Advertisement

Puttur: ವೃದ್ಧರ ಮೃತದೇಹ ತೋಡಿನಲ್ಲಿ ಪತ್ತೆ; ಸಹೋದರಿಗೆ ಹಣ ನೀಡಲೆಂದು ಹೋಗಿದ್ದರು

11:32 PM Dec 06, 2024 | Team Udayavani |

ಪುತ್ತೂರು: ಸಹೋದರಿಗೆ ಹಣ ನೀಡಲೆಂದು ಗುರುವಾರ ಸಂಜೆ ತೆರಳಿ ಆ ಬಳಿಕ ನಾಪತ್ತೆಯಾಗಿದ್ದ ವೃದ್ಧರೋರ್ವರ ಮೃತದೇಹ ನಗರದ ರೋಟರಿಪುರ ಸಾಮೆತ್ತಡ್ಕ ಮಧ್ಯದ ತೋಡಿನಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Advertisement

ಪುತ್ತೂರು ಕಸ್ಬಾದ ಪಡ್ಡಾಯೂರು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಸಿಬಂದಿ ನಂದಕುಮಾರ್‌ (68) ಮೃತಪಟ್ಟವರು.

ನಂದಕುಮಾರ್‌ ಅವರು ಡಿ. 5ರಂದು ಸಂಜೆ ಪಡ್ಡಾಯೂರಿನ ಮನೆಯಿಂದ ಪುತ್ತೂರು ಪೇಟೆಯಲ್ಲಿರುವ ಸಹೋದರಿಗೆ ಹಣ ನೀಡಲೆಂದು ಬಂದಿದ್ದರು. ಸೊಸೈಟಿ ಯಿಂದ ಸುಮಾರು 1 ಅಥವಾ 1.5 ಲಕ್ಷ ರೂ. ಡ್ರಾ ಮಾಡಿಕೊಂಡು ಬಂದಿದ್ದರು ಎನ್ನಲಾಗಿದೆ. ಆಟೋ ರಿಕ್ಷಾದ ಮೂಲಕ ಪೇಟೆಗೆ ಬಂದಿದ್ದರು. ಟ್ರಾಫಿಕ್‌ ಠಾಣೆಯ ಹಿಂಬದಿಯ ಬ್ಯಾಂಕಿನ ಸಮೀಪದ ವೈನ್‌ ಸ್ಟೋರ್‌ಗೆ ಹೋಗಿ ಅಲ್ಲಿಂದ ಸುಶ್ರೂತ ಆಸ್ಪತ್ರೆ ಸಮೀಪ ಇರುವ ಸಹೋದರಿಯ ಮನೆಯತ್ತ ನಡೆದುಕೊಂಡು ಹೋಗಿದ್ದರು.

ತೋಡಿಗೆ ಬಿದ್ದ ಶಂಕೆ
ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರು ಭಾರತ್‌ ಬ್ಯಾಂಕ್‌ ಸಮೀಪ ಆಕಸ್ಮಿಕವಾಗಿ ತೋಡಿಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಡಿ. 5ರಂದು ಸಂಜೆ ಚರಂಡಿಯಲ್ಲಿ ಬೀಳುತ್ತಿರುವ ದೃಶ್ಯ ಬೊಳುವಾರು ಉರ್ಲಾಂಡಿ ರಸ್ತೆಯ ಮನೆಯೊಂದರ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದೆ. ಅನಂತರ ಏನಾಗಿದೆ ಎನ್ನುವ ಅಂಶ ತಿಳಿದುಬಂದಿಲ್ಲ. ಈ ಬಗ್ಗೆ ನಗರ ಠಾಣೆ ಪೊಲೀಸರ ಬಳಿ ಮಾಹಿತಿ ಕೇಳಿದಾಗ, ಮೃತ ನಂದಕುಮಾರ್‌ಅವರು ತೋಡಿಗೆ ಬಿದ್ದಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಗುರುವಾರ ಸಂಜೆ ಮಳೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಆ ಮಳೆ ನೀರಿಗೆ ಕೊಚ್ಚಿಕೊಂಡು ಸಾಮೆತಡ್ಕ ರೋಟರಿಪುರ ಬಳಿ
ಸಾಗಿರಬಹುದೆಂದು ಶಂಕಿಸಲಾಗಿದೆ.

