Advertisement

ಪುತ್ತೂರು ವಿದ್ಯುತ್‌ ಸಮಸ್ಯೆ: ಪರಿಹಾರಕ್ಕೆ ಬೇಕು 10 ತಿಂಗಳು

02:22 PM Mar 15, 2018 | Team Udayavani |

ಪುತ್ತೂರು: ಪ್ರತಿದಿನ ಕೈಕೊಡುವ ವಿದ್ಯುತ್‌. ಪರೀಕ್ಷೆಗೆ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳು, ಅಡುಗೆ ಸಿದ್ಧತೆಯಲ್ಲಿರುವ ಗೃಹಿಣಿಯರು, ಕೆಲಸದ ತರಾತುರಿಯಲ್ಲಿರುವ ಕಾರ್ಮಿಕ ವರ್ಗ – ಹೀಗೆ ಎಲ್ಲರದ್ದೂ ಹಿಡಿಶಾಪ. ಈ ಎಲ್ಲರ ಸಮಸ್ಯೆಗೆ ಪರಿಹಾರ ನೀಡಬೇಕಾದರೆ ಇನ್ನೂ ಹತ್ತು ತಿಂಗಳು ಕಾಯಬೇಕು.

Advertisement

ಮಾಡಾವು ಬಳಿಯ ಬೊಳಿಕಲ ಉಪಕೇಂದ್ರದ ಕೆಲಸ ಪೂರ್ಣಗೊಳ್ಳಲು ಇನ್ನೂ 10 ತಿಂಗಳು ಬೇಕು. ಈ ಉಪಕೇಂದ್ರ ಸೇವೆಗೆ ತೆರೆದುಕೊಳ್ಳದ ಹೊರತು, ವಿದ್ಯುತ್‌ ಸಮಸ್ಯೆಗೆ ಪರಿಹಾರ ಸಿಗದು. ಅಲ್ಲಿಯ ತನಕ ಯಾವಾಗ, ಎಷ್ಟು ಹೊತ್ತು ವಿದ್ಯುತ್‌ ಕಡಿತ ಆಗುತ್ತದೆ ಎಂದು ಊಹಿಸಲೂ ಅಸಾಧ್ಯ.

ಪುತ್ತೂರು 110 ಕೆ.ವಿ. ವಿಭಾಗದಡಿ ಪುತ್ತೂರು ನಗರ, ಗ್ರಾಮಾಂತರ, ಕಡಬ, ಸುಳ್ಯ, ಸುಬ್ರಹ್ಮಣ್ಯ ಉಪಕೇಂದ್ರಗಳಿವೆ. ಈ ಐದು ಕೇಂದ್ರಗಳಿಗೂ ವಿದ್ಯುತ್‌ ಸರಬರಾಜು ಮಾಡುವುದು ಪುತ್ತೂರು 110 ಕೆ.ವಿ. ವಿಭಾಗದಿಂದ. ಇದರ ಒಟ್ಟು ಸಾಮರ್ಥ್ಯ 80 ಮೆಗಾ ವ್ಯಾಟ್‌. ಸದ್ಯಕ್ಕೆ ಇದರ ಮೇಲೆ ಬಿದ್ದಿರುವ ಒತ್ತಡ 120 ಮೆಗಾ ವ್ಯಾಟ್‌. ಹೆಚ್ಚುವರಿ ಹೊರೆಯಿಂದ ಅನಿಯಮಿತ ಲೋಡ್‌ ಶೆಡ್ಡಿಂಗ್‌ ಆಗುತ್ತಿದೆ. ಮಾಡಾವು ಉಪಕೇಂದ್ರ ಚಾಲನೆಗೊಂಡರೆ ಸಮಸ್ಯೆ ದೂರವಾಗುತ್ತದೆ ಎಂದು ಪುತ್ತೂರು ಮೆಸ್ಕಾಂನ ಕಾ.ನಿ. ಎಂಜಿನಿಯರ್‌ ನಾರಾಯಣ್‌ ಪೂಜಾರಿ ತಿಳಿಸಿದ್ದಾರೆ.

ಏನು ಉಪಯೋಗ?
ಮೆಸ್ಕಾಂನ ಪುತ್ತೂರು ವಿಭಾಗದಲ್ಲಿ 80ರ ಬದಲು 120 ಮೆಗಾ ವ್ಯಾಟ್‌ ವಿದ್ಯುತ್‌ ಹೊರೆ ಬಿದ್ದಿರುವುದರಿಂದ ಅನಿಯಮಿತ ವಿದ್ಯುತ್‌ ಸಮಸ್ಯೆ ತಲೆದೋರಿದೆ. ಮಾಡಾವು ಬಳಿ ಉಪಕೇಂದ್ರ ನಿರ್ಮಾಣವಾದರೆ, ಅರ್ಧದಷ್ಟು ಹೊರೆ ಕಡಿಮೆಯಾಗಿ, ಸಮಸ್ಯೆ ನಿವಾರಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ರೀ ಟೆಂಡರ್‌
2009ರ ಟೆಂಡರ್‌ನಡಿ 2018ರಲ್ಲಿ ಕೆಲಸ ನಿರ್ವಹಿಸುವುದು ಹೇಗೆ ಸಾಧ್ಯ? ಉಪಕರಣಗಳ ವೆಚ್ಚ ಹೆಚ್ಚಾಗಿದೆ. ಆಗ 14 ಕೋಟಿ ರೂ.ಗೆ ಟೆಂಡರ್‌ ಆಗಿದ್ದು, 8 ಕೋಟಿ ರೂ.ನಲ್ಲಿ ಉಪಕೇಂದ್ರ ನಿರ್ಮಿಸಲಾಗಿದೆ. ಉಳಿದ ಕಾಮಗಾರಿಗಳಿಗೆ ಉಪಕರಣಗಳನ್ನು ಈಗಿನ ದರದಲ್ಲಿ ಹೊಂದಿಸುವುದು ಅಸಾಧ್ಯದ ಮಾತು. ಆದ್ದರಿಂದ ಗುತ್ತಿಗೆದಾರರು ಹಿಂದೆ ಸರಿದರು. ಪರಿಣಾಮ ರೀ ಟೆಂಡರ್‌ ಕರೆಯುವುದು ಅನಿವಾರ್ಯ ಆಯಿತು. ಟೆಂಡರ್‌ನಲ್ಲಿ ನಿಗದಿಪಡಿಸಿದ ದರಕ್ಕಿಂತ ಶೇ. 16ರಷ್ಟು ಹೆಚ್ಚು ಕೋಟ್‌ ಮಾಡಿ ರೀ ಟೆಂಡರ್‌ ಹಾಕಲಾಗಿದೆ. ಇದನ್ನು ಪರ್ಚೇಸ್‌ ಕಮಿಟಿಗೆ ಕಳುಹಿಸಲಾಗಿದೆ. ಅವರು ನಿರ್ಧಾರ ಕೈಗೊಂಡು, ದಿನವನ್ನು ನಿಗದಿ ಮಾಡಬೇಕು. ಇವೆಲ್ಲ ಪೂರ್ಣಗೊಂಡು 10 ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಬಹುದು ಎಂದು ಕೆಪಿಟಿಸಿಎಲ್‌ ಮೂಲಗಳು ತಿಳಿಸಿವೆ.

Advertisement

ಶೇ. 80 ಕೆಲಸ ಪೂರ್ಣ
ಲೈನ್‌ ವರ್ಕ್‌ (ಟವರ್‌ ಹಾಗೂ ತಂತಿ ಎಳೆಯುವ ಕೆಲಸಗಳು) ಶೇ. 80ರಷ್ಟು ಪೂರ್ಣಗೊಂಡಿವೆ. 115 ಟವರ್‌ಗಳ ಪೈಕಿ 97 ನಿರ್ಮಾಣಗೊಂಡಿವೆ. 27 ಕಿ.ಮೀ. ಪೈಕಿ 14 ಕಿ.ಮೀ. ಲೈನ್‌ ಎಳೆದಾಗಿದೆ. ಇನ್ನೂ ಎರಡು ಕೇಸ್‌ಗಳು ಜಿಲ್ಲಾ ಧಿಕಾರಿ ನ್ಯಾಯಾಲಯ ಹಾಗೂ ಒಂದು ಕೇಸ್‌ ಹೈಕೋರ್ಟ್‌ನಲ್ಲಿ ಬಾಕಿಯಾಗಿವೆ.

ಉಪಕೇಂದ್ರಕ್ಕೆ ವಿಘ್ನ 
2008ರಲ್ಲೇ ಕಾಮಗಾರಿಗೆ ಹಸಿರು ನಿಶಾನೆ ತೋರಿಸಲಾಯಿತು. ಟೆಂಡರ್‌ ನಡೆದು, ಇನ್ನೇನು ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲಿ ವಿಘ್ನ ಎದುರಾಯಿತು. ಮಾಡಾವಿನವರೆಗೆ 115 ಟವರ್‌ ನಿರ್ಮಿಸಬೇಕಿತ್ತು. ಜಾಗದ ಮಾಲೀಕರು ಅಡ್ಡಿ ಪಡಿಸಿದರು. ಶಾಂತಿ ಮಾತುಕತೆ ವಿಫಲವಾಯಿತು. ಭೂ ಮಾಲೀಕರು ಕೋರ್ಟ್‌ ಮೆಟ್ಟಿಲೇರಿದರು. ಸೂಕ್ತ ಪರಿಹಾರ ನೀಡು ವಂತೆ ಕೋರ್ಟ್‌ ಆದೇಶ ನೀಡಿದ್ದು, ಅದರಂತೆ ಕೆಲಸಗಳು ಈಗ ಮರುಚಾಲನೆ ಪಡೆದುಕೊಂಡಿವೆ.

ಉಪಕೇಂದ್ರ ತೀರಾ ಅಗತ್ಯ
ಪುತ್ತೂರು, ಸುಳ್ಯ, ಕಡಬಕ್ಕೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ವಿದ್ಯುತ್‌ ಪೂರೈಕೆ ಮಾಡುವ ದೃಷ್ಟಿಯಿಂದ ಮಾಡಾವು ಉಪಕೇಂದ್ರ ತೀರಾ ಅಗತ್ಯ. ಈಗ ಪುತ್ತೂರು 110 ಕೆ.ವಿ. ವಿಭಾಗಕ್ಕೆ ಹೊರೆ ಹೆಚ್ಚಾಗಿದೆ. ಇದನ್ನು ಸರಿಪಡಿಸುವ ದೃಷ್ಟಿಕೋನದಿಂದ ಮಾಡಾವು ಉಪಕೇಂದ್ರದ ಕೆಲಸ ಆದಷ್ಟು ವೇಗ ಪಡೆಯಬೇಕು. ಕೆಲಸ ಪೂರ್ಣಗೊಳಿಸಲು ಇನ್ನು ಕನಿಷ್ಠ 10 ತಿಂಗಳು ಬೇಕಾಗಬಹುದು. 
– ಸತೀಶ್‌ ಕೆ.,
ಸಹಾಯಕ ಕಾರ್ಯನಿರ್ವಾಹಕ
ಎಂಜಿನಿಯರ್‌, ಕೆಪಿಟಿಸಿಎಲ್‌

ಗಣೇಶ್‌ ಎನ್‌.ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next