Advertisement

ಪುತ್ತೂರು ಸರಕಾರಿ ಆಸ್ಪತ್ರೆ: 15 ದಿನಗಳಲ್ಲಿ ಆಮ್ಲಜನಕ ಘಟಕ ಸಿದ್ಧ

10:05 PM Aug 27, 2021 | Team Udayavani |

ಪುತ್ತೂರು: ಕ್ಯಾಂಪ್ಕೋ ಪ್ರಾಯೋಜಕತ್ವದಲ್ಲಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಕ್ಸಿಜನ್‌ ಘಟಕ ಮುಂದಿನ ಹದಿನೈದು ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ. ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಶಾಸಕರ ಮನವಿ ಮೇರೆಗೆ ಕ್ಯಾಂಪ್ಕೋ ಸಂಸ್ಥೆ ಘಟಕ ನಿರ್ಮಾಣದ ಭರವಸೆ ನೀಡಿದ್ದು ಅದರಂತೆ ಘಟಕ ನಿರ್ಮಾಣದ ಸಿದ್ಧತೆ ಅಂತಿಮ ಹಂತಕ್ಕೆ ತಲುಪಿದೆ.

Advertisement

ಕೊಯಮತ್ತೂರಿನ ಸಮಿಟ್ಸ್‌ ಹೈಗ್ರಾನಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಮೂಲಕ ಘಟಕ ತಯಾರಿ ಕೆಲಸ ನಡೆದಿದೆ. ಕಂಪೆನಿಯಲ್ಲಿಯೇ ನಿರ್ಮಾಣ ಕಾರ್ಯ ಆಗಿದ್ದು ಅಲ್ಲಿಂದ ವಾರದೊಳಗೆ ಪುತ್ತೂರಿಗೆ ತಲುಪಲಿದೆ. ಈಗಾಗಲೇ ಕಳುಹಿಸುವ ವ್ಯವಸ್ಥೆ ಪ್ರಾರಂಭಗೊಂಡಿದೆ. ಘಟಕದ ಬಿಡಿಭಾಗಗಳು ಮತ್ತು ಟ್ಯಾಂಕ್‌ ನಿರ್ಮಿಸಿ ಅದನ್ನು ಪುತ್ತೂರಿಗೆ ತಂದು ಸರಕಾರಿ ಆಸ್ಪತ್ರೆ ವಠಾರದಲ್ಲಿ ನಿಗದಿಪಡಿಸಲಾದ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ಅನುಷ್ಠಾನ ಕಾರ್ಯಕ್ಕೆ ಒಂದು ವಾರ ತಗಲಬಹುದು ಎನ್ನುತ್ತಾರೆ ಲೋಕೋಪಯೋಗಿ ಇಲಾ ಖೆಯ ಸಹಾಯಕ ಎಂಜಿನಿಯರ್‌ ಪ್ರಮೋದ್‌.

1 ಕೋ.ರೂ.ವೆಚ್ಚ
ಒಟ್ಟು ವೆಚ್ಚ 1 ಕೋ.ರೂ.ಆಗಿದ್ದು 15 ಲಕ್ಷ ರೂ. ಸಿವಿಲ್‌ ವರ್ಕ್‌ಗೆ ತಗಲುತ್ತದೆ. ಹಳೆ ಸಬ್‌ಜೈಲಿಗೆ ಹೊಂದಿಕೊಂಡಂತೆ ಘಟಕ ನಿರ್ಮಾಣಕ್ಕೆ ಸ್ಥಳ ಸಮತಟ್ಟು ಪೂರ್ಣಗೊಂಡಿದೆ. 600 ಚದರಡಿ ವಿಸ್ತೀರ್ಣದಲ್ಲಿ 3 ಮೀಟರ್‌ ಎತ್ತರದ ಘಟಕ ನಿರ್ಮಾಣಗೊಳ್ಳಲಿದೆ. ಛಾವಣಿ ಸೇರಿದರೆ ಎತ್ತರ 5 ಮೀಟರ್‌ನಷ್ಟಿರಲಿದೆ ಎನ್ನುತ್ತದೆ ಘಟಕ ಸ್ಥಾಪನೆಯ ನೀಲ ನಕಾಶೆ.

ಇದನ್ನೂ ಓದಿ:ಲೈಂಗಿಕ ಅಲ್ಪಸಂಖ್ಯಾತರು, ಕಾರ್ಯಕರ್ತರ ರಕ್ಷಣೆ, ಏಳ್ಗೆಗೆ ಪ್ರಣಾಳಿಕೆಯಲ್ಲಿ ಆದ್ಯತೆ: ಡಿಕೆಶಿ 

ಆಕ್ಸಿಜನ್‌ ಉತ್ಪಾದನೆ
ಪ್ರತೀ ಗಂಟೆಗೆ 27 ಮೀಟರ್‌ ಕ್ಯೂಬ್‌ ಆಕ್ಸಿಜನ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಈ ಘಟಕ ಹೊಂದಿರಲಿದೆ.

Advertisement

ಶೀಘ್ರ ಅನುಷ್ಠಾನ
ಕೊಯಮತ್ತೂರಿನಿಂದ ಸಮಿಟ್ಸ್‌ ಕಂಪೆನಿಯು ಘಟಕ ನಿರ್ಮಿಸಿ ಪುತ್ತೂರಿಗೆ ವಾರದೊಳಗೆ ಪೂರೈಸಲಿದೆ. ಹದಿನೈದು ದಿನಗಳಲ್ಲಿ ಅನುಷ್ಠಾನ ಕಾರ್ಯ ನಡೆಯಲಿದೆ. ಕ್ಯಾಂಪ್ಕೋ ಒಂದು ಕೋ.ರೂ.ವೆಚ್ಚದಲ್ಲಿ ಈ ಘಟಕವನ್ನು ಸರಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನಿಸುತ್ತಿದೆ.
-ಕೃಷ್ಣ ಕುಮಾರ್‌,
ಆಡಳಿತ ನಿರ್ದೇಶಕ, ಕ್ಯಾಂಪ್ಕೋ

ಉಪವಿಭಾಗದ ದೊಡ್ಡ ಆಸ್ಪತ್ರೆ
ಸುಮಾರು 100 ಬೆಡ್‌ ಸಾಮರ್ಥ್ಯದ ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ಗೆ ಏರಿಸುವ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಸುಮಾರು 20 ಕೋ.ರೂ. ವೆಚ್ಚದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಇಡೀ ಆಸ್ಪತ್ರೆಗೆ ಕ್ಯಾಂಪಸ್‌ ರೂಪ ನೀಡುವ ಸಲುವಾಗಿ ಆಸ್ಪತ್ರೆಗೆ ತಾಗಿಕೊಂಡಿರುವ ವಿವಿಧ ಇಲಾಖೆಗಳ ಖಾಲಿ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಒಟ್ಟು 5.5 ಎಕ್ರೆ ಜಾಗ ಹೊಂದಿರುವ ಜಿಲ್ಲೆಯ ಆಸ್ಪತ್ರೆ ಇದಾಗಲಿದೆ. ಹೀಗಾಗಿ ಆಕ್ಸಿಜನ್‌ ಘಟಕ ಸ್ಥಾಪನೆ ಕೂಡ ಆಸ್ಪತ್ರೆಯ ಬೆಳವಣಿಗೆಗೆ ಪೂರಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next