Advertisement

ಮುತ್ತು ಬೆಳೆದ ಊರಿಗೆ ಅನ್ನ –ನೀರಿನ ಯೋಜನೆ 

06:43 AM Mar 02, 2019 | |

ಪುತ್ತೂರು : ನಗರದ ಬಿಇಒ ಕಚೇರಿ ಬಳಿ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಶುಕ್ರವಾರ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ನಗರಸಭೆ ಮತ್ತು ಕೆ.ಯು. ಐ.ಡಿ.ಎಫ್‌.ಸಿ. ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬ ರಾಜು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

Advertisement

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ನಗರಾಭಿವೃದ್ಧಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ಹಿಂದೆ ಶ್ರೀಮಂತರು ಹಾಗೂ ಬಡವರು ಪ್ರತ್ಯೇಕ ಹೊಟೇಲ್‌ಗ‌ಳಲ್ಲಿ ಊಟ ಮಾಡುವ ವ್ಯವಸ್ಥೆ ಅನುಸರಿಸಲಾಗುತ್ತಿತ್ತು. ಆದರೆ ಸರಕಾರ ಇಂದಿರಾ ಕ್ಯಾಂಟೀನ್‌ ಆರಂಭಿಸಿ, ಶ್ರೀಮಂತರೂ ಇಲ್ಲಿಗೆ ಬರುವಂತೆ ಮಾಡಿದೆ ಎಂದರು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಬಡವರಿಗಾಗಿ ಕ್ಯಾಂಟೀನ್‌ ಆರಂಭಿಸುವ ಇಂಗಿತ ವ್ಯಕ್ತಪಡಿಸಿದಾಗ ಅದರ ಕುರಿತು ಅಧ್ಯಯನ ನಡೆಸುವ ಜವಾಬ್ದಾರಿಯನ್ನು ನನಗೆ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಚೆನ್ನೈಗೆ ತೆರಳಿ ಅಧ್ಯಯನ ನಡೆಸಿದ್ದೆ. ಆ ಬಳಿಕ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಗಿನ ಸಚಿವ ಕೆ.ಜೆ. ಜಾರ್ಜ್‌ ಹಾಗೂ ಬೆಂಗಳೂರಿನ ಮೇಯರ್‌ ಸೇರಿಕೊಂಡು ಚರ್ಚೆ ನಡೆಸಿ ಯೋಜನೆ ಸಿದ್ಧಪಡಿಸಿದೆವು. ಸರ್ವರ ಅಭಿಪ್ರಾಯದಂತೆ ಇಂದಿರಾ ಕ್ಯಾಂಟೀನ್‌ ಹೆಸರು ಅಂತಿಮಗೊಳಿಸಲಾಯಿತು ಎಂದು ಮಾಹಿತಿ ಹಂಚಿಕೊಂಡರು. ಸರಕಾರದ ಸಂಪತ್ತು ಸರ್ವರ ಪಾಲು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

30 ವರ್ಷಗಳ ದೃಷ್ಟಿಕೋನ
ಕೆ.ಯು.ಐ.ಡಿ.ಎಫ್‌.ಸಿ. ಸಹಯೋಗ ದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯ ಸುಮಾರು 14 ಸಾವಿರ ಮಂದಿಗೆ ನೀರು ಪೂರೈಸುವ ಎಡಿಬಿ ಯೋಜನೆ ಜಾರಿಗೊಳ್ಳುತ್ತಿದೆ. 30 ವರ್ಷಗಳ ಆವಶ್ಯಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಅಭಿವೃದ್ಧಿ ಯೋಜನೆಯನ್ನು ನಡೆಸಲಾಗುತ್ತದೆ. ಈ ಯೋಜನೆಯನ್ನು ಪುತ್ತೂರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಹಾಗೂ ಶಕುಂತಳಾ ಟಿ. ಶೆಟ್ಟಿ ಪಾತ್ರ ಅಭಿನಂದನೀಯ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಸಹಾಯಕ ಕಮಿಷನರ್‌ ಎಚ್‌.ಕೆ. ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಪ್ರಸನ್ನ ಕುಮಾರ್‌, ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಎಡಿಬಿ ಗುತ್ತಿಗೆದಾರ ನಿಕೋಲಸ್‌, ಕೆ.ಯು.ಐ.ಡಿ.ಎಫ್‌.ಸಿ. ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಸೂರಜ್‌, ನಗರಸಭಾ ಸದಸ್ಯರಾದ ರಿಯಾಝ್, ವಿದ್ಯಾಗೌರಿ, ಪದ್ಮನಾಭ, ಶಕ್ತಿ ಸಿನ್ಹಾ, ಫೌಝಿಯಾ ಉಪಸ್ಥಿತರಿದ್ದರು. ನಗರಸಭಾ ಮಾಜಿ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ದವರು, ಸಾರ್ವಜನಿಕರು ಪಾಲ್ಗೊಂಡರು.

Advertisement

ಶಾಸಕರು ಗೈರು
ಪುತ್ತೂರಿನಲ್ಲಿ ಮಹತ್ವದ ಇಂದಿರಾ ಕ್ಯಾಂಟೀನ್‌ ಹಾಗೂ ದೊಡ್ಡ ಮಟ್ಟದ ನಗರಸಭಾ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಗೈರಾಗಿದ್ದರು. ಬೆಂಗಳೂರಿನ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next