ಹಿಂಬಾಲಿಸಿ ಕೊಲೆ?
ವೈನ್‌ ಸ್ಟೋರ್‌ನಲ್ಲಿ ಸಿಕ್ಕ ಪರಿಚಿತ ಗ್ರಾಹಕರ ಬಳಿ ಹಣ ನೀಡಲು ಸಹೋದರಿಯ ಮನೆಗೆ ಹೋಗುವುದಾಗಿ ಅವರು ತಿಳಿಸಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಅವರ ಬಳಿ ಹಣ ಇದೆ ಎಂದು ಯಾರದರೂ ಅವರನ್ನು ಹಿಂಬಾಲಿಸಿ ಕೊಲೆ ಮಾಡಿರಬಹುದೇ ಎನ್ನುವ ಪ್ರಶ್ನೆ ಮೂಡಿದೆ.

Advertisement

ಖಾಲಿ ಚೀಲ ಪತ್ತೆ; ಲಕ್ಷ ಹಣ ನಾಪತ್ತೆ!
ತೋಡಿಗೆ ಬೀಳುತ್ತಿದ್ದ ಸಂದರ್ಭದಲ್ಲಿ ನಂದಕುಮಾರ್‌ ಅವರ ಕೈ ಚೀಲದಲ್ಲಿ ಇದ್ದ ಹಣ ರಸ್ತೆಗೆ ಬಿದ್ದಿದೆ. ಆ ಹಣವನ್ನು ಯಾರೋ ಕೊಂಡು ಹೋಗಿರಬಹುದು ಎನ್ನುವ ಅನುಮಾನ ಪೊಲೀಸರದ್ದು. ಆದರೆ ಸಾರ್ವಜನಿಕರ ಪ್ರಕಾರ, ಹಣ ಇದ್ದ ಖಾಲಿ ಚೀಲ ಮಾತ್ರ ಸಿಕ್ಕಿದ್ದು, ಅದರಿಂದ ಹಣ ಮಾತ್ರ ಹೇಗೆ ಕಾಣೆಯಾಯಿತು ಎನ್ನುವುದು ಪ್ರಶ್ನಾರ್ಥಕವಾಗಿದೆ. ಇದು ಹಣಕೋಸ್ಕರ ನಡೆದ ಕೊಲೆಯೇ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಪೊಲೀಸರು ಮಾತ್ರ ಇದು ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ, ಕೊಲೆ ಅಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ನಂದ ಕುಮಾರ್‌ ಅವರು ಓಡಾಟಕ್ಕೆ ರಿಕ್ಷಾ ಬಳಸುತ್ತಿದ್ದು, ಗುರುವಾರ ಸಂಜೆ ನಡೆದುಕೊಂಡು ಏಕೆ ಹೋದರು ಎನ್ನುವ ಬಗ್ಗೆ ಅವರ ಪರಿಚಿತರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೃತದೇಹ ಕೊಚ್ಚಿ ಹೋಗುವಷ್ಟು ನೀರಿನ ವೇಗ ಇತ್ತೆ?
ವೃದ್ಧರು ಚರಂಡಿಗೆ ಬಿದ್ದು ಅಲ್ಲಿಂದ ಕಾಲುವೆ ಮೂಲಕ ಸಾಗಿ ಸುಮಾರು ಮೂರು ಕಿ.ಮೀ. ದೂರದ ಸಾಮತ್ತೆಡ್ಕ ರೋಟರಿಪುರ ತೋಡಿನ ತನಕ ಸಾಗುವಷ್ಟು ನೀರಿನ ಹರಿಯುವ ವೇಗ ಇತ್ತೇ ಎನ್ನುವ ಪ್ರಶ್ನೆ ಸ್ಥಳೀಯವಾಗಿ ಮೂಡಿದೆ. ಕೆಲವರ ಪ್ರಕಾರ ಚರಂಡಿಯಲ್ಲಿ ನೀರಿನ ಹರಿವಿತ್ತು ಎನ್ನುತ್ತಾರೆ. ಇನ್ನೂ ಕೆಲವರು ಚರಂಡಿ ನೀರಿನಲ್ಲಿ ಮೃತದೇಹ ಅಷ್ಟು ದೂರ ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next