Advertisement

ಪುತ್ತೂರು :ಸಂಘ- ಸಂಸ್ಥೆ ನೆರವಿನಲ್ಲಿ ಆಸ್ಪತ್ರೆ ಅಭಿವೃದ್ಧಿ 

03:37 PM Jun 10, 2018 | |

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿವೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಒಮ್ಮೆಗೇ ಪರಿಹಾರ ಕಷ್ಟ. ಆದರೂ ಮಳೆಗಾಲದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು
ಹೇಳಿದರು.

Advertisement

ಪುತ್ತೂರು ಸರಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಬಳಿಕ ಮಾಧ್ಯಮದ ಜತೆ ಮಾತನಾಡಿದರು. ಪುತ್ತೂರು ಜಿಲ್ಲೆಯ ಎರಡನೇ ದೊಡ್ಡ ಆಸ್ಪತ್ರೆ. ಬಂಟ್ವಾಳದಿಂದಲೂ ಇಲ್ಲಿಗೆ ಜನರು ಬರುತ್ತಾರೆ. ಆದರೆ ಅಷ್ಟು ಮೂಲ ಸೌಕರ್ಯಗಳು ಇಲ್ಲಿಲ್ಲ. ಆಸ್ಪತ್ರೆಯ ಒಳಭಾಗದಲ್ಲಿ ಸೋರುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾಮಗಾರಿಯನ್ನು ತಕ್ಷಣ ನಡೆಸಲು ಸೂಚಿಸಿದ್ದೇನೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಇಲಾಖೆ ನಿರ್ದೇಶಕರ ಬಳಿ ಮಾತನಾಡುತ್ತೇನೆ ಎಂದರು.

ಡಯಾಲಿಸೀಸ್‌, ಎಕ್ಸ್‌ರೇ ಮೊದಲಾದ ಆಧುನಿಕ ವ್ಯವಸ್ಥೆಗಳು ಆಸ್ಪತ್ರೆಯಲ್ಲಿ ಇದೆ. ಇದನ್ನು ಸಾರ್ವಜನಿಕರಿಗೆ ಸಿಗುವ ರೀತಿ ಬಳಸಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೂ ಸೂಚಿಸಲಾಗಿದೆ. ಮಂಗಳೂರಿನ ಆಸ್ಪತ್ರೆಯನ್ನು ಸಂಘ- ಸಂಸ್ಥೆಗಳ ನೆರವಿನೊಂದಿಗೆ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಪುತ್ತೂರು ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆಲೋಚಿಸಲಾಗುವುದು. ಸರಕಾರಿ ಆಸ್ಪತ್ರೆ ಎಂಬ ಕೀಳರಿಮೆ ಜನರಿಗೆ ಬೇಡ ಎಂದರು.

ದುಡ್ಡು ಮಾಡುವ ದಂಧೆ
ಸಾಮಾನ್ಯ ಜ್ವರ ಬಂದ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಟೆಸ್ಟ್‌ ಮಾಡಿಸಲಾಗುತ್ತಿದೆ. ಇದು ದುಡ್ಡು ಮಾಡುವ ದಂಧೆಯಾಗಿ ಪರಿಣಮಿಸಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಅವರು ಜಿಲ್ಲಾ ಮಟ್ಟದಿಂದಲೇ ಪತ್ರಿಕಾ ಹೇಳಿಕೆ ನೀಡಬೇಕು ಎಂದರು.

ಹೊಸ ಜನರೇಟರ್‌
ಸರಕಾರಿ ಆಸ್ಪತ್ರೆಯಲ್ಲಿರುವ ಜನರೇಟರ್‌ ಓಬಿರಾಯನ ಕಾಲದ್ದು. ಇದರ ಅವಧಿ ಮುಗಿದಿದೆ. ಆದ್ದರಿಂದ ಹೊಸ ಜನರೇಟರ್‌ ವ್ಯವಸ್ಥೆ ಮಾಡಲಾಗುವುದು. ಇದಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಲು ಪ್ರಯತ್ನಿಸಲಾಗುವುದು. ಪುತ್ತೂರು ಸರಕಾರಿ ಆಸ್ಪತ್ರೆಯ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಬಳಿಯೂ ಸೂಚಿಸಲಾಗಿದೆ. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಗಮನ ಹರಿಸಲು ತಿಳಿಸಿದ್ದೇನೆ ಎಂದರು.

Advertisement

ಡೆಂಗ್ಯೂ ಪ್ರಮಾಣ ಕಡಿಮೆ
ಪುತ್ತೂರು ತಾಲೂಕಿನಲ್ಲಿ ಡೆಂಗ್ಯೂ ಜ್ವರದ ಪ್ರಮಾಣ ತುಂಬಾ ಕಡಿಮೆ ಇದೆ. ಹೆಚ್ಚಾಗಿ ಸಾಮಾನ್ಯ ಜ್ವರವಷ್ಟೇ ಕಂಡುಬಂದಿದೆ. ರೋಗ ಉಪಶಮನ ಮಾಡುವ ಜತೆಗೆ ರೋಗ ಬಾರದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದು ವೈದ್ಯರ ಕರ್ತವ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಹೇಳಿದರು.

ಬೋಟ್‌ ತರಲೇ… 
ಆಸ್ಪತ್ರೆ ಪರಿಶೀಲನೆ ವೇಳೆ, ಮೇಲ್ಛಾವಣಿ ಸೋರುತ್ತಿರುವುದು ಗಮನಕ್ಕೆ ಬಂದಿತು. ಆಸ್ಪತ್ರೆಯ ಒಳಗಿನ ಪರಿಸ್ಥಿತಿ ನೋಡುವಾಗ ಉಪ್ಪಿನಂಗಡಿಯಿಂದ ಬೋಟ್‌ ತರಿಸಬೇಕಾದ ಅಗತ್ಯವಿದ್ದಂತೆ ಕಾಣುತ್ತಿದೆ. ವೈದ್ಯರು ಇದನ್ನು ನಿರ್ಲಕ್ಷಿಸಿರುವುದು ಸರಿಯಲ್ಲ. ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಹೀಗಾದರೆ ರೋಗಿಗಳು ಆಸ್ಪತ್ರೆಗೆ ಬರುವುದು ಹೇಗೆ? ಈ ಬಗ್ಗೆ ಎಂಜಿನಿಯರ್‌ಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕ, ನಾಳೆಯೇ ಕಾಮಗಾರಿ ನಡೆಸುವಂತೆ ಸೂಚಿಸಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌, ಡಿಎಚ್‌ಒ ಡಾ| ರಾಮಕೃಷ್ಣ ರಾವ್‌, ಟಿಎಚ್‌ಒ ಡಾ| ಅಶೋಕ್‌ ಕುಮಾರ್‌, ಆಸ್ಪತ್ರೆ ವೈದ್ಯಾಧಿಕಾರಿ ಡಾ| ವೀಣಾ ಪಿ.ಎಸ್‌. ಮೊದಲಾದವರು ಉಪಸ್ಥಿತರಿದ್ದರು.

ವೈದ್ಯ, ಔಷಧ ಕೊರತೆ 
ಪುತ್ತೂರು ಸರಕಾರಿ ಆಸ್ಪತ್ರೆಯ ಓರ್ವ ವೈದ್ಯರನ್ನು ಉಪ್ಪಿನಂಗಡಿಗೆ ಕಳುಹಿಸಲಾಗಿದೆ. ಉಪ್ಪಿನಂಗಡಿಯಲ್ಲಿ ವೈದ್ಯರೇ ಇಲ್ಲದ ಕಾರಣ, ಈ ಅನಿವಾರ್ಯತೆ ಸೃಷ್ಟಿಯಾಯಿತು. ಇದು ತಾತ್ಕಾಲಿಕವಷ್ಟೇ. ವೈದ್ಯರ ನೇಮಕವಾದ ತಕ್ಷಣ ಈ ನಿಯೋಜನೆ ರದ್ದು ಮಾಡಲಾಗುವುದು. ಪುತ್ತೂರು ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಔಷಧಗಳ ದಾಸ್ತಾನು ಇಲ್ಲ. ಈ ಬಗ್ಗೆ ಸಂಸದರ ಜತೆ ಮಾತನಾಡಿ, ಅಗತ್ಯ ಔಷಧಿಗಳ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next