Advertisement

Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್‌

12:56 PM Oct 06, 2024 | Team Udayavani |

ಪುತ್ತೂರು: ನವರಾತ್ರಿ ಹೊತ್ತಲ್ಲಿ ತಾಸೆಯ ಪೆಟ್ಟಿಗೆ ಊರಿಡೀ ಪಿಲಿಗಳು ಕುಣಿಯುತ್ತಿವೆ. ಅಂದ ಹಾಗೆ, ಪುತ್ತೂರಿನ ಮೊದಲ ಕಿನ್ನಿ ಪಿಲಿಗೆ ಈಗ 48 ವರ್ಷ!

Advertisement

ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರ್ಯಾಂಡ್‌ ತಂದುಕೊಟ್ಟವವರು ಪಿಲಿ ರಾಧಣ್ಣ. ನಗರದ ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ ಅವರು ಹತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರಾದವರು. ಆಚರಣೆಯ ಸಂಪ್ರದಾಯಕ್ಕೆ ಎಳ್ಳಷ್ಟು ಚ್ಯುತಿ ಬಾರದ ಹಾಗೆ ವೇಷ ಹಾಕುವುದು ಮತ್ತು ಕುಣಿಯುವುದು ಅವರ ವಿಶೇಷ.

65 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಇದದ್ದು ಎರಡು ಪಿಲಿ. ಒಂದು ಪಿಲಿ ಸಂಕಪ್ಪಣ್ಣ, ಇನ್ನೊಂದು ಪಿಲಿ ಗಂಗಣ್ಣ. ಪಿಲಿ ಸಂಕಪ್ಪ ಶೆಟ್ಟಿ ಅವರ ಪುತ್ರನೇ ಪಿಲಿ ರಾಧಣ್ಣ. ಸಂಕಪ್ಪ ಅವರು ಸುಮಾರು 30 ವರ್ಷಗಳ ಕಾಲ ಕುಣಿದವರು. ರಾಧಾಕೃಷ್ಣ ಶೆಟ್ಟಿ ಅವರಿಗೆ 9 ವರ್ಷ (4ನೇ ತರಗತಿ) ಇರುವಾಗ ತಂದೆ ಸಂಕಪ್ಪ ಅವರು ಕಿನ್ನಿಪಿಲಿ ವೇಷಧಾರಿಯಾಗಿ ಸೇರಿಸಿಕೊಂಡರು. ಅಲ್ಲಿಂದ ಪಿಲಿ ವೇಷ ಶುರು. ಅಪ್ಪ-ಮಗ ಇಬ್ಬರು 10 ವರ್ಷಗಳ ಕಾಲ ಜತೆ ಜತೆಯಾಗಿ ಹೆಜ್ಜೆ ಹಾಕಿದರು. ಕಿನ್ನಿ ಪಿಲಿಯಾಗಿ ಟೋಪಿ ಹಾಕಿಕೊಂಡು ಹೊರಟ ಪುಟ್ಟ ಬಾಲಕ ಮುಂದೆ ಪಿಲಿ ರಾಧಣ್ಣ ಆಗಿ ಗುರುತಿಸಿಕೊಂಡರು. ಅವರಿಗೆ ಈಗ 58 ವರ್ಷ. ಹುಲಿ ಸೇವೆಗೆ 48 ವರ್ಷ.

15ರಿಂದ 75ಕ್ಕೇರಿದ ಪಿಲಿಗಳು..!
ರಾಧಾಕೃಷ್ಣ ಅವರಿಗೆ 20 ವರ್ಷ ಆದಾಗ ಸಂಕಪ್ಪ ಶೆಟ್ಟಿ ತೀರಿಕೊಂಡರು. ಮುಂದೆ ನಾಲ್ಕು ವರ್ಷಗಳ ಒಂಟಿಯಾಗಿ ಸೇವೆ ಮುಂದುವರಿಸಿದರು. ಅದಾದ ಬಳಿಕ ಏಳೆಂಟು ಕಿನ್ನಿಪಿಲಿಗಳನ್ನು ಸೇರಿಸಿಕೊಂಡರು. 15 ಜನರ ತಂಡ ಕಟ್ಟಿ ಸೇವೆ ಮುಂದುವರಿಸಿದರು. ಈಗ 75 ಪಿಲಿಗಳಿವೆ. ಪುತ್ತೂರು, ಮಂಗಳೂರು, ಉಡುಪಿ ಭಾಗದ ಪಿಲಿಗಳು ಇವರ ಜತೆ ಸೇರುತ್ತಾರೆ. ಕೋವಿಡ್‌ ಮೊದಲು ನಾಲ್ಕು ದಿನ ಇದ್ದ ಪಿಲಿ ವೇಷ ಸಂಚಾರ ಈಗ ಒಂದು ದಿನ ನಡೆಯುತ್ತದೆ.

ಪಿಲಿ ರಾಧಣ್ಣ ಅವರ ಹುಲಿವೇಷ

Advertisement

ರಾಧಾಕೃಷ್ಣ ಹೆಜ್ಜೆಯ ಹೆಗ್ಗುರುತು

  • ಪಿಲಿ ರಾಧಣ್ಣ ಕುಣಿತದ ವೀಕ್ಷಣೆಗೆ ಅಭಿಮಾನಿಗಳ ದಂಡೇ ಇದೆ. ಅವರ ಮೊದಲ 2 ಹೆಜ್ಜೆ ಭಾರೀ ಸ್ಪೆಷಲ್‌.
  • ಹಿಂದೆ ಕಟ್ಟಡದಿಂದ ಕಟ್ಟಡಕ್ಕೆ ಜಂಪಿಂಗ್‌ ವಿಶೇಷವಾಗಿತ್ತು. ಈಗ ಆ ರೀತಿಯ ರಿಸ್ಕ್ ತೆಗೆದುಕೊಳ್ಳದೆ ನೆಲದಲ್ಲೇ ವಿಭಿನ್ನ ಹೆಜ್ಜೆ.
  • ವೇಷ ಕಳಚಿದ ಬಳಿಕ ಮಂಡೆಯನ್ನು ತನ್ನ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇಡುತ್ತಾರೆ. ಮುಂದಿನ ವರ್ಷ ಪಿಲಿ ವೇಷ ಬರುವ ತನಕ ಅದನ್ನು ಮುಟ್ಟುವುದಿಲ್ಲ.
  • ಅವರಲ್ಲಿ ಮೂರು ಪಿಲಿ ಮಂಡೆಗಳು ಇವೆ.ಅದಕ್ಕೆ ಪೂಜನೀಯ ಸ್ಥಾನ ನೀಡುತ್ತಾ ಅತ್ಯಂತ ಶುದ್ಧ ಆಚಾರದಿಂದ ಆರಾಧಿಸುತ್ತಾರೆ.

ಎರಡು ವರ್ಷ ಸೇವೆ ನಿಲ್ಲಿಸಿದಾಗ ಕಾಡಿತ್ತು ಅನಾರೋಗ್ಯ!
ರಾಧಣ್ಣ ಮಧ್ಯೆ ಎರಡು ವರ್ಷ ಸೇವೆ ನಿಲ್ಲಿಸಿದ್ದರು. ಅದಾದ ಬಳಿಕ ಅವರಿಗೆ ಅನಾರೋಗ್ಯ ಕಾಡಿತ್ತು. ಪ್ರಶ್ನಾ ಚಿಂತನೆಯ ಪ್ರಕಾರ ಕಟೀಲು ಕ್ಷೇತ್ರಕ್ಕೆ ತೆರಳಿ ಅರ್ಚಕರ ಬಳಿ ವಿಷಯ ತಿಳಿಸಿದರು. ಸೇವೆ ಮುಂದುವರಿಸುವಂತೆ ಅವರು ಸೂಚಿಸಿದರು. ಸಾಧ್ಯವೇ ಇಲ್ಲ ಎಂದಾಗುವ ಹೊತ್ತಲ್ಲಿ ದೇವಿಗೆ ಪುಂಡಿ ಪಣವು (ಮುಷ್ಟಿ ಹಣ) ಅರ್ಪಿಸುವಂತೆ ತಿಳಿಸಿದ್ದರು. ಅದಾದ ನಂತರ ಸೇವೆ ಮುಂದುವರಿಸಿದರು.

ಭಕ್ತಿಯೇ ಪ್ರಧಾನ
48 ವರ್ಷಗಳಿಂದ ಪಿಲಿ ವೇಷ ಧರಿಸಿ ಸೇವೆ ನೀಡುತ್ತಿದ್ದೇನೆ. ಇದು ದೇವರ ಸೇವೆ. ಇಲ್ಲಿ ಭಕ್ತಿಯೇ ಪ್ರಧಾನ ಅನ್ನುವುದು ನನ್ನ ನಂಬಿಕೆ. ಇಲ್ಲಿನ ಆಚಾರ ವಿಚಾರಗಳಿಗೆ ಧಕ್ಕೆ ಆಗದ ಹಾಗೆ ಸೇವೆ ಮುಂದುವರಿಸುತ್ತಿದ್ದೇನೆ.
– ರಾಧಾಕೃಷ್ಣ ಶೆಟ್ಟಿ, ಪುತ್ತೂರು

ಟೋಪಿ ಬದಲು ಮಂಡೆ ಬಂತು!
ಪಿಲಿ ಟೋಪಿ ಧರಿಸಿ ಹೋಗುತ್ತಿದ್ದ ರಾಧಣ್ಣ ಅವರಿಗೆ ಪಿಲಿ ಮಂಡೆ ನೀಡಿದ್ದು ಪುತ್ತೂರಿನ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಗಿನ ಅರ್ಚಕರು. ಅವರು ರಾಧಣ್ಣನನ್ನು ಕರೆದು ಮುಂದಿನ ವರ್ಷದಿಂದ ಪಿಲಿ ಮಂಡೆ ಧರಿಸುವಂತೆ ಹೇಳಿ ತಾನೇ ಪಿಲಿ ಮಂಡೆ ಮಾಡಿಸಿಕೊಟ್ಟರು. ಅಲ್ಲಿಂದ ಕಿನ್ನಿಪಿಲಿ ದೊಡ್ಡ ಪಿಲಿಯಾಗಿ ಬದಲಾಯಿತು!

ಮೂರನೇ ತಲೆಮಾರಿನ ಸೇವೆ
ತಂದೆ ಸಂಕಪ್ಪ ಶೆಟ್ಟಿ 30 ವರ್ಷ ಹುಲಿ ವೇಷ ಹಾಕಿದರೆ, ಅವರ ಪುತ್ರ ರಾಧಣ್ಣ 48 ವರ್ಷಗಳಿಂದ ವೇಷಧಾರಿ. ಪ್ರಸ್ತುತ ರಾಧಣ್ಣ ಅವರ ಪುತ್ರ ಅಭಿಷೇಕ್‌ ವೇಷ ಹಾಕುತ್ತಾರೆ. ಹೀಗೆ ಮೂರನೇ ತಲೆಮಾರು ಪಿಲಿ ಕುಣಿತದಲ್ಲಿ ತೊಡಗಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next