Advertisement

Puttur: 64 ಲಕ್ಷ ರೂ.ಅನುದಾನ; ದರ್ಬೆ-ಮರೀಲು ರಸ್ತೆ- ಬೀದಿ ದೀಪ

06:16 PM Oct 06, 2023 | Team Udayavani |

ಪುತ್ತೂರು: ಕಾಣಿಯೂರು- ಮಂಜೇಶ್ವರ ಅಂತಾರಾಜ್ಯ ಸಂಪರ್ಕ ರಸ್ತೆ ಹಾದು ಹೋಗಿರುವ ಪುತ್ತೂರು ನಗರದ ದರ್ಬೆಯಿಂದ ಮರೀಲು ತನಕದ ಚತುಷ್ಪಥ ರಸ್ತೆಯಲ್ಲಿ ಮುಂಬರುವ ದಿನಗಳಲ್ಲಿ ರಾತ್ರಿ ಹೊತ್ತು ಬೀದಿ ದೀಪದ ಬೆಳಕು ಹರಿಯಲಿದೆ.

Advertisement

ರಸ್ತೆಯ ಡಿವೈಡರ್‌ ಮಧ್ಯೆ ಭಾಗದಲ್ಲಿ ಕಂಬ ಅಳವಡಿಸಿ ವಿದ್ಯುತ್‌ ದೀಪ ಜೋಡಿಸುವ ನಿಟ್ಟಿನಲ್ಲಿ ನೆಲ ಹಂತದ ಕಾಮಗಾರಿ ನಡೆಯುತ್ತಿದ್ದು ಕೆಲವು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಏನಿದು ಯೋಜನೆ?
ದರ್ಬೆಯಿಂದ ಲಿಟ್ಲ ಫ್ಲ ವರ್‌ ಶಾಲೆಯ ತನಕ ಬೀದಿ ದೀಪದ ಬೆಳಕಿನ ವ್ಯವಸ್ಥೆ ಹಿಂದೆಯೇ ಆಗಿತ್ತು. ಅಲ್ಲಿಂದ ಮುಂದಕ್ಕೆ ಮರೀಲು ತನಕ ಅಳವಡಿಕೆ ಬಾಕಿ ಇತ್ತು. ಕ್ಯಾಂಪ್ಕೋ, ಕೂರ್ನಡ್ಕ ಮಸೀದಿ, ಕೆಮ್ಮಿಂಜೆ, ಮರೀಲು ದೇವಾಲಯ ಸಂಪರ್ಕದ ಜತೆಗೆ ಈ ರಸ್ತೆಯು ದಿನಂಪ್ರತಿ ಸಾವಿರಾರು ವಾಹನ, ಪ್ರಯಾಣಕರು ಸಂಚರಿಸುವ ರಸ್ತೆಯಾಗಿದೆ. ಹೀಗಾಗಿ ಅಮೃತ ನಗರೋತ್ಥಾನ-4ರ ಯೋಜನೆಯಡಿ 64 ಲಕ್ಷ ರೂ.ವೆಚ್ಚದಲ್ಲಿ ಬೀದಿ ದೀಪ ಅಳವಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

65 ಕಂಬದಲ್ಲಿ 130 ದೀಪ
ದರ್ಬೆಯಿಂದ (ಅರ್ಧ ಭಾಗದ ಅನಂತರ) ಮರೀಲು ತನಕ ರಸ್ತೆ ವಿಭಾಜಕದ ನಡುವೆ 65 ಕಂಬ ಅಳವಡಿಸಲಾಗುತ್ತದೆ. ಪ್ರತೀ ಕಂಬದಲ್ಲಿ ಎರಡು ಬೀದಿ ದೀಪ ಅಳವಡಿಸಲಾಗುತ್ತದೆ. ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಸಂಸ್ಥೆಯು ಕೆಲಸ ಆರಂಭಿಸಿದ್ದು ತಳಮಟ್ಟದಲ್ಲಿ ಕಾಂಕ್ರೀಟ್‌ ಪಿಲ್ಲರ್‌ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ನೆಲ ಮಟ್ಟದ ಕೆಲಸ ಶೇ.70 ಕ್ಕಿಂತ ಅಧಿಕ ಪೂರ್ಣಗೊಂಡಿದೆ. ಇದು ಪೂರ್ಣಗೊಂಡ ಅನಂತರ ಕಂಬ ಅಳವಡಿಸಿ ಬೀದಿ ದೀಪ ಜೋಡಿಸಲಾಗುತ್ತದೆ.

ಕಾಮಗಾರಿ ಪೂರ್ಣಗೊಂಡ ಅನಂತರದ ಎರಡು ವರ್ಷದ ನಿರ್ವಹಣೆಯನ್ನು ಗುತ್ತಿಗೆ ಸಂಸ್ಥೆಯೇ ನಿರ್ವಹಿಸಲಿದೆ. ಅನಂತರ ನಗರಸಭೆಯು ನಿರ್ವಹಣೆಯ ಜವಾಬ್ದಾರಿ ನಿಭಾಯಿಸಲಿದೆ ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದುರ್ಗಾಪ್ರಸಾದ್‌ ತಿಳಿಸಿದ್ದಾರೆ.

Advertisement

ಚತುಷ್ಪಥ ರಸ್ತೆ
ಕೆಲವು ವರ್ಷಗಳ ಹಿಂದೆ ನಗರೋತ್ಥಾನದ ಯೋಜನೆಯಡಿ ಸುಮಾರು 3 ಕೋ.ರೂ. ವೆಚ್ಚದಲ್ಲಿ ಪುತ್ತೂರು ನಗರದ
ದರ್ಬೆ ವೃತ್ತದಿಂದ ಮರೀಲ್‌ವರೆಗಿನ ಚತುಷ್ಪಥ ಕಾಮಗಾರಿ ನಡೆಸಲಾಗಿತ್ತು. ದರ್ಬೆ ವೃತ್ತದಿಂದ ಮರೀಲ್‌ ರಸ್ತೆ ನಗರದಿಂದ ಕವಲೊಡೆಯುವ ಪ್ರಮುಖ ಮಾರ್ಗ ಇದಾಗಿದ್ದು, ಸುಬ್ರಹ್ಮಣ್ಯ- ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದೆ. ದರ್ಬೆ ವೃತ್ತದಿಂದ ಕಾವೇರಿಕಟ್ಟೆ, ಮರೀಲ್‌, ಬೆದ್ರಾಳ, ಪುರುಷರಕಟ್ಟೆ ಮೂಲಕ ಸರ್ವೆ, ಸವಣೂರು, ಕಾಣಿಯೂರು ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿ ಗುರುತಿಸಿಕೊಂಡಿದೆ.

9 ಸಾವಿರಕ್ಕೂ ಅಧಿಕ ಬೀದಿ ದೀಪ
31 ವಾರ್ಡ್‌ಗಳನ್ನು ಒಳಗೊಂಡಿರುವ ನಗರದಲ್ಲಿ ಒಟ್ಟು 9 ಸಾವಿರಕ್ಕೂ ಅಧಿಕ ಬೀದಿ ದೀಪಗಳಿವೆ ಎಂಬ ಅಂಕಿ ಅಂಶವನ್ನು ನಗರಸಭೆ ಅಧಿಕಾರಿಗಳು ನೀಡುತ್ತಾರೆ. ಇದರ ದುರಸ್ತಿಗೆ ನಗರಸಭೆ ವತಿಯಿಂದ ಸಂಪತ್‌ ಎಂಬವರಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು 15 ಮತ್ತು 16 ನಗರಸಭಾ ಸದಸ್ಯರ ಎರಡು ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿದ್ದಾರೆ. ಬೀದಿ ದೀಪದ ಸಮಸ್ಯೆಗಳು ಕಂಡು ಬಂದಲ್ಲಿ ನಗರಸಭೆ ಸದಸ್ಯರು ಆ ಗ್ರೂಪ್‌ಗೆ ಸಂದೇಶ ಹಾಕಿದರೆ ಆಗ ಗುತ್ತಿಗೆದಾರರು ಅದರ ದುರಸ್ತಿಗೆ ಕ್ರಮ ಕೈಗೊಳ್ಳುತ್ತಾರೆ. ಸಂಪರ್ಕ ದೃಷ್ಟಿಯಿಂದ ಇದು ಅನುಕೂಲಕಾರಿ ಅನ್ನುತ್ತಾರೆ ನಗರಸಭೆಯ ಕೆಲ ಸದಸ್ಯರು. ಬೀದಿ ದೀಪದ ವಿದ್ಯುತ್‌ ವೆಚ್ಚವನ್ನು ನಗರಸಭೆಯೇ ಪಾವತಿಸುತ್ತದೆ.

ನಗರಸಭೆಯ ಅಮೃತ ನಗರೋತ್ಥಾನ 4 ರಡಿ 64 ಲ.ರೂ. ವೆಚ್ಚದಲ್ಲಿ ದರ್ಬೆ- ಮರೀಲು ತನಕ ಬೀದಿ ದೀಪ(ಎಲ್‌ಇಡಿ ಬಲ್ಬ್) ಅಳವಡಿಸಲಾಗುತ್ತಿದೆ. ಕೆಲಸ ಪ್ರಗತಿಯಲ್ಲಿದೆ.

ಮಧು ಎಸ್‌. ಮನೋಹರ್‌, ಪೌರಾಯುಕ್ತರು, ನಗರಸಭೆ, ಪುತ್ತೂರು

*ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next