ಮಾಡಲಾಯಿತು.

ಕೊಡಿಪಾಡಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜನಾರ್ದನ ಎರ್ಕಾಡಿತ್ತಾಯ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ್‌ ಭಟ್‌, ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್‌, ಗ್ರಾಮವಿಕಾಸ ಸಮಿತಿಯ ಆಡಳಿತ ಮಂಡಳಿ ಸದಸ್ಯ ಅನಂತ ಕೃಷ್ಣ ನಾಯಕ್‌, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್‌ ಕೆ. ಮುದೂರ್‌, ಪುತ್ತೂರು ಸಿಟಿ ರೋಟರಿ ಕ್ಲಬ್‌ ಸಮುದಾಯ ಸೇವೆಯ ಅಧಿಕಾರಿ ಹರಿಣಿ ಸತೀಶ್‌, ಕಾಲೇಜಿನ ಗ್ರಾಮ ವಿಕಾಸ ಸಮಿತಿ ಸಂಯೋಜಕ ಡಾ| ಶ್ರೀಶ ಕುಮಾರ್‌ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಸ್ವಾಗತಿಸಿ, ಗ್ರಾಮ ವಿಕಾಸ ಯೋಜನೆ ಕಾರ್ಯದರ್ಶಿ ಮನ್ಮಥ ಶೆಟ್ಟಿ ವಂದಿಸಿದರು. ಎನ್‌ಸಿಸಿ ಘಟಕದ ಸಂಯೋಜಕ ಡಾ| ರೋಹಿಣಾಕ್ಷ ಶಿರ್ಲಾಲು ನಿರ್ವಹಿಸಿದರು.

Advertisement

ಅಭಿನಂದನಾರ್ಹ
ಅಧ್ಯಕ್ಷತೆ ವಹಿಸಿದ ಕೊಡಿಪಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಸುಕುಮಾರ್‌ ಮಾತನಾಡಿ, ಕೃಷಿ ಜೀವನವನ್ನು ನಿಕೃಷ್ಟ ವಾಗಿ ಕಾಣುತ್ತಿರುವ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಕೃಷಿಯನ್ನು ಮಾಡುತ್ತಿರುವುದು ಅಭಿನಂದನಾರ್ಹ. ಆಗಸ್ಟ್‌ ತಿಂಗಳಿನಲ್ಲಿ ಈ ಮಕ್ಕಳು ಮಾಡಿದ ನಾಟಿ ಇಂದು ಕೊಯ್ಲಿಗೆ ಬಂದಿದೆ. ಶ್ರಮವಹಿಸಿ ಒಂದು ಕೆಲಸದಲ್ಲಿ ತೊಡಗಿಕೊಂಡರೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುವುದಕ್ಕೆ ನಿದರ್ಶನ ಇದು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next