Advertisement

Puttur: ನಿಧಾನಕ್ಕೆ ಹೋಗಿ, ಇಲ್ಲಿ ಕೆಲಸವೂ ನಿಧಾನಗತಿಯಲ್ಲಿದೆ!

03:04 PM Oct 23, 2024 | Team Udayavani |

ಪುತ್ತೂರು: ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಾಣಿಯಿಂದ 34ನೇ ನೆಕ್ಕಿಲಾಡಿ ತನಕದ ಕಾಮಗಾರಿ ಸ್ಥಿತಿ ಹೇಗಿದೆ ಎಂದರೆ ಅದು ಸದ್ಯಕ್ಕೆ ಮುಗಿಯುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಇಲ್ಲಿ ಅಲ್ಲಲ್ಲಿ ಗೋ ಸ್ಲೋ.. ವರ್ಕ್‌ ಇನ್‌ ಪ್ರೋಗ್ರೆಸ್‌ ಎನ್ನುವ ಫ‌ಲಕವಿದೆ. ಕೆಲಸ ನಿಧಾನ ಗತಿಯಲ್ಲಿರುವುದೇನೋ ನಿಜ. ಆದರೆ, ಪ್ರಗತಿಯಲ್ಲಿದೆಯೇ ಎನ್ನುವ ಸಂಶಯವು ಮೂಡುತ್ತಿದೆ.

Advertisement

ಅರ್ಧ ಭಾಗ ಪುತ್ತೂರು, ಇನ್ನರ್ಧ ಭಾಗ ಬಂಟ್ವಾಳ ತಾಲೂಕಿಗೆ ಸೇರಿರುವ ರಸ್ತೆ ಒಟ್ಟು 15 ಕಿ.ಮೀ. ಅಂತರ ಹೊಂದಿದೆ. ಮಾಣಿಯಿಂದ ಉಪ್ಪಿನಂಗಡಿ ಜಂಕ್ಷನ್‌ನ ಹಿಂದಿನ ನಿಲುಗಡೆ ತನಕ ಇರುವ ರಸ್ತೆ ಇದಾಗಿದ್ದು ಇಲ್ಲಿ ಬಹುತೇಕ ಕಡೆಗಳಲ್ಲಿ ಇರುವ ಅಪೂರ್ಣ ಕಾಮಗಾರಿಗಳೇ ರಾಷ್ಟ್ರೀಯ ಹೆದ್ದಾರಿಯ ಸಂಕಷ್ಟದ ಸ್ಥಿತಿಗಳನ್ನು ತೆರೆದಿಡುತ್ತಿದೆ. ಇಲ್ಲಿನ ಅವ್ಯವಸ್ಥೆ ಕಥೆ ಮುಗಿಯದಷ್ಟು ಆಳ.

ನೆಕ್ಕಿಲಾಡಿ ಸರ್ವಿಸ್‌ ರಸ್ತೆ ಕಥೆ ಹೇಳಿ ಸುಖವಿಲ್ಲ..!
ಉಪ್ಪಿನಂಗಡಿ ಪೇಟೆಯಿಂದ ಕೂಗಳತೆ ದೂರದಲ್ಲಿ ಇರುವ 34ನೇ ನೆಕ್ಕಿಲಾಡಿ ಬಳಿ ನಿರ್ಮಿಸಿರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ವಾಹನ ಸಂಚಾರಕ್ಕೆ ಎರಡು ಬದಿಗಳಲ್ಲಿನ ಸರ್ವಿಸ್‌ ರಸ್ತೆಯು ಚೆನ್ನಾಗಿಲ್ಲ. ಎರಡು ರಸ್ತೆಗಳಲ್ಲಿ ಒಂದು ರಸ್ತೆಯಲ್ಲಿ ಮಾತ್ರ ಸಂಚರಿಸಬಹುದು. ಇನ್ನೊಂದು ಕಿರಿದಾದ ರಸ್ತೆ. ಒಂದೆಡೆ ಧೂಳು, ಜಲ್ಲಿಗಳ ರಾಶಿ, ಹೊಂಡ ಗುಂಡಿ, ಕೆಸರು ಇವೆಲ್ಲವನ್ನು ದಾಟಬೇಕಾದ ಅನಿವಾರ್ಯತೆ ಇಲ್ಲಿನದು. ಮಳೆ ಹೆಚ್ಚಾದರೆ ಇಲ್ಲಿ ಚರಂಡಿ ಹೊಳೆ ಸ್ವರೂಪವನ್ನೇ ಪಡೆದು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದ ಉದಾಹರಣೆಗಳು ಇವೆ. ಈ ಮೇಲ್ಸೇತುವೆ ಪೂರ್ಣಗೊಳ್ಳುವ ತನಕ ಕಷ್ಟ ತಪ್ಪಿದ್ದಲ್ಲ ಅನ್ನುತ್ತಾರೆ ವಾಹನ ಸವಾರ ನಝೀರ್‌.

ದ್ವಿಪಥ ರಸ್ತೆಯೇ ನಾಪತ್ತೆ..!
ಇದು ಚತುಷ್ಪಥ ರಸ್ತೆ. ಹಾಗಂತ ಇಲ್ಲಿ ದ್ವಿಪಥ ರಸ್ತೆ ಮಾತ್ರ ಕಾಣುತ್ತಿದೆ. ಬಹುತೇಕ ಭಾಗಗಳಲ್ಲಿ ಇನ್ನೊಂದು ಬದಿಯ ದ್ವಿಪಥ ರಸ್ತೆ ನಿರ್ಮಾಣ ಆಗಿಲ್ಲ. ಅಲ್ಲಲ್ಲಿ ಅಗೆದು ಹಾಕಿರುವ ಮಣ್ಣಿನ ರಾಶಿಗಳು ಇನ್ನೊಂದು ರಸ್ತೆ ನಿರ್ಮಾಣಕ್ಕೆ ಬಾಕಿ ಇದೆ ಎನ್ನುತ್ತಿದೆ. ಅಗೆದು ಹಾಕಿರುವ ರಸ್ತೆಗಳಲ್ಲಿ ಕೆೆಸರು ತುಂಬಿರುವುದು, ಚರಂಡಿಯೇ ಇಲ್ಲದ ಕಾರಣ ಮಳೆ ನೀರಿಗೆ ರಸ್ತೆಯೇ ಹೊಳೆ ಸ್ವರೂಪ ಪಡೆದಿರುವ ದೃಶ್ಯಗಳೇ ಕಾಣಸಿಗುತ್ತಿದೆ. ಇದರ ಪರಿಣಾಮ ಬೊಳ್ಳಾರು, ಪೆರ್ನೆ ಮೊದಲಾದ ಭಾಗಗಳಲ್ಲಿ ಚರಂಡಿಯಲ್ಲಿ ಹರಿಯಬೇಕಿದ್ದ ನೀರು ತೋಟಕ್ಕೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದ್ದು ಕೃಷಿಕರು ಪರಿಹಾರಕ್ಕೆ ಆಗ್ರಹಿಸಿದ ಘಟನೆಯು ನಡೆದಿತ್ತು.

Advertisement

ನೇರ ರಸ್ತೆ ಪೂರ್ಣಕ್ಕೆ ಸಮಯ ಬೇಕು..!
ಆನೆಮಜಲು-ಕರ್ವೇಲು, ಕರ್ವೇಲಿನಿಂದ ಬಿಳಿಯೂರು ಕ್ರಾಸ್‌ ನಡುವೆ ಹಳೆ ರಸ್ತೆಯ ಬದಲಾಗಿ ನೇರ ಸಂಪರ್ಕ ರಸ್ತೆ ನಿರ್ಮಾಣ ಇನ್ನೂ ಪ್ರಗತಿಯಲ್ಲಿದೆ. ಈಗಿನ ಸ್ಥಿತಿ ಗಮನಿಸಿ ದರೆ ಅವು ಪೂರ್ತಿಯಾಗಲು ಕೆಲ ತಿಂಗಳುಗಳೇ ಬೇಕು. ಹಳೆ ರಸ್ತೆಗಳಲ್ಲಿ ವಾಹನ ದಟ್ಟಣೆ ಕೂಡ ಉಂಟಾಗುತ್ತಿದೆ. ಪೆರ್ನೆ ಭಾಗದಲ್ಲಿಯು ರಸ್ತೆ ನೇರಗೊಳಿಸುವ ಕಾಮಗಾರಿ ಪ್ರಾರಂಭಗೊಂಡು 4 ವರ್ಷಗಳೇ ಕಳೆದಿದ್ದರೂ ಆ ಗುಡ್ಡ ಅಗೆತ ಇನ್ನೂ ಪೂರ್ತಿ ಆಗಿಲ್ಲ.

ರಸ್ತೆಯೇ ಮಾಯವಾಗಿದೆ..!
ಇನ್ನೂ ರಾಷ್ಟ್ರೀಯ ಹೆದ್ದಾರಿಯಿಂದ ಕವಲೊಡೆದಿರುವ ಅನೇಕ ಸಂಪರ್ಕ ರಸ್ತೆಗಳು ಸಮರ್ಪಕವಾಗಿ ಮರು ನಿರ್ಮಾಣಗೊಂಡಿಲ್ಲ. ನೆಕ್ಕಿಲಾಡಿ ಗ್ರಾಮದ ಅಂಬೇಲಾ, ಶಾಂತಿನಗರ ಮೂಲಕ ಪುತ್ತೂರು- ಉಪ್ಪಿನಂಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ನೀಡಿರುವ ಸಂಪರ್ಕ ಹಾದಿಯೇ ಅಪಾಯಕಾರಿ ರೀತಿಯಲ್ಲಿದೆ. ಎರಡು ಬದಿಯಲ್ಲಿ ದ್ವಿಪಥ ರಸ್ತೆಗೆ ನಿರ್ಮಿಸಿರುವ ಹೊಂಡ ಇದ್ದು ಅದರ ಮಧ್ಯೆ ಕಿರಿದಾದ ರಸ್ತೆಯನ್ನು ದಾಟಬೇಕಾದ ಅನಿವಾರ್ಯತೆ ವಾಹನ ಚಾಲಕರದ್ದು. ಇಲ್ಲಿ ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ಇದು ಸಂಪರ್ಕ ರಸ್ತೆಯಾಗಿದೆ.

ಗಡಿಯಾರದಲ್ಲಿ ಗಡಿಬಿಡಿ
ಕಡೇಶಿವಾಲಯಕ್ಕೆ ಕವಲೊಡೆದಿರುವ ಗಡಿಯಾರ ಬಳಿ ನಿರ್ಮಿಸುತ್ತಿರುವ ಅಂಡರ್‌ಪಾಸ್‌ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು ರಸ್ತೆಗಳೆಲ್ಲಾ ಹೊಂಡಗಳಿಂದ ತುಂಬಿದೆ. ಅಂಡರ್‌ಪಾಸ್‌ನ ಪಿಲ್ಲರ್‌ಗಳ ಮೇಲ್ಭಾಗಕ್ಕೆ ಸಂಬಂಧಿಸಿ ದ್ವಿಪಥದ ಭಾಗ ಪೂರ್ಣಗೊಂಡಿದ್ದರೆ, ಇನ್ನೊಂದು ಭಾಗಕ್ಕೆ ಸಂಪರ್ಕವೇ ಆಗಿಲ್ಲ. ಬುಡೋಳಿ ಬಳಿ ಸೇತುವೆಯಲ್ಲಿ ಹೊಂಡ ಸೃಷ್ಟಿಯಾಗಿದ್ದು ವಾಹನ ಸವಾರರು ಸರ್ಕಸ್‌ ಮಾಡಿಕೊಂಡೇ ದಾಟಬೇಕು. ಬಹುತೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯಬೇಕಾದ ಸ್ಥಿತಿ ಇದೆ.

ದುರಂತ ಕಥೆಯನ್ನು ಸೀಳಿದ ರಾ. ಹೆದ್ದಾರಿ..!
ಸುಮಾರು 11 ವರ್ಷಗಳ ಹಿಂದೆ ಪೆರ್ನೆಯಲ್ಲಿ ಘಟಿಸಿದ ದುರಂತಕ್ಕೆ ಸಾಕ್ಷಿಯಾಗಿದ್ದ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ಸೀಳಿದೆ. 2013 ಎ.9 ರಂದು ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಅಪಘಾತಕ್ಕೆ ಈಡಾಗಿ ಅನಿಲ ಸೋರಿಕೆ ಉಂಟಾಗಿ ಅಗ್ನಿ ಅನಾಹುತ ಸಂಭವಿಸಿತ್ತು. ಪರಿಸರದ ನಿವಾಸಿಗಳು ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಈ ಸ್ಥಳದ ಕುರುಹೇ ಮಾಯವಾಗಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